ದಾವಣಗೆರೆ: ನಾನು ದಾವಣಗೆರೆ ಲೋಕಸಭೆ ಕ್ಷೇತ್ರದ ಟಿಕೆಟ್ ಆಕಾಂಕ್ಷಿ. ಹೊನ್ನಾಳಿ – ನ್ಯಾಮತಿ ಮಾತ್ರವಲ್ಲ, ಇದು ಜಿಲ್ಲೆಯ ಜನರ ಬಯಕೆ. ನಾನೇ ಅಭ್ಯರ್ಥಿ ಎಂದು ಟಾಂಟಾಂ ಹೊಡೆದಿಲ್ಲ. ಮಾಧ್ಯಮದವರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದೇನೆ. ಟಿಕೆಟ್ ಸಿಗದಿದ್ದರೆ ಮುಂದೆ ಯಾವ ನಿರ್ಣಯ ತೆಗೆದುಕೊಳ್ಳುತ್ತೇನೆ ಎಂದು ಈಗಲೇ ಹೇಳಲ್ಲ. ಮುಂದಿನ ದಿನಗಳಲ್ಲಿ ಚರ್ಚಿಸಿ ನಿರ್ಧಾರಕ್ಕೆ ಬರುತ್ತೇನೆ ಎಂದು ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ನಾನು ಈಗಲೂ ಬಿಜೆಪಿ ಕಟ್ಟಾಳು. ಬಿಜೆಪಿಯಲ್ಲಿದ್ದೇನೆ ಎಂಬುದಕ್ಕೆ ಎದೆಬಗೆದು ತೋರಿಸಬೇಕಾ..? ನನಗೆ ಬೆದರಿಕೆ ಕರೆ ಬಂದಾಗ ಯಾರೂ ಬೆಂಬಲ ನೀಡಲಿಲ್ಲ. ನನ್ನ ಸ್ವಂತ ಶಕ್ತಿ ಹಾಗೂ ಕ್ಷೇತ್ರದ ಜನರಿಂದ ಜಯ ಗಳಿಸಿದ್ದೇನೆ. ಇಡೀ ಜೀವನವೇ ಹಿಂದುತ್ವಕ್ಕಾಗಿ ಹೋರಾಡಿದ್ದೇನೆ. ಆರೋಪಗಳಿಗೆ ಈಗ ಉತ್ತರ ಕೊಡಲ್ಲ. ಕಾಲವೇ ಎಲ್ಲ ನಿರ್ಣಯ ಮಾಡುತ್ತದೆ.ದೇಶಕ್ಕೆ ಪ್ರಧಾನಿ ನರೇಂದ್ರ ಮೋದಿಯಂತೆ ರಾಜ್ಯಕ್ಕೆ ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ.ನಾನು ಸಿದ್ದೇಶ್ವರ ವಿರುದ್ಧ ಮಾತನಾಡಿಲ್ಲ. ನಾನೂ ಆಕಾಂಕ್ಷಿಯಿದ್ದೇನೆ ಎಂದಿದ್ದಾನೆ ಅಷ್ಟೇ ಎಂದರು.
ರೆಣುಕಾಚಾರ್ಯ ನಾಟ್ ರೀಚೆಬಲ್ ಆಗಿದ್ದಾರೆ ಎಂಬ ಸಿ.ಟಿ.ರವಿ ಹೇಳಿಕೆಗೆ ಕಿಡಿಕಾರಿರುವ ಎಂ.ಪಿ.ರೇಣುಕಾಚಾರ್ಯ, ನಾನು ಸಣ್ಣ ಮಗುವಲ್ಲ ಹೋರಾಟ ಮತ್ತು ಸಂಘಟನೆಯಿಂದ ಬಂದವನು.ಮಾಜಿ ಶಾಸಕ ಸಿ.ಟಿ.ರವಿ ಮಾತನಾಡುವ ಮುನ್ನ ವಿಚಾರ ಮಾಡಲಿ ಎಂದು ತಿರುಗೇಟು ನೀಡಿದ್ದಾರೆ.
ನಾನು ಮಾಜಿ ಸಿಎಂ ಯಡಿಯೂರಪ್ಪನವರ ಆಶ್ರಯದಲ್ಲಿ ಬೆಳೆದವನು. ಭಾರತೀಯ ಜನತಾ ಪಕ್ಷದ ಕಟ್ಟಾಳು. ನಿನ್ನೆ ಮೊನ್ನೆ ಬಂದವರು ಮಾತನಾಡುವುದು ಸರಿಯಲ್ಲ ಎಂದಿದ್ದಾರೆ. ಇದೇ ವೇಳೆ ಪರಿಷತ್ ಸದಸ್ಯ ನವೀನ್ ವಿರುದ್ಧವೂ ಕಿಡಿಕಾರಿದ ರೇಣುಕಾಚಾರ್ಯ, ಯಾರೋ ಈಗ ಬಂದು ಹೇಳಿಕೆ ನೀಡಿದರೆ ಸುಮ್ಮನಿರಲ್ಲ ಎಂದರು.



