ದಾವಣಗೆರೆ: ಜಿಲ್ಲಾ ಕಾಂಗ್ರೆಸ್ ನಾಯಕರು ಬಿಜೆಪಿ ನಾಯಕರ ಜೊತೆ ಒಳ ಒಪ್ಪಂದ ಬಗ್ಗೆ ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜ್ ಸಿಎಂ, ಡಿಸಿಎಂಗೆ ಪತ್ರ ಬರೆದು, ಜಿಲ್ಲಾ ಉಸ್ತುವಾರಿ ಬದಲಾವಣೆ ಆಗ್ರಹಿದ್ದಾರೆ. ಹೀಗಾಗಿ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಬಿಜೆಪಿಯ ಯಾರ ಜೊತೆ ಒಳ ಒಪ್ಪಂದ ಮಾಡಿಕೊಂಡಿದ್ದರು ಎಂಬುದನ್ನು ಶಾಸಕ ಶಿವಗಂಗಾ ಬಸವರಾಜ್ ಬಹಿರಂಗಪಡಿಸಬೇಕು ಎಂದು ದೂಡಾ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್ ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿ ನಾಯಕರು ಹಾಗೂ ಎಸ್. ಎಸ್. ಮಲ್ಲಿಕಾರ್ಜುನ್ ನಡುವೆ ಹೊಂದಾಣಿಕೆ ರಾಜಕೀಯವಿದೆ ಎಂದು ಶಿವಗಂಗಾ ಬಸವರಾಜ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಕಾಂಗ್ರೆಸ್ ಶಾಸಕರೇ ಆ ಪಕ್ಷದ ಒಳಪ್ಪಂದವನ್ನು ಖಂಡಿಸಿ ಧೈರ್ಯವಾಗಿ ಮಾತನಾಡಿರುವುದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ.
ಕಾಂಗ್ರೆಸ್ ಆರೋಪದಿಂದ ಬಿಜೆಪಿಯ ಪ್ರತಿಯೊಬ್ಬ ಕಾರ್ಯಕರ್ತರನ್ನು ಜನ ಅನುಮಾನದಿಂದ ನೋಡುವ ಹಾಗೆ ಮಾಡುವುದು ಬೇಡ. ಜಿಲ್ಲಾ ಉಸ್ತುವಾರಿಗಳು ಬಿಜೆಪಿಯ ಯಾವ ನಾಯಕರ ಜತೆ ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಎಂಬುದು ಚನ್ನಗಿರಿ ಶಾಸಕರಿಗೆ ಸ್ಪಷ್ಟವಾಗಿ ಗೊತ್ತಿದೆ. ಹೀಗಾಗಿ ಕೂಡಲೇ ಹೆಸರು ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದರು.
ಪಕ್ಷದ ತತ್ವ ಸಿದ್ಧಾಂತವನ್ನು ಬಲಿಕೊಟ್ಟವರ ನಿಜ ಬಣ್ಣವನ್ನ ಬಯಲು ಮಾಡಿ ಸಾರ್ವಜನಿಕವಾಗಿ ತಿಳಿಸಿ ಶಾಶ್ವತವಾಗಿ ಮನೆಗೆ ಕಳಿಸಬೇಕಿದೆ ಎಂದರು. ಈ ಸಂಸರ್ಭದಲ್ಲಿ ಅಣಬೇರು ಜೀವನಮೂರ್ತಿ, ಎ. ವೈ. ಪ್ರಕಾಶ್, ನೀಲಗುಂದ ರಾಜು, ಗೋವಿಂದರಾಜ್, ಟಿಂಕರ್ ಮಂಜಣ್ಣ, ಶಿವನಗೌಡ ಟಿ ಪಾಟೀಲ್, ಗುರು ಸೋಗಿ ಇದ್ದರು.