ದಾವಣಗೆರೆ: ಇತ್ತೀಚೆಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ ಬದಲಾವಣೆಗೆ ಆಗ್ರಹಿಸಿ ಸಿಎಂ, ಡಿಸಿಎಂಗೆ ಪತ್ರ ಬರೆದಿರುವುದಾಗಿ ಹೇಳಿಕೆ ನೀಡಿದ ಚನ್ನಗಿರಿ ಶಾಸಕ ಬಸವರಾಜ್ ಶಿವಗಂಗಾ ಹೆಸರು ಉಲ್ಲೇಖಿಸದೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಕಿಡಿಕಾರಿದರು. ಸ್ವಪಕ್ಷ ವಿರುದ್ದ ಕಿಡಿಕಾರಿದ್ದ ಶಾಸಕರ ಈ ಹೇಳಿಕೆ ಜಿಲ್ಲಾ ರಾಜಕಾರಣದಲ್ಲಿ ಭಾರೀ ಸಂಚಲನ ಸೃಷ್ಠಿಸಿತ್ತು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಮಲ್ಲಿಕಾರ್ಜುನ್ ಅವರಿಗೆ ಜನಸೇವೆ ಮಾಡಲು ಅಧಿಕಾರದ ಅವಶ್ಯಕತೆ ಇಲ್ಲ. ಅವರ ಬಗ್ಗೆ ಮಾತನಾಡಿರುವವರು ಯಾವ ಉದ್ದೇಶ , ಯಾವ ದೊಡ್ಡಸ್ತಿಕೆಗೆ ಮಾತನಾಡಿದ್ದರೋ ಗೊತ್ತಿಲ್ಲ ಎಂದರು.
ಎಸ್.ಎಸ್.ಮಲ್ಲಿಕಾರ್ಜನ್ ಶಾಸಕ, ಸಚಿವರಾಗಿ ದಾವಣಗೆರೆ ಜಿಲ್ಲೆಯ ಅಭಿವೃದ್ಧಿ ಮಾಡಿದ್ದನ್ನು ಎಲ್ಲರೂ ನೋಡಿದ್ದಾರೆ. ಅವರ ಬಗ್ಗೆ ಮಾತನಾಡಿರುವವರು ಯಾವ ಉದ್ದೇಶ ಇಟ್ಟುಕೊಂಡು, ಯಾವ ದೊಡ್ಡಸ್ತಿಕೆಗೆ ಮಾತನಾಡಿದ್ದಾರೆ ಎನ್ನುವ ಬಗ್ಗೆ ಕ್ಷೇತ್ರದ ಜನಕ್ಕೆ ಗೊತ್ತಿದೆ.ಕೋವಿಡ್ ಸಮಯದಲ್ಲಿ ಹಗಲು-ರಾತ್ರಿ ಎನ್ನದೆ ಕೆಲಸ ಮಾಡಿದ್ದಾರೆ. ಎಷ್ಟೋ ಜನಕ್ಕೆ ಆಸ್ಪತ್ರೆ ಬಿಲ್ ಪಡೆದಿಲ್ಲ. ಇಂತಹ ನಾಯಕನ ಬಗ್ಗೆ ಮಾತನಾಡಲು ಯಾವ ರೀತಿಯ ಹಕ್ಕಿದೆ ಎನ್ನುವುದನ್ನು ಅವರನ್ನೇ ಕೇಳಬೇಕಿದೆ ಎಂದರು.
ಅವರು ಯಾವ ಮಲ್ಲಿಕಾರ್ಜುನ್ ಬಗ್ಗೆ ಮಾತನಾಡಿದ್ದಾರೋ ಗೊತ್ತಿಲ್ಲ. ಕೆಲ ಅಧಿಕಾರಿಗಳ ವರ್ಗಾವಣೆಯ ಬಗ್ಗೆ ಆರೋಪ ಮಾಡಿದವರಿಗೆ ಅಧಿಕಾರಿಗಳ ಬಗ್ಗೆ ವೈಯಕ್ತಿಕ ಹಿತಾಸಕ್ತಿ ಏನಿದೆ ಎನ್ನುವುದನ್ನು ಅವರನ್ನೇ ಕೇಳಬೇಕು. ರಾಜಕೀಯ ಅಂದಾಗ ಅವಕಾಶವಾದಿತನ ಇರುತ್ತೆ. ಆದರೆ ಮಲ್ಲಿಕಾರ್ಜುನ್ ಅಧಿಕಾರದಲ್ಲಿ ಇರಲಿ. ಇಲ್ಲದಿರಲಿ ಜನಸೇವೆ ಮಾಡಬೇಕೆಂದು ನಿಂತಿರುವವರು. ಅವರಿಗೆ ಜನ ಸೇವೆ ಮಾಡಲುಅ ಧಿಕಾರದ ಅವಶ್ಯಕತೆ ಇಲ್ಲ. ನಮಗೆ ಜನಸೇವೆ ಮಾಡಬೇಕೆಂಬ ಬದ್ಧತೆ ಇದೆ. ಅದನ್ನು ಮತ್ತೊಬ್ಬರಿಂದ ಕಲಿಯುವ ಅವಶ್ಯಕತೆ ಇಲ್ಲ ಎಂದು ತಿರುಗೇಟು ನೀಡಿದರು.
ಪಕ್ಷದ ಜಿಲ್ಲಾಧ್ಯಕ್ಷ ಎಚ್.ಬಿ.ಮಂಜಪ್ಪ ಮಾತನಾಡಿ, ಶಾಸಕರ ಈ ವರ್ತನೆ ಕುರಿತು ಪಕ್ಷದ ರಾಜ್ಯಾಧ್ಯಕ್ಷರಿಗೆ ಮೌಖಿಕವಾಗಿ ತಿಳಿಸಲಾಗಿದೆ. ಈ ಬಗ್ಗೆ ಯಾವುದೇ ಪತ್ರ ಬರೆದಿಲ್ಲ ಎಂದರು.



