ಬೆಳಗಾವಿ: ನನ್ನ ರಾಜಕೀಯ ಇವತ್ತೇ ಹೋಗಲಿ. ರಾಜೀನಾಮೆಗೂ ಸಿದ್ಧ. ನಾನೇನೂ ತಲೆಕೆಡಿಸಿಕೊಳ್ಳುವುದಿಲ್ಲ. ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್‌ಎಸ್. ಮಲ್ಲಿಕಾರ್ಜುನ್ ಅವರಿಗೆ ಪಕ್ಷ, ಶಾಸಕರು ಬೇಕಿಲ್ಲ. ತಮ್ಮ ಮನೆ ಬೇಳೆ ಬೇಯಬೇಕು ಅಷ್ಟೇ ಮುಖ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿರುದ್ಧ ಚನ್ನಗಿರಿ ಶಾಸಕ ಶಾಸಕ ಶಿವಗಂಗಾ ವಿ. ಬಸವರಾಜ್ ಅಸಮಾಧಾನ ಹೊರ ಹಾಕಿದ್ದಾರೆ.
ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರ ಬದಲಾವಣೆ ಬಗ್ಗೆ ಸಿಎಂ, ಡಿಸಿಎಂ ಗೆ ಪತ್ರ ಬರೆದು ಕಿಡಿಕಾರಿದ್ದ ಹೊರ ಶಾಸಕ ಶಿವಗಂಗಾ ವಿ. ಬಸವರಾಜ್ ಬೆಳಗಾವಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ರಾಜಕೀಯದಲ್ಲಿ ಬಕೆಟ್ ರಾಜಕಾರಣ ಮಾಡುವುದಿಲ್ಲ. ಹಿಂದೆಯೂ ಮಾಡಿಲ್ಲ, ಮುಂದೆಯೂ ಮಾಡಲ್ಲ. ನನ್ನ ರಾಜಕೀಯ ಇವತ್ತೇ ಹೋಗಲಿ.ನಾನೇನೂ ತಲೆಕೆಡಿಸಿಕೊಳ್ಳುವುದಿಲ್ಲ ಬ್ಯುಸಿನೆಸ್ ಮಾಡ್ಕೊಂಡು ಆರಾಮಗಿ ಇರ್ತಿನಿ ಎಂದರು.
ಜಿಲ್ಲಾ ಉಸ್ತುವಾರಿ ಸಚಿವರಿಗೆ ತಮ್ಮ ಮನೆ ಬೇಳೆ ಬೇಯಿಸಿಕೊಳ್ಳಲು ಏನಾದರೂ ಮಾಡುತ್ತಾರೆ. ಅವರಿಗೆ ಪಕ್ಷನೂ ಬೇಕಿಲ್ಲ. ಶಾಸಕರೂ ಬೇಕಿಲ್ಲ. ಅವಶ್ಯಕತೆನೂ ಇಲ್ಲ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಎಲ್ಲವನ್ನೂ ಸಹಿಸಿಕೊಂಡು ಮುನ್ನಡೆಯುತ್ತಿದ್ದೇವೆ. ಎಷ್ಟು ದಿನ ಅಂತಾ ಸಹಿಸಿಕೊಳ್ಳಲು ಸಾಧ್ಯ ಎಂದು ಕಿಡಿಕಾರಿದರು.
ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ನಾನು ಮಾತನಾಡಿದ್ದು ಆಯಿತು, ಹೇಳಿದ್ದೂ ಆಯಿತು. ಸರಿಹೋಗಿಲ್ಲ. ಉದಾಹರಣೆಗೆ ಹೊನ್ನಾಳಿ ಶಾಸಕ ಶಾಂತನಗೌಡರು ಮೂರು ಬಾರಿ ಶಾಸಕರಾಗಿದ್ದಾರೆ. ಕನಿಷ್ಠ ಅವರನ್ನು ಯಾವುದೇ ನಿಗಮಕ್ಜೆ ಚೇರ್ಮನ್ ಮಾಡಿಲ್ಲ, ಸಚಿವರನ್ನಾಗಿಯೂ ಮಾಡಿಲ್ಲ. ಶಾಂತನಗೌಡರ ಪುತ್ರ ಡಿಸಿಸಿ ಬ್ಯಾಂಕ್ ನಿರ್ದೇಶಕರು. ಅವರು ಅಪೆಕ್ಸ್ ಹೋಗುವ ಅರ್ಹತೆ ಇಲ್ವಾ. ಅಪೆಕ್ಸ್ ಗೆ ನೇಮಕ ಮಾಡಬಹುದಿತ್ತು. ಅಲ್ಲಿಯೂ ತಪ್ಪಿಸಿದರು. ಅಪೆಕ್ಸ್ ಬ್ಯಾಂಕ್ ನಲ್ಲಿ ಸ್ವಾಮಿ ಎಂಬಾತ ಇದ್ದ. ಆತನನ್ನು ಮುಂದುವರಿಸಿದ್ದಾರೆ. ಹಾಗಿದ್ದರೆ ಕಾಂಗ್ರೆಸ್ ನಲ್ಲಿ ಗಂಡಸರು ಇಲ್ವಾ? ಪ್ರಶ್ನಿಸಿದ್ದಾರೆ.
ಚನ್ನಗಿರಿಯಲ್ಲಿ ಡಿಸಿಸಿ ಬ್ಯಾಂಕ್ ನ ನಿರ್ದೇಶಕ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಸೋಲಲು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಕಾರಣ. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ವಿರುದ್ಧ ಸ್ಪರ್ಧೆ ಮಾಡಿದ್ದ ಅಭ್ಯರ್ಥಿಯನ್ನು ಗೆಲ್ಲಿಸಿದ್ದಾರೆ. ಚುನಾವಣೆ ಎಂದ ಮೇಲೆ ಸೋಲು ಗೆಲುವು ಸಹಜ. ಸೋಲು ನಾವು ಒಪ್ಪಿಕೊಳ್ಳುತ್ತೇವೆ. ನಮ್ಮವರಿಂದಲೇ ಸೋತರೆ ನಮಗೆ ಹೇಗೆ ಆಗಬಾರದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದ್ದಾರೆ.
ನಾನು ದಾವಣಗೆರೆ ಜಿಲ್ಲೆಯಲ್ಲಿ ಸಚಿವರು ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡು ರಾಜಕೀಯ ಮಾಡುತ್ತಿರುವ ಕುರಿತಂತೆ ಸಿಎಂ, ಡಿಸಿಎಂ ಗಮನಕ್ಕೆ ತಂದಿದ್ದೇನೆ. ಸಿಎಂ ಸಿದ್ದರಾಮಯ್ಯ ಅವರು ನಮ್ಮ ಪತ್ರಕ್ಕೆ ಬೆಲೆ ನೀಡುತ್ತಾರೆ ಎಂಬ ವಿಶ್ವಾಸ ಇದೆ. ನಮ್ಮದು ಬಿಸಿರಕ್ತ. ಏನು ನಡೆಯುತ್ತೋ ಅದನ್ನೇ ಹೇಳುತ್ತೇವೆ. ಬಕೆಟ್ ಹಿಡಿಯುವ ರಾಜಕಾರಣ ಮಾಡಲ್ಲ. ಜಿಲ್ಲಾ ಉಸ್ತುವಾರಿ ಸಚಿವರ ನಡೆ ಬಗ್ಗೆ ಪತ್ರ ಬರೆಯಲೇಬೇಕಿತ್ತು, ಬರೆದಿದ್ದೇನೆ ಎಂದು ತಿಳಿಸಿದರು.