ದಾವಣಗೆರೆ: ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ಮತ್ತು ಸ್ವಜನಪಕ್ಷಪಾತದಲ್ಲಿ ತೊಡಗಿದೆ. ಸಾಚಾ ಎಂದು ಹೇಳಿಕೊಳ್ಳುತಿದ್ದವರು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಮುಡಾ, ವಾಲ್ಮೀಕಿ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಸ್ವಚ್ಛ ಇರುವದನ್ನು ಸಾಬೀತು ಪಡಿಸಬೇಕು. ಸರಕಾರದ ಖಜಾನೆಯಿಂದ ಹಣ ಬಿಡುಗಡೆಯಾಗಿದೆ. ಹೀಗಾಗಿ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು ಸಂಸದ ಗೋವಿಂದ ಕಾರಜೋಳ ಅಗ್ರಹಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಎಂದರೆ ಹಗರಣಗಳ ಸರಮಾಲೆ. ಸ್ವಾತಂತ್ರ್ಯ ನಂತರ ಆಡಳಿತ ಮಾಡಿದ ಕಾಂಗ್ರೆಸ್ ನಲ್ಲಿ ಅನೇಕರು ಹಗರಣ ಮಾಡಿ ಜೈಲು ಸೇರಿದ್ದಾರೆ. ಕೆಲವರು ಜಾಮೀನು ಮೇಲೆ ಹೊರಗಿದ್ದಾರೆ. ಸರ್ಕಾರದಿಂದ ಬ್ಯಾಂಕ್ ದರೋಡೆಯಾಗಿದ್ದು ಕರ್ನಾಟಕ ಇತಿಹಾಸದಲ್ಲಿ ಈ ಹಿಂದೆ ಎಂದೂ ಆಗಿರಲಿಲ್ಲ. ಬ್ಯಾಂಕ್ ದರೋಡೆಯಲ್ಲಿ ಸರ್ಕಾರದ ಸಚಿವರೇ ಭಾಗಿಯಾಗಿದ್ದು ನಾಚಿಕೆಗೇಡಿನ ಸಂಗತಿ ಎಂದರು.
ರಾಷ್ಟ್ರೀಕೃತ ಬ್ಯಾಂಕ್ ಇರುವುದರಿಂದ ಇಡಿಯವರು ತನಿಖೆ ಮಾಡುತ್ತಿದ್ದಾರೆ. ತನಿಖೆಯಲ್ಲಿ ಮೇಲ್ನೋಟಕ್ಕೆ ಕಂಡು ಬರುತ್ತಿರುವವರನ್ನು ಬಂಧನ ಮಾಡುತ್ತಿದ್ದಾರೆ ಎಂದರು.



