ದಾವಣಗೆರೆ: ಕಾಂಗ್ರೆಸ್ ಟಿಕೆಟ್ ಕೈ ತಪ್ಪಿದ್ದಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಬಿ.ಜಿ. ವಿನಯ್ ಕುಮಾರ್ ಮನವೊಲಿಕೆಗೆ ಮಾಜಿ ಸಚಿವ ಎಚ್.ಎಂ. ರೇವಣ್ಣ ನೇತೃತ್ವದ ನಿಯೋಗ ಯತ್ನ ವಿಫಲವಾಗಿದೆ.
ಇಂದು (ಏ.14) ಎಸ್. ಎಸ್. ಬಡಾವಣೆಯಲ್ಲಿರುವ ವಿನಯ್ ಕುಮಾರ್ ನಿವಾಸಕ್ಕೆ ಭೇಟಿ ನೀಡಿದ ಎಚ್.ಎಂ.ರೇವಣ್ಣ, ವಿಧಾನ ಪರಿಷತ್ ಸದಸ್ಯ ಕೆ.ಅಬ್ದುಲ್ ಜಬ್ಬಾರ್ ಸೇರಿ ಇತರೆ ಮುಖಂಡರು ನಾಮಪತ್ರ ಹಿಂದಕ್ಕೆ ಪಡೆಯುವಂತೆ ಮನವೊಲಿಸಲು ಸಾಕಷ್ಟು ಯತ್ನ ನಡೆಸಿದರು. ಆದರೆ, ನಾಮಪತ್ರ ಹಿಂಪಡೆಯಲು ಒಪ್ಪಲಿಲ್ಲ.
ಈ ಬಗ್ಗೆ ಮಾತನಾಡಿದ ವಿನಯ್ ಕುಮಾರ್, ನನ್ನ ಸ್ಪರ್ಧೆಯನ್ನು ಗಂಭೀರವಾಗಿ ಪರಿಗಣಿಸಿರುವುದು ಸಂತೋಷದ ವಿಚಾರ. ದಾವಣಗೆರೆ ಲೋಕಸಭಾ ಕ್ಷೇತ್ರದ ಜನರ ಒತ್ತಾತದಿಂದ ಸ್ಪರ್ಧೆ ನಿರ್ಧಾರ ಮಾಡಿದ್ದೇನೆ. ಹೀಗಾಗಿ ಕಣದಿಂದ ಹಿಂದೆ ಸರಿಯುವ ಪ್ರಶ್ನೆ ಉದ್ಭವಿಸಲ್ಲ ಎಂದು ಸ್ಪಷ್ಟಪಡಿಸಿದರು. ಇದಕ್ಕೂ ಮೊದಲು ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ಸಮ್ಮುಖದಲ್ಲಿಯೂ ನಾಮಪತ್ರ ಹಿಂಪಡೆಯುವಂತೆ ವಿನಯಕುಮಾರ್ ಅವರ ಮನವೊಲಿಸುವ ಯತ್ನ ನಡೆಸಲಾಗಿತ್ತು. ಈಗ ಸಂಧಾನ ಕೂಡ ವಿಫಲವಾಗಿದೆ.



