ದಾವಣಗೆರೆ: ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ದಾವಣಗೆರೆ ಉತ್ತರ ಕ್ಷೇತ್ರದಿಂದ ಸ್ಪರ್ಧೆ ಮಾಡುವುದಿಲ್ಲ. ಆರೋಗ್ಯ ಸರಿ ಇಲ್ಲದ ಕಾರಣ ನಾನೇ ಕಣದಿಂದ ಹಿಂದೆ ಸರಿದಿದ್ದೇನೆ. ಈ ಬಗ್ಗೆ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ತಿಳಿಸಿದ್ದೇನೆ. ವಯಸ್ಸಿನ ಕಾರಣಕ್ಕೆ ಟಿಕೆಟ್ ನಿರಾಕರಿಸಿಲ್ಲ ಎಂದು ಮಾಜಿ ಸಚಿವ ಎಸ್.ಎ. ರವೀಂದ್ರನಾಥ್ ಹೇಳಿದರು.
ನಗರದ ಹೊರ ವಲಯದ ಶಿರಮಗೊಂಡನಹಳ್ಳಿಯ ಮಾತನಾಡಿ, ನಾನು ಸ್ಪರ್ಧೆ ಮಾಡುವುದಿಲ್ಲ ಎಂದು ಹೇಳಿದ ಮೇಲೆ ಆಕಾಂಕ್ಷಿಗಳು ಹೆಚ್ಚಾಗಿದ್ದಾರೆ. ಈ ಕ್ಷೇತ್ರದಲ್ಲಜ ಬಿಜೆಪಿಯಿಂದ ಐವರು ಆಕಾಂಕ್ಷಿಗಳಿದ್ದಾರೆ. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಗದೀಶ್, ಮಹಾನಗರ ಪಾಲಿಕೆ ಮಾಜಿ ಮೇಯರ್ ಎಸ್. ಟಿ.ವೀರೇಶ್, ಬಿಜೆಪಿ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಲೋಕಿಕೆರೆ ನಾಗರಾಜ, ಬಿಜೆಪಿ ಮಾಜಿ ಅಧ್ಯಕ್ಷ ಜೀವನಮೂರ್ತಿ ಹಾಗೂ ಧನಂಜಯ ಎಂದು ತಿಳಿಸಿದರು.
ಪಕ್ಷದ ವರಿಷ್ಠರು ಚುನಾವಣೆಗೆ ನಿಲ್ಲುವುದಿಲ್ಲ ಎಂಬುದಾಗಿ ಎಲ್ಲಿಯೂ ಹೇಳಬೇಡಿ ಎಂಬ ಸೂಚನೆ ನೀಡಿದ್ದರು. ಈ ಕಾರಣದಿಂದ ಬಹಿರಂಗವಾಗಿ ನಾನು ಎಲ್ಲಿಯೂ ಸ್ಪರ್ಧೆ ಮಾಡುವುದಿಲ್ಲ ಅಂತಾ ಹೇಳಿರಲಿಲ್ಲ. ಇದೀಗ ಸ್ಪಷ್ಟವಾಗಿ ತಿಳಿಸಿಬಂದಿದ್ದೇನೆ.ದಾವಣಗೆರೆ ಉತ್ತರ, ಚನ್ನಗಿರಿಯಿಂದ ಸಿಎಂ ಸ್ಪರ್ಧೆ ಮಾಡುವುದಿಲ್ಲ. ಕೇವಲ ವದಂತಿ ಅಷ್ಟೇ. ಬಸವರಾಜ ಬೊಮ್ಮಾಯಿ ಶಿಗ್ಗಾಂವಿಯಲ್ಲಿ ಸ್ಪರ್ಧೆ ಮಾಡುತ್ತಾರೆ. ಒಂದೇ ಜಾತಿಯಿಂದ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಿಲ್ಲ. ಎಲ್ಲಾ ಸಮುದಾಯಗಳ ಸಹಕಾರ ಬೇಕು ಎಂದರು.
ಶರಾವತಿ ಕರ್ಮಕಾಂಡ ಎಂಬ ಆರೋಪ ನಿಜಲಿಂಗಪ್ಪ ಅವರ ಮೇಲೆ ಆರೋಪ ಕೇಳಿಬಂದಿತ್ತು. ಪತ್ರಿಕೆಗಳಲ್ಲಿ ಇದು ನಿತ್ಯವೂ ಪ್ರಕಟವಾಗುತಿತ್ತು. ಆದರೂ ನಂತರ ನಡೆದ ಚುನಾವಣೆಯಲ್ಲಿ ನಿಜಲಿಂಗಪ್ಪ ಗೆಲುವು ಸಾಧಿಸಿದ್ದರು. ಬಾಲ್ ಅನ್ನು ಎಷ್ಟು ಜೋರಾಗಿ ಎಸೆಯುತ್ತೇವೆಯೋ ಅದು ಅಷ್ಟೇ ವೇಗವಾಗಿ ವಾಪಸ್ ಬರುತ್ತದೆ ಎಂದು ಹೇಳಿದರು.
ರಾಜಕಾರಣದಲ್ಲಿ ನೋವು ಸಹಜ. ಬಹಿರಂಗವಾಗಿ ಹೇಳಲು ಆಗುವುದಿಲ್ಲ. 50 ವರ್ಷಗಳ ರಾಜಕಾರಣದಲ್ಲಿ ಎಲ್ಲ ಕಂಡಿದ್ದೇನೆ. ಮಾಡಾಳ್ ವಿರೂಪಾಕ್ಷಪ್ಪ ಹಾಗೂ ಅವರ ಪುತ್ರನಿಗೆ ಟಿಕೆಟ್ ನೀಡುವ ಸಂಬಂಧ ಯಾವುದೇ ಚರ್ಚೆಯಾಗಿಲ್ಲ. ಯಾರಿಗೇ ಟಿಕೆಟ್ ಕೊಟ್ಟರೂ ಗೆಲುವಿಗೆ ನಾವೆಲ್ಲರೂ ಪ್ರಾಮಾಣಿಕವಾಗಿ ಶ್ರಮಿಸುತ್ತೇವೆ. ಪಕ್ಷ ಕೊಟ್ಟ ಜವಾಬ್ದಾರಿಯನ್ನು ನಿರ್ವಹಿಸುತ್ತೇವೆ ಎಂದರು.



