ದಾವಣಗೆರೆ: ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಪ್ರಭಾ ಮಲ್ಲಿಕಾರ್ಜುನ ಘೋಷಣೆಯಾಗಿದ್ದು, ಅವರು ಈಗಾಗಲೇ ಕ್ಷೇತ್ರದಲ್ಲಿ ಪ್ರಚಾರ ಆರಂಭಿಸಿದ್ದಾರೆ. ಆದರೆ, ಜಿಲ್ಲಾ ಕಾಂಗ್ರೆಸ್ ನಲ್ಲಿ ಬಂಡಾಯ ಬಿಸಿ ನಿಂತಿಲ್ಲ. ಕಾಂಗ್ರೆಸ್ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಘೋಷಣೆ ಮಾಡಿದ ಯುವ ನಾಯಕ ವಿನಯ್ ಕುಮಾರ್ ಅವರನ್ನು ಸಿಎಂ ಸಿದ್ದರಾಮಯ್ಯ ಇಂದು ಬೆಂಗಳೂರಿಗೆ ಕರೆಸಿ ಸಂಧಾನ ಸಭೆ ಮಾಡಿದ್ದರು. ಇನ್ನೇನು ಬಂಡಾಯ ಶಮನವವಾಯ್ತು ಎನ್ನುವಾಗಲೇ ವಿಡಿಯೋ ಸಂದೇಶದಲ್ಲಿ ವಿನಯ್ ಕುಮಾರ್, ಬಂಡಾಯ ಸ್ಫರ್ಧೆ ನಿರ್ಧಾರದಿಂದ ಹಿಂದೆ ಸರಿದಿಲ್ಲ. ಈ ಬಗ್ಗೆ ಎರಡು ದಿನದಲ್ಲಿ ಅಂತಿಮ ನಿರ್ಧಾರ ತಿಳಿಸುವುದಾಗಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್, ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್, ಕಾಗಿನೆಲೆ ಮಹಾಸಂಸ್ಥಾನದ ಪೀಠಾಧ್ಯಕ್ಷ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಜೊತೆ ವಿನಯ್ ಕುಮಾರ್ ಭೇಟಿ ಮಾಢಿದ್ದರು. ಈ ಭೇಟಿ ಬಳಿಕ ವಿಡಿಯೋ ಬಿಡುಗಡೆ ಮಾಡಿರುವ ವಿನಯ್ ಕುಮಾರ್ ಅವರು, ಕೆಲವೆಡೆ ಈಗಾಗಲೇ ದಾವಣಗೆರೆ ಜಿಲ್ಲೆಯ ಕಾಂಗ್ರೆಸ್ ನ ಬಂಡಾಯ ಶಮನವಾಗಿದೆ, ವಿನಯ್ ಕುಮಾರ್ ಪಕ್ಷೇತರ ಸ್ಪರ್ಧೆ ಮಾಡುವುದಿಲ್ಲ ಸುದ್ದಿ ಹರಡುತ್ತಿದೆ. ಸದ್ಯ ಸ್ಫರ್ಧೆ ನಿರ್ಧಾರದಿಂದ ಹಿಂದೆ ಸರಿಯುವ ತೀರ್ಮಾನ ಆಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರನ್ನು ಸೌದಾರ್ದಯುತ, ಸೌಜನ್ಯಯುತವಾಗಿ ಭೇಟಿಯಾಗಿದ್ದೇನೆ. ಈ ವೇಳೆ ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ಪಕ್ಷೇತರನಾಗಿ ಕಣಕ್ಕಿಳಿದರೆ ಗೆಲ್ಲುವ ಸಾಧ್ಯತೆ ಇದೆ ಎಂಬ ವಿಚಾರವನ್ನು ಸಿದ್ದರಾಮಯ್ಯ ಅವರಿಗೆ ಮನವರಿಕೆ ಮಾಡಿಕೊಟ್ಟೆ. ನಿಮ್ಮನ್ನು ಬೆಳೆಸುತ್ತೇವೆ ಎಂಬ ಭರವಸೆ ನೀಡಿದ್ದಾರೆ. ಇನ್ನು ವಯಸ್ಸಿದೆ. ಈಗಲೇ ದುಡುಕಬೇಡ, ಯೋಚನೆ ಮಾಡು ಎಂದು ಹೇಳಿದ್ದಾರೆ.
ದಾವಣಗೆರೆ ರಾಜಕೀಯ ಪರಿಸ್ಥಿತಿಯಲ್ಲಿ ಲಕ್ಷಾಂತರ ಜನರು ನಾನು ಪಕ್ಷೇತರನಾಗಿ ಕಣಕ್ಕಿಳಿಯಬೇಕೆಂದು ಅಪೇಕ್ಷೆಪಡುತ್ತಿದ್ದಾರೆ. ನಾನು ಈ ಬಗ್ಗೆ ಇನ್ನೂ ನಿರ್ಧಾರ ತೆಗೆದುಕೊಂಡಿಲ್ಲ. ಜನಾಭಿಪ್ರಾಯ ಸಂಗ್ರಹ ಮಾಡುವುದು ಬಾಕಿ ಇದೆ. ಮಾಯಕೊಂಡ, ದಾವಣಗೆರೆ ಉತ್ತರ ಕ್ಷೇತ್ರದಲ್ಲಿನ ಜನರು, ಮತದಾರರ ಅಭಿಪ್ರಾಯ ಸಂಗ್ರಹ ಮಾಡಬೇಕಿದೆ. ಇದಾದ ಬಳಿಕ ನಾನೇ ಎರಡು ದಿನದಲ್ಲಿ ಪತ್ರಿಕಾಗೋಷ್ಠಿ ಕರೆದು ಅಂತಿಮ ನಿರ್ಧಾರ ತಿಳಿಸುತ್ತೇನೆ. ದಯವಿಟ್ಟು ಬಂಡಾಯ ಶಮನವಾಯ್ತು, ನನ್ನ ಪಕ್ಷೇತರ ಸ್ಪರ್ಧೆ ಬಯಕೆ ಶಮನವಾಯ್ತು ಎಂದುಕೊಳ್ಳಬೇಡಿ. ನಾನು ಬರುತ್ತೇನೆ, ನಿಮ್ಮನ್ನು ಕಾಣುತ್ತೇನೆ ಎಂದು ವಿಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ.



