ದಾವಣಗೆರೆ: ಸರ್ಕಾರದಲ್ಲಿ ವೀರಶೈವ ಲಿಂಗಾಯತ ಅಧಿಕಾರಿಗೆ ಅನ್ಯಾಯವಾಗಿದೆ ಎಂದು ಬಹಿರಂಗ ಹೇಳಿಕೆ ನೀಡಿ, ತಮ್ಮದೇ ಸರ್ಕಾರದ ವಿರುದ್ಧ ಗುಡುಗಿದ್ದ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿಗೆ ತೆರಳಿದ್ದಾರೆ.
ಈ ವಿಚಾರ ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಸೃಷ್ಠಿಸಿದ ಹಿನ್ನೆಲೆಯಲ್ಲಿ ಶಾಸಕ ಶಾಮನೂರು ಶಿವಶಂಕರಪ್ಪ ಅವರೊಂದಿಗೆ ಮಾತನಾಡುವ ಬಗ್ಗೆ ಇಂಗಿತ ವ್ಯಕ್ತಪಡಿಸಿದ್ದು, ಹೀಗಾಗಿ ಸಿಎಂ ಆಹ್ವಾನದ ಮೇರೆಗೆ ಶಿವಶಂಕರಪ್ಪ ಅವರು ನಿನ್ನೆ (ಅ.9) ಸಂಜೆ ಬೆಂಗಳೂರಿಗೆ ತೆರಳಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ, ಲಿಂಗಾಯತ ಅಧಿಕಾರಿಗಳಿಗೆ ಅನ್ಯಾಯ ಎಂಬ ವಿಚಾರ ಮುಗಿದು ಹೋದ ಅಧ್ಯಾಯವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿಗೆ ಕರೆದಿದ್ದಾರೆ. ಭೇಟಿಗೆ ಹೊರಟಿದ್ದೇನೆ, ಅದರಲ್ಲೇನೂ ವಿಶೇಷವಿಲ್ಲ. ಸಚಿವ ಈಶ್ವರ ಖಂಡ್ರೆ ನನ್ನೊಂದಿಗೆ ಯಾವುದೇ ವಿಷಯ ಚರ್ಚಿಸಿಲ್ಲ. ಸಮಾಧಾನಪಡಿಸಿಲ್ಲ. ಸುಮ್ಮನೆ ರಾಮಾಯಣ ಮಾಡಬೇಡಿ ನಡಿರೀ ಎಂದರು.



