ದಾವಣಗೆರೆ: ರಾಜ್ಯ ಸರ್ಕಾರ ಗಲಭೆಕೋರರಿಗೆ, ಕಾನೂನು ಬಾಹಿರ ಚಟುವಟಿಕೆ ನಡೆಸಿದವರಿಗೆ ರಕ್ಷಣೆ ಕೊಡಲು ಹೊರಟಿದೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಇಲಾಖೆ ಸಚಿವ ಎಚ್.ಡಿ. ಕುಮಾರಸ್ವಾಮಿ ಕಿಡಿಕಾರಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹುಬ್ಬಳ್ಳಿಯಲ್ಲಿ ನಡೆದ ಗಲಭೆ ಕೇಸ್ ವಾಪಸ್ ಪಡೆದ ವಿಚಾರ ನೋಡಿದರೆ ರಾಜ್ಯ ಸರ್ಕಾರ ಗಲಭೆಕೋರರಿಗೆ ರಕ್ಷಣೆ ಕೊಡುತ್ತಿದೆ. ಈ ಪ್ರಕರಣದಲ್ಲಿ ಸರ್ಕಾರ ದ್ವೇಷದ ರಾಜಕಾರಣಕ್ಕೆ ಮುಂದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಚನ್ನಪಟ್ಟಣ ವಿಧಾನ ಸಭಾ ಕ್ಷೇತ್ರದ ಉಪ ಚುನಾವಣೆಗೆ ಯಾರೇ ಅಭ್ಯರ್ಥಿ ಯಾದರೂ ನಾನೇ ಎನ್ ಡಿಎ ಅಭ್ಯರ್ಥಿ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿದರು. ಲೋಕಾಯುಕ್ತ ಎಡಿಜಿಪಿ ಚಂದ್ರಶೇಖರ್ ದೂರು ದಾಖಲಿಸಿದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನನ್ನ ಮೇಲೆ ಅವರು ದೂರು ದಾಖಲು ಮಾಡಿದ್ದಾರೆ. ಅದಕ್ಕೆ ನಾನು ನ್ಯಾಯಾಲಯದಲ್ಲಿ ಉತ್ತರ ಕೊಡುತ್ತೇನೆ ಎಂದು ತಿಳಿಸಿದರು.
3-4 ಸಾವಿರ ಪುಟಗಳಷ್ಟು ಚಾರ್ಜ್ ಶೀಟ್ ಹಾಕುತ್ತಾರೆ. 12 ವರ್ಷದಿಂದ ನನ್ನ ಮೇಲೆ ಕೇಸ್ ಹಾಗೆ ಉಳಿಸಿಕೊಂಡಿದ್ದಾರೆ. ಈಗ ನನ್ನ ಮೇಲೆ ಕೇಸ್ ಹಾಕಿದ್ದಾರೆ ನ್ಯಾಯಾಲಯದಲ್ಲಿ ಎಲ್ಲ ಚರ್ಚೆ ಆಗಲಿ.ಯಾರೋ ತೀಟೆಗೆ ಏನಾದರೂ ಮಾತನಾಡಿದರೆ ಅದಕ್ಕೆಲ್ಲ ನಾನೂ ಉತ್ತರ ಕೊಡಬೇಕಾ ಎಂದು ಪ್ರಶ್ನಿಸಿದರು.
ಒಂದು ಕಾಲದಲ್ಲಿದಾವಣಗೆರೆಯಲ್ಲಿ ಕಾಟನ್, ಆಯಿಲ್ ಇಂಡಸ್ಟ್ರಿ ಇತ್ತು. ಈಗ ಈ ಕೈಗಾರಿಕೆಗಳು ನಶಿಸಿ ಹೋಗಿವೆ. ದಾವಣಗೆರೆಯಲ್ಲಿ ಕೈಗಾರಿಕೆಗೆ ಸ್ಥಾಪನೆಗೆ ಏನು ಮಾಡಬೇಕು ಎಂಬುದರ ಬಗ್ಗೆ ಕೇಂದ್ರದಲ್ಲಿ ಚರ್ಚೆ ಮಾಡಲಾಗುವುದು ಎಂದು ತಿಳಿಸಿದರು.