ದಾವಣಗೆರೆ: ಕೊರೊನಾ ಸಮಯದಲ್ಲಿ ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆದಿದೆ. ಈ ಬಗ್ಗೆ ಎಸಿಬಿಗೆ ದೂರು ನೀಡಿದರೆ ಪ್ರಭಾವ ಬೀರುಬಹುದೆಂಬ ಕಾರಣಕ್ಕೆ ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ (ಪಿಎಲ್) ಅರ್ಜಿ ಸಲ್ಲಿಸಲು ನಿರ್ಧರಿಸಲಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೊನಾ ಸಮಯದ ಒಂದು ವರ್ಷದ ಅವಧಿಯಲ್ಲಿ ಹಿಂದಿನ ಮೇಯರ್ ಅರ್ಧ ಕಪ್ ಟೀ ಕುಡಿಯುವುದಕ್ಕೂ ಸಮಯವಿಲ್ಲ ಎಂದು ಹೇಳಿದ್ದರು. ಆದರೆ, ಪಾಲಿಕೆಯಲ್ಲಿ ಕಾಮಗಾರಿ ಅವ್ಯವಹಾರದಲ್ಲಿ ಬರೀ ಟೀ ಕುಡಿದಿಲ್ಲ. ಊಟನೇ ಮಾಡಿದ್ದಾರೆ ಎಂದು ಕಿಡಿಕಾರಿದರು.
ಹೊಸ ಲೇಔಟ್ ಗಳು ಪೂರ್ಣ ಕಾಮಗಾರಿ ಆಗದೇ ಡೋರ್ ನಂಬರ್ ಕೊಡಲು ಬರುವುದಿಲ್ಲ. ಆದರೆ, ದೂಡಾ ನಿಯಮ ಪಾಲಿಸದೇ, ಯಜಿಡಿ ಆಗಿಲ್ಲದ, ಪಾರ್ಕ್ ನಿರ್ಮಿಸದ, ರಸ್ತೆಗಳಿಗೆ ಕಾಂಕ್ರಿಟ್ ಹಾಕದ 52 ಎಕರೆ ಲೇಔಟ್ ಗಳಿಗೆ ಹಿಂದಿನ ಮೇಯರ್ ಅನುಮೋದನೆ ನೀಡಿದ್ದಾರೆ. ಅದರಲ್ಲಿ ತಮ್ಮದೇ 22 ಎಕರೆ ಜಮೀನು ಸಹ ಇದೆ. ಈ ಬಗ್ಗೆ ಪೂರಕ ದಾಖಲೆಗಳಿದ್ದು, ಎಸಿಬಿಯಲ್ಲಿ ದೂರ ದಾಖಲಿಸಲು ನಿರ್ಧರಿಸಲಾಗಿತ್ತು. ಆದರೆ, ಎಸಿಬಿ ಮೇಲೆ ಪ್ರಭಾವ ಬೀರು ಸಾಧ್ಯತೆ ಇದೆ. ಹೀಗಾಗಿ ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲು ತೀರ್ಮಾನ ಕೈಗೊಂಡಿದ್ದೇವೆ ಎಂದರು.
ಕೊರೊನಾ ಸಮದಲ್ಲಿ ಪಾಲಿಕೆ ತೆರಿಗೆಯನ್ನು ಹೆಚ್ಚಳ ಮಾಡುವ ಮೂಲಕ ಜನ ಸಾಮಾನ್ಯರ ಮೇಲೆ ಇನ್ನಷ್ಟು ಹೊರೆ ಹಾಕಿದೆ. ಕೊರೊನಾ ಹೆಸರಲ್ಲಿ ಒಂದು ವರ್ಷದಲ್ಲಿ ಒಂದೇ ಸಾಮಾನ್ಯ ಸಭೆ ಕರೆದ ಕೀರ್ತಿ ಹಿಂದಿನ ಮೇಯರ್ ಗೆ ಸಲ್ಲುತ್ತದೆ. ಕೊರೊನಾ ಸಮಯದಲ್ಲಿ ಲೋಕಸಭೆ, ವಿಧಾಸಭೆ ಸೇರಿದಂತೆ ಎಲ್ಲ ಕಡೆ ಕಲಾಪ ನಡೆದಿವೆ. ಆದರೆ, ನಮ್ಮ ಪಾಲಿಕೆಯಲ್ಲಿ ಮಾತ್ರ ವರ್ಷದಲ್ಲಿ ಒಂದೇ ಸಭೆ ಕರೆದಿದ್ದಾರೆ. ಪಾಲಿಕೆ ವತಿಯಿಂದ ಸಾರ್ವಜನಿಕರಿಗೆ ಯಾವುದೇ ಕೆಲಸ ಆಗಿಲ್ಲ ಎಂದು ತಿಳಿಸಿದರು.
ಮನೆ ಬಾಗಿಲಿಗೆ ಮಹಾನಗರ ಪಾಲಿಕೆ ಕಾರ್ಯಕ್ರಮದಿಂದ ಯಾರಿಗೂ ಪ್ರಯೋಜನವಾಗಿಲ್ಲ. ಕಾರ್ಯಕ್ರಮ ಹೆಸರಲ್ಲಿ ಅನವಶ್ಯಕವಾಗಿ ಹಣ ಖರ್ಚು ಮಾಡಿದ್ದಾರೆ. ಯಾರೋ ಒಬ್ಬ, ಇಬ್ಬರಿಗೆ ಪ್ರಮಾಣ ಪತ್ರ ನೀಡಿ ಪೋಟೋಗೆ ತೆಗೆಸಿಕೊಂಡಿದ್ದಾರೆ. ಇಡೀ ಕಾರ್ಯಕ್ರಮಕ್ಕೆ 9 ಲಕ್ಷ ಖರ್ಚು ಆಗಿದ್ದರೆ, ಕೊನೆಯ ದಿನದ ಸಮಾರೋಪ ಸಮಾರಂಭಕ್ಕೆ 8.65 ಲಕ್ಷಕ್ಕೆ ಟೆಂಡರ್ ಕರೆದಿದ್ದಾರೆ. ಈ ಯೋಜನೆಯಲ್ಲಿಯೂ ಕೂಡ ಅವ್ಯವಹಾರ ನಡೆದಿದೆ. ಈ ಬಗ್ಗೆ ಅವರದೇ ಪಕ್ಷದದ ಉಮಾ ಪ್ರಕಾಶ್ ಅವರು ಸಹ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಒಟ್ನಲ್ಲಿ ಮನೆ ಬಾಗಿಲಿಗೆ ಮಹಾನಗರ ಪಾಲಿಕೆ ಕಾರ್ಯಕ್ರಮ ಸಂಪೂರ್ಣವಾಗಿ ವಿಫಲವಾಗಿದೆ. ಈ ಕಾರ್ಯಕ್ರಮಕ್ಕರ ಪ್ರಧಾನಿ ಮೆಚ್ಚುಗೆ ವ್ಯಕ್ತಪಡಿಸಿದ್ದರು ಎನ್ನುವುದು ಕೂಡ ಸುಳ್ಳು ಎಂದರು.