ದಾವಣಗೆರೆ: ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಅವರು ಬಿಜೆಪಿಯಲ್ಲಿ ಅಧಿಕಾರ ಅನುಭವಿಸಿ, ಈಗ ಬಿಜೆಪಿ ಮುಳುಗುವ ದೋಣಿ ಎಂದು ಹೇಳಿಕೆ ನೀಡುತ್ತಿರುವುದು ಖಂಡನೀಯ. ಪಕ್ಷದ ವರಿಷ್ಠರು ಕೂಡಲೇ ಅವರನ್ನು ಪಕ್ಷದಿಂದಲೇ ಉಚ್ಚಾಟನೆ ಮಾಡಬೇಕು ಎಂದು ಬಿಜೆಪಿ ಪಕ್ಷದ ಒಬಿಸಿ ಮೋರ್ಚಾದ ಮಾಜಿ ಪ್ರಧಾನ ಕಾರ್ಯದರ್ಶಿ ಸುರೇಶ್ ಗಂಡಗಾಳೆ ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ,ರೇಣುಕಾಚಾರ್ಯ ಸಚಿವರಾಗಿ, ರಾಜಕೀಯ ಕಾರ್ಯದರ್ಶಿಯಾಗಿ ಅಧಿಕಾರ ಅನುಭವಿಸಿದ್ದಾರೆ. ಇದಲ್ಲದೆ ಗೂಟದ ಕಾರು, ಸರ್ಕಾರಿ ಬಂಗಲೆ, ಆಸ್ತಿ, ಅಂತಸ್ತು ಎಲ್ಲವನ್ನೂ ಪಡೆದಿದ್ದಾರೆ ಆದರೀಗ ಬಿಜೆಪಿ ಪಕ್ಷ ಮುಳುಗುವ ದೋಣಿಯಾಗಿದೆ ಎಂದು ಹೇಳಿಕೆ ನೀಡಿರುವುದು ಲಕ್ಷಾಂತರ ಕಾರ್ಯಕರ್ತರ ಮನಸ್ಸಿಗೆ ನೋವುಂಟಾಗಿದೆ ಎಂದರು.
ಬಿಜೆಪಿ ಕಾರ್ಯಕರ್ತರ ಪಕ್ಷ. ಪಕ್ಷ ನಂಬಿಕೆಯೇ ಕಾರ್ಯಕರ್ತರು. ಹೀಗಾಗಿ ಮಾಜಿ ಸಚಿವ ರೇಣುಕಾಚಾರ್ಯರ ಹೇಳಿಕೆಯಿಂದ ಲಕ್ಷಾಂತರ ನಿಷ್ಠಾವಂತ ಕಾರ್ಯಕರ್ತರಿಗೆ ನೋವು ಉಂಟಾಗಿದೆ. ಒಂದು ಕಡೆ ಮಾಜಿ ಸಿಎಂ .ಬಿ.ಎಸ್.ಯಡಿಯೂರಪ್ಪ ಬಗ್ಗೆ ಗೌರವ ಇದೆ ಎನ್ನುತ್ತಾರೆ. ಅವರ ವಿರುದ್ಧವೇ ರೇಣುಕಾಚಾರ್ಯ , ಗುಂಪುಗಾರಿಕೆ ಮಾಡಿ ಮಂತ್ರಿಗಿರಿ ಗಿಟ್ಟಿಸಿದ್ದರು ಎಂದು ಕಿಡಿಕಾರಿದರು.
ನಿಂತ ನೀರಿನಲ್ಲಿ ದೋಣಿಯನ್ನು ಚಲಾಯಿಸಿ ತಮ್ಮ ದೋಣಿಯನ್ನು ತಾವೇ ಮುಳುಗಿಸಿ ಕೊಳ್ಳುವಂತಹ ವಾತಾವರಣವನ್ನು ಸೃಷ್ಟಿ ಮಾಡಿಕೊಳ್ಳುತ್ತಿದ್ದಾರೆ. ರೇಣುಕಾಚಾರ್ಯ ಅವರು, ಹಾದಿಬೀದಿಯಲ್ಲಿ ಮಾತನಾಡುವುದನ್ನು ಬಿಡಲಿ ಪಕ್ಷದಲ್ಲಿ ಇರುವುದಾದರೆ ಗೌರವಯುತವಾಗಿರಲಿ. ಇಲ್ಲವಾದಲ್ಲಿ ಗೌರವಯುತವಾಗಿ ಹೋಗಲಿ.ಮಾಧ್ಯಮಗಳ ಮುಂದೆ ಬಿಜೆಪಿ ಪಕ್ಷದ ಬಗ್ಗೆ ಅವಹೇಳನವಾಗಿ ಮಾತನಾಡುವುದು ಸರಿಯಲ್ಲ ಎಂದರು.ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯ ಶಿವಾನಂದ, ಎಸ್.ಟಿ ಯೋಗೀಶ್ವರ್, ಜಿ.ಎಸ್ ಡಿ ಮೂರ್ತಿ, ಜಯಪ್ರಕಾಶ್, ಬಿ.ಟಿ ಲೋಕೇಶ್ ಉಪಸ್ಥಿತರಿದ್ದರು.