ದಾವಣಗೆರೆ: ದಾವಣಗೆರೆ ನಗರದಲ್ಲಿ ಸರ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿವೆ. ವಾಕ್ ಮಾಡುವ ಮಹಿಳೆಯರು, ವೃದ್ಧರು ಈ ಕಳ್ಳರ ಟಾರ್ಗೆಟ್ ಆಗಿದ್ದಾರೆ. ನಗರದಲ್ಲಿ ಒಂದೇ ವಾರದಲ್ಲಿ ಬೈಕ್ ನಲ್ಲಿ ಬಂದು ಸರಗಳ್ಳತನ ಮಾಡುತ್ತಿರುವ ಪ್ರತ್ಯೇಕ ಮೂರು ಪ್ರಕರಣಗಳು ದಾಖಲಾಗಿವೆ.
ಮೂರು ದಿನದ ಹಿಂದೆಯಷ್ಟೇ ನಗರದ ತರಳಬಾಳು ಬಡಾವಣೆಯಲ್ಲಿ ರಾತ್ರಿ ವಾಕ್ ಮಾಡುತ್ತಿದ್ದ ವೃದ್ಧ ದಂಪತಿಗಳಿಂದ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದರು. ಈ ಪ್ರಕರಣ ಮಾಸುವ ಮುನ್ನವೇ ವಿದ್ಯಾನಗರ ಠಾಣೆ ವ್ಯಾಪ್ತಿಯಲ್ಲಿ ಮತ್ತೆ ಎರಡು ಪ್ರತ್ಯೇಕ ಸರಗಳ್ಳತನ ಪ್ರಕರಣ ಮಡೆದಿವೆ. ಬೈಕ್‌ನಲ್ಲಿ ಬಂದ ಅಪರಿಚಿತರು, ಮಹಿಳೆಯೊಬ್ಬರ ಸರ ಕಿತ್ತುಕೊಂಡು ಪರಾರಿಯಾದ್ರೆ, ಮತ್ತೊಂದರಲ್ಲಿ ಸರ ಕಳ್ಳತನ ಯತ್ನ ವಿಫಲವಾಗಿದೆ.
ಜೆ.ಎಚ್. ಪಟೇಲ್ ಬಡಾವಣೆಯಲ್ಲಿ ವೃದ್ಧೆ ರೇಣುಕಮ್ಮ ಅವರು ಮನೆಯ ಮುಂದೆ ಬಟ್ಟೆಗಳನ್ನು ಹಿಂಡುತ್ತಿದ್ದಾಗ ಅಲ್ಲಿಯೇ ಬೈಕ್ ನಿಲ್ಲಿಸಿಕೊಂಡು ಮಾತನಾಡುತ್ತಿದ್ದ ಅಪರಿಚಿತ ಕುತ್ತಿಗೆಗೆ ಕೈಹಾಕಿ ಸರವನ್ನು ಕಿತ್ತುಕೊಂಡಿದ್ದಾನೆ. ಆ ವೇಳೆ ಕೈ ಅಡ್ಡ ಹಾಕಿದ್ದರಿಂದ ಚಿನ್ನದ ಗುಂಡುಗಳು ಕೆಳಕ್ಕೆ ಬಿದ್ದಿದ್ದು, ಕಳ್ಳ 75,000 ಮೌಲ್ಯದ 15 ಗ್ರಾಂ ಚಿನ್ನ ಕಳವು ಮಾಡಿದ್ದಾನೆ.ಮತ್ತೊಂದು ಪ್ರಕರಣದಲ್ಲಿ ಆಂಜನೇಯ ಬಡಾವಣೆಯ 18ನೇ ಕ್ರಾಸ್‌ನಲ್ಲಿ ರಾತ್ರಿ ಸರೋಜಮ್ಮ ಎಂಬುವವರ ಸರ ಕಸಿಯಲು ಯತ್ನಿಸಿದಾಗ ಕಳ್ಳತನ ಯತ್ನ ವಿಫಲವಾಗಿದೆ. ಈ ಬಗ್ಗೆ ವಿದ್ಯಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



