ದಾವಣಗೆರೆ: ನಗರಲ್ಲಿ ಆಟೋಗಳಿಂದ ಹೆಚ್ಚಿನ ಸಂಚಾರಿ ನಿಯಮ ಉಲ್ಲಂಘನೆ ಆಗುತ್ತಿದ್ದು, ಈ ಹಿನ್ನೆಲೆಯಲ್ಲಿ ಚಾಲನೆ ಪರವಾನಿಗೆ ಇಲ್ಲದ ಆಟೋ ಸೀಜ್ ಮಾಡಲಾಗಿದೆ. ಇನ್ಮುಂದೆ ನಿಯಮ ಪಾಲನೆ ಮಾಡದಿದ್ರೆ ದಂಡ ಹಾಕಲಾಗುವುದು ಎಂದು ಎಸ್ಪಿ ಉಮಾ ಪ್ರಶಾಂತ್ ಆಟೋ ಚಾಲಕರಿಗೆ ಎಚ್ಚರಿಕೆ ನೀಡಿದರು.
ಡಿಎಆರ್ ಮೈದಾನದಲ್ಲಿ ಆಟೊ ಚಾಲಕರಿಗೆ ಸಂಚಾರ ನಿಯಮಗಳ ಕುರಿತು ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದರು. ನಗರದಲ್ಲಿ ಸಂಚರಿಸಸುವ ಹೆಚ್ಚಿನ ಆಟೋಗಳು ಸುಸ್ಥಿತಿ ಪ್ರಮಾಣ ಪತ್ರ ಹೊಂದಿಲ್ಲ. ಚಾಲನಾ ಪರವಾನಗಿ ಇಲ್ಲದ 24 ಆಟೋ ಚಾಲಕರನ್ನು ಸಂಚಾರ ಪೊಲೀಸರು ಸೀಜ್ ಮಾಡಿದ್ದಾರೆ. ಸಿಗ್ನಲ್‌ಗಳಲ್ಲಿ ಸಂಚಾರ ನಿಯಮ ಉಲ್ಲಂಘನೆ ಮಾಡುತ್ತಿರುವ ಆಟೋ ಚಾಲಕರ ಸಂಖ್ಯೆ ಹೆಚ್ಚಾಗಿದೆ. ಇದಲ್ಲದೆ, ಅಜಾಕರೂಕತೆಯಿಂದ ಆಟೋ ಚಾಲನೆ ಸಹ ಇಲಾಖೆ ಗಮನಕ್ಕೆ ಬಂದಿದೆ ಎಂದರು.
ಆಟೋ ಚಾಲಕರಿಗೆ ಎಸ್ಪಿ ಕೊಟ್ಟ ಸೂಚನೆ ಏನು..?
- ಆಟೋಗಳು ರಸ್ತೆಯ ಪಾದಚಾರಿಗಳು ಮತ್ತು ಇತರೆ ವಾಹನ ಸವಾರರ ಸುರಕ್ಷತೆಯ ಬಗ್ಗೆ ಗಮನಹರಿಸಬೇಕು
- ಸಿಗ್ನಲ್‌ಗಳಲ್ಲಿ ಆಟೋ ಚಾಲಕರು ಸಂಚಾರ ನಿಯಮ ಪಾಲನೆ ಮಾಡಿ ದಂಡದಿಂದ ತಪ್ಪಿಸಿಕೊಳ್ಳಬೇಕು
- ಆರ್‌ಟಿಒ ಕಚೇರಿಯಲ್ಲಿ ಆಟೋಗಳ ದಾಖಲೆಗಳನ್ನು ನವೀಕರಣ ಮಾಡಿಕೊಳ್ಳಬೇಕು
- ಆಟೋಗಳನ್ನು ನಿಯಮ ಮೀರಿ ಬದಲಾವಣೆ ಮಾಡಿಕೊಂಡು ಹೆಚ್ಚು ಆಸನ ವ್ಯವಸ್ಥೆ ಮಾಡುವಂತಿಲ್ಲ
- ನಿಗದಿಗಿಂತ ಹೆಚ್ಚು ಪ್ರಯಾಣಿಕರಿಗೆ ಸೇವೆ ನೀಡಿದ್ರೆ ಶಿಸ್ತುಕ್ರಮ ಜರುಗಿಸುವುದು ನಿಶ್ಚಿತ
- ಚಾಲಕರ ಎಲ್ಲ ದಾಖಲೆ ಸರಿಯಾಗಿವೇ ಎಂಬುದನ್ನು ಆಟೊ ಮಾಲೀಕರು ಖಚಿತಪಡಿಸಿಕೊಳ್ಳಬೇಕು
ಪೊಲೀಸರಿಂದ ಪಾಸ್ ಪಡೆಯಬೇಕು; ರಾತ್ರಿ ವೇಳೆ ಆಟೋ ಓಡಿಸಲು ಪೊಲೀಸರಿಂದ ಪಾಸ್ ಪಡೆಯಬೇಕು ಎಂದು ಸೂಚಿಸಿದರೂ ಚಾಲಕರು ಪಾಲಿಸಿಲ್ಲ. ಕೂಡಲೇ ಎಲ್ಲರೂ ಪಾಸ್ ಹೊಂದಬೇಕು. ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿ ಅವೈಜ್ಞಾನಿಕವಾಗಿ ಆಟೊ ನಿಲುಗಡೆ ಮಾಡಲಾಗುತ್ತಿದ್ದು, ಬಸ್ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದೆ ಎಂಬುದಾಗಿ ಅಧಿಕಾರಿಗಳು ದೂರು ನೀಡಿದ್ದಾರೆ. ಬಸ್‌ಗಳ ಸುಗಮ ಸಂಚಾರಕ್ಕೆ ಅನುವಾಗುವ ರೀತಿಯಲ್ಲಿ ಆಟೋ ನಿಲುಗಡೆ ಮಾಡಬೇಕು. ನಿಗದಿತ ನಿಲ್ದಾಣಗಳಲ್ಲಿ ಮಾತ್ರವೇ ಆಟೋಗಳನ್ನು ನಿಲುಗಡೆ ಮಾಡಬೇಕು. ಇಲ್ಲವಾದರೆ ಪೊಲೀಸರು ಕಠಿಣ ಕ್ರಮ ಕೈಗೊಳ್ಳಲಿದ್ದಾರೆ ಎಂದರು.



