ದಾವಣಗೆರೆ: ತೀವ್ರ ಬರದ ನಡುವೆಯೂ ಜಿಲ್ಲೆಯಲ್ಲಿ ಭತ್ತ ಬೆಳೆದ ರೈತರು ಭರ್ಜರಿ ಇಳಿವರಿ ಕಂಡಿದ್ದಾರೆ. ಉತ್ತಮ ಇಳುವರಿ ಜೊತೆ ಭತ್ತಕ್ಕೆ ಬಂಪರ್ ಬೆಲೆಯೂ ಸಿಕ್ಕಿದೆ. ಇದೊಂದು ರೀತಿ ರೈತರಿಗೆ ಡಬಲ್ ಧಮಾಕ. ಶ್ರೀರಾಮ್, ಸೋನಾ ತಳಿಯ ಭತ್ತ 3 ಸಾವಿರ ಗಡಿದಾಟಿದ್ದು, ರೈತರಲ್ಲಿ ಮುಖದಲ್ಲಿ ಸಂತಸ ಮೂಡಿಸಿದೆ.
ಇಡೀ ರಾಜ್ಯದಲ್ಲಿ ತೀವ್ರ ಬರ, ಮಳೆ ಕೊರತೆಯಿಂದ ಸಂಕಷ್ಟ ಎದುರಾಗಿದೆ. ಈ ಸಮಸ್ಯೆಗೆ ಜಿಲ್ಲೆಯೂ ಹೊರತಾಗಿಲ್ಲ. ಜಿಲ್ಲೆಯ ಭತ್ತ ಬೆಳೆಗಾರರ ನೀರಿನ ಮೂಲ ಆಧಾರವಾಗಿದ್ದ ಭದ್ರಾ ಜಲಾಶಯ ಮುಂಗಾರು ಮಳೆ ಕೊರತೆಯಿಂದ ಪೂರ್ಣ ಪ್ರಮಾಣದಲ್ಲಿ ಭರ್ತಿ ಆಗಿರಲಿಲ್ಲ. ಮುಂಗಾರು ಹಂಗಾಮಿಗೂ ನಿರಂತರ ನೀರು ಹರಿಸಲು ಸಂಕಷ್ಟ ಎದುರಾಗಿತ್ತು. ಭದ್ರಾ ಜಲಾಶಯದ ಆಫ್ ಅಂಡ್ ಆನ್ ಪದ್ಧತಿ ನಡುವೆಯೂ ಈ ಬಾರಿ ಜಲ್ಲೆಯ ರೈತರು ಭತ್ತ ಬೆಳೆಯಲ್ಲಿ ಉತ್ತಮ ಇಳುವರಿ ಪಡೆದಿದ್ದಾರೆ. ಇದೀಗ ಭತ್ತದ ಕೊಯ್ಲಿನ ಸುಗ್ಗಿ ಆರಂಭವಾಗಿದ್ದು, ಭತ್ತಕ್ಕೆ ಬಂಪರ್ ಬೆಲೆ ಬಂದಿದೆ.
ಭತ್ತಕ್ಕೆ ಸರ್ಕಾರ ಘೋಷಿಸಿರುವ ಬೆಂಬಲ ಬೆಲೆಗಿಂತ ಮುಕ್ತ ಮಾರುಕಟ್ಟೆಯಲ್ಲಿ ಅಧಿಕ ಬೆಲೆ ದೊರೆಯುತ್ತಿದೆ. ಸರ್ಕಾರದ ಭತ್ತ ಖರೀದಿ ಕೇಂದ್ರದಲ್ಲಿ ಸಾಮಾನ್ಯ ಭತ್ತ ಪ್ರತಿ ಕ್ವಿಂಟಲ್‌ಗೆ 2,183, ಎ ಗ್ರೇಡ್ ಭತ್ತಕ್ಕೆ 2,203 ನಿಗದಿಪಡಿಸಲಾಗಿತ್ತು. ಆದರೆ, ಮುಕ್ತ ಮಾರುಕಟ್ಟೆಯಲ್ಲಿ 2,250ರಿಂದ 2,930ರವರೆಗೆ ಬೆಲೆ ಸಿಗುತ್ತಿದೆ. ಇನ್ನೂ ಶ್ರೀರಾಮ್, ಸೋನಾ ತಳಿ ಭತ್ತ 3 ಸಾವಿರ ಗಡಿದಾಟಿದೆ.
ಕಳೆದ ವರ್ಷ ನವೆಂಬರ್ ತಿಂಗಳಲ್ಲಿ 1,855ರಿಂದ 2,415 ರೂ. ವರೆಗೆ ದರವಿತ್ತು. ಈ ವರ್ಷ ಕ್ವಿಂಟಲ್‌ಗೆ 2,520ರಿಂದ 2,950 ರೂ. ವರೆಗೆ ದರ ಸಿಗುತ್ತಿದೆ. ಮಂಡಕ್ಕಿ, ಅವಲಕ್ಕಿ ತಯಾರಿಕೆಗೆ ಬಳಸುವ ದಪ್ಪ ಭತ್ತ 2,200- 2,600 ರೂ., ಆರ್‌ಎನ್‌ಆರ್, ಶ್ರೀರಾಮ್, ಸೋನಾ ತಳಿಗಳಿಗೆ 2,600ರಿಂದ 3,150 ರೂ. ದರವಿದೆ.
ಜಿಲ್ಲೆಯಲ್ಲಿ ಬೆಳೆದ ಭತ್ತ ಆಂಧ್ರಪ್ರದೇಶ, ತಮಿಳುನಾಡು, ಕೋಲಾರ, ಗಂಗಾವತಿ, ರಾಯಚೂರು ಭಾಗಗಳಿಗೆ ಹೋಗುತ್ತದೆ. ಅದಕ್ಕಿಂತ ಹೆಚ್ಚಾಗಿ ಜಿಲ್ಲೆಯಲ್ಲಿರುವ ಅಕ್ಕಿ ಗಿರಣಿ ಮಾಲೀಕರು ಭತ್ತವನ್ನು ದಾಸ್ತಾನು ಮಾಡುತ್ತಿರುವುದರಿಂದ ಹೆಚ್ಚಿನ ಬೆಲೆ ದೊರೆಯುತ್ತಿದೆ. ಈ ಬೆಲೆ ಇನ್ನುಷ್ಟು ಹೆಚ್ಚಾಗುವ ನಿರೀಕ್ಷೆ ಇದೆ.



