ದಾವಣಗೆರೆ : ಜಿಲ್ಲೆಯಲ್ಲಿಂದು ಆಕ್ಸಿಜನ್ ಪೂರೈಕೆಯಲ್ಲಿ ನಾಲ್ಕೈದು ತಾಸು ವ್ಯತ್ಯಯ ಉಂಟಾಗಿತ್ತು. ತಕ್ಷಣವೇ ಅಲರ್ಟ್ ಆದ ಡಿಸಿ ಮಹಾಂತೇಶ್ ಬೀಳಗಿ, ತಾವೇ ಮುಂದೆ ನಿಂತು ಸ್ಥಳೀಯ ಖಾಸಗಿ ಏಜೆನ್ಸಿಗಳಿಂದ ಸಿಲಿಂಡರ್ ವ್ಯವಸ್ಥೆ ಮಾಡಿ, ಭಾರೀ ಅನಾಹುತ ತಪ್ಪಿಸಿದರು.
ಜಿಂದಾಲ್ ನಿಂದ ಬರಬೇಕಿದ್ದ ಆಕ್ಸಿಜನ್ ಸಿಲಿಂಡರ್ ಪೂರೈಕೆಯಲ್ಲಿ ವಿಳಂಬವಾಗಿತ್ತು. ಇದರಿಂದ ಜಿಲ್ಲಾಸ್ಪತ್ರೆಯಲ್ಲಿ ಬೆಳಗ್ಗೆ 8.30 ರಿಂದಲೇ ಆತಂಕ ಉಂಟಾಗಿತ್ತು. ಆಗ ತಕ್ಷಣವೇ ಫೀಲ್ಡಿಗಿಳಿದ ಡಿಸಿ, ಸ್ಥಳೀಯ ಖಾಸಗಿ ಏಜೆನ್ಸಿಗಳು, ಖಾಸಗಿ ಆಸ್ಪತ್ರೆಗಳಿಂದ ಹಾಗೂ ಗ್ಯಾಸ್ ಏಜೆನ್ಸಿಗಳಿಂದ ಸಿಲಿಂಡರ್ ತರಿಸಿ ಆಕ್ಸಿಜನ್ ಕೊರತೆ ಆಗದಂತೆ ಎಚ್ಚರಿಕೆ ವಹಿಸಿದರು. ಪ್ರತಿದಿನ ಬೆಳಗ್ಗೆ ಬರಬೇಕಿದ್ದ ಆಕ್ಸಿಜನ್ ಇಂದು ನಾಲ್ಕೈದು ತಾಸು ತಡವಾಗಿ ಬಂದಿದೆ.
ಈ ಘಟನೆಯಿಂದ ಆತಂಕಕ್ಕೆ ಒಳಗಾಗಿದ್ದ ಡಿಸಿ ಮಹಾಂತೇಶ್ ಬೀಳಗಿ ಹಾಗೂ ಎಸ್ ಪಿ ಹನುಮಂತರಾಯ ಜಿಲ್ಲಾಸ್ಪತ್ರೆ ಬಳಿಯೇ ಇದ್ದು, ಆಕ್ಸಿಜನ್ ಕೊರತೆ ಆಗದಂತೆ ಎಚ್ಚರ ವಹಿಸಿ ಭಾರೀ ಅನಾಹುತವನ್ನ ತಪ್ಪಿಸಿದ್ಧಾರೆ. ಪೊಲೀಸ್ ಭದ್ರತೆಯಲ್ಲಿ ವಿಜಯನಗರ ಜಿಲ್ಲೆಯ ಜಿಂದಾಲ್ ನಿಂದ ಆಕ್ಸಿಜನ್ ತರಿಸಲಾಯಿತು.
ಮುಂದೆ ಆಕ್ಸಿಜನ್ ಕೊರತೆ ಆಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಆಸ್ಪತ್ರೆ ಆವರಣದಲ್ಲಿರುವ ಆಕ್ಷಿಜನ್ ಟ್ಯಾಂಕರ್ ನಲ್ಲಿ ತೊಂದರೆ ಕಾಣಿಸಿದರೆ, ಹೆಚ್ಚುವರಿ 200 ಕ್ಕೂ ಹೆಚ್ಚು ಜಂಬೋ ಸಿಲಿಂಡರ್ ಗಳ ವ್ಯವಸ್ಥೆಯನ್ನ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ಧಾರೆ.
ಜಿಂದಾಲ್ ನಿಂದ ಪ್ರತಿ ನಿತ್ಯ 6,000 ಲೀಟರ್ ಲಿಕ್ವಿಂಡ್ ಆಕ್ಸಿಜನ್ ಮುಂಜಾನೆ 8 ಗಂಟೆಗೆ ಬರಬೇಕಿತ್ತು. ಆದರೆ, ತಾಂತ್ರಿಕ ತೊಂದರೆಯಿಂದ ನಾಲ್ಕೂದು ತಾಸು ವಿಳಂಬವಾಗಿತ್ತು. ಜಿಲ್ಲಾಸ್ಪತ್ರೆಯಲ್ಲಿ 350 ಸೋಂಕಿತರಿಗೆ ಆಕ್ಸಿಜನ್ ಬೆಡ್ ವ್ಯವಸ್ಥೆ ಇದ್ದು, ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ



