ಹರಪನಹಳ್ಳಿ: ತಾಲೂಕಿನ ಚಿಗಟೇರಿಯ ಶ್ರೀ ನಾರದಮುನಿ ಸ್ವಾಮಿಯ ರಥೋತ್ಸವವು ಅಪಾರ ಸಂಖ್ಯೆಯ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು. ಗ್ರಾಮದಲ್ಲಿ ರಾಜಕೀಯ ವಿಚಾರವಾಗಿ ಎರಡು ಸಮುದಾಯದ ನಡುವೆ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಇದರಿಂದ ರಥೋತ್ಸವ ನಡೆಸದಂತೆ ಪಟ್ಟು ಹಿಡಿದಿದ್ದರು. ಆಗ, ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್, ರಾಜಕೀಯ ಕಾರಣಕ್ಕೆ ರಥೋತ್ಸವ ನಿಲ್ಲಿಸುವುದು ಸರಿಯಲ್ಲ ಎಂದು ಗ್ರಾಮಸ್ಥರನ್ನು ಮನವೊಲಿಸಿ ಬಿಗಿ ಪೊಲೀಸ್ ಬಂದೋಬಸ್ತ್ ನಡುವೆ ಎಂದಿನಂತೆ ಮೂಲಾ ನಕ್ಷತ್ರದಲ್ಲಿ ಅದ್ಧೂರಿಯಾಗಿ ರಥೋತ್ಸವ ನಡೆಸಿದರು.
ದೇವಸ್ಥಾನದಿಂದ ರಥದವರೆಗೆ ನಂದಿಕೋಲು, ಸಕಲವಾದ್ಯಗಳೊಂದಿಗೆ ಪಲ್ಲಕ್ಕಿಯಲ್ಲಿ ಶ್ರೀ ನಾರದಮುನಿ ಸ್ವಾಮಿಯನ್ನು ಕರೆ ತರಲಾಯಿತು. ಮೂರು ಸುತ್ತು ರಥ ಸುತ್ತುವರೆದ ನಂತರ ರಥವೇರಿ ಸಂಜೆಯ ಮೂಲಾ ನಕ್ಷತ್ರದಲ್ಲಿ ವೈಭವದಿಂದ ರಥೋತ್ಸವ ಜರುಗಿತು. ರಥೋತ್ಸವ ಆರಂಭವಾಗುತ್ತಿದಂತೆ ಕತ್ತಾಳೆ ನಾರನ್ನು ಎಸೆದ ಭಕ್ತರು ಶಿವ ನಾರದ ಮುನಿ ಗೋವಿಂದಾ… ಗೋವಿಂದಾ ಎಂದು ಘೋಷಣೆ ಕೂಗಿದರು.
ಬೆಳಗ್ಗೆಯಿಂದಲೇ ದೂರದ ಊರುಗಳಿಂದ ಆಗಮಿಸಿದ್ದ ವಿವಿಧ ಬೆಡಗಿನ ಭಕ್ತರು ಪೂಜೆ ಸಲ್ಲಿಸಿ, ಹರಕೆ ತೀರಿಸಿದರು. ಭಕ್ತರು ಅಕ್ಕಿ, ಬೆಲ್ಲ, ಹಾಲು, ಬಾಳೆಹಣ್ಣಿನ ವಿಶಿಷ್ಟ ಪ್ರಸಾದವನ್ನು ಮಣ್ಣಿನ ಮಡಿಕೆಯಲ್ಲಿ ತಯಾರಿಸಿ ಹರಕೆ ಒಪ್ಪಿಸಿದರು.
ನಾರುಗುಳ್ಳೆ ಇರುವ ಭಕ್ತರು ಇಲ್ಲಿಗೆ ಬಂದು ನಾರು ಎಸೆದು ಹರಕೆ ತೀರಿಸಿದರೆ, ನಾರುಗುಳ್ಳೆ ವಾಸಿಯಾಗುತ್ತವೆ ಎಂಬ ಪ್ರತೀತಿ ಇದೆ. ಭಕ್ತರು ನಾರಿನ ಕಟ್ಟನ್ನು ಎಸೆದು ಭಕ್ತಿ ಸಮರ್ಪಿಸಿದರು. ನಾಳೆ (ಏ.29) ಸಂಜೆ ಓಕುಳಿ ಉತ್ಸವ ಇರಲಿದೆ.