ದಾವಣಗೆರೆ: ರಾಜ್ಯ ಸರ್ಕಾರ 14ಲಕ್ಷ ಬಿಪಿಎಲ್ ಕಾರ್ಡ್ ಅನರ್ಹ ಮಾಡಲು ಹೊರಟಿದೆ. ಒಂದು ವೇಳೆ ಬಿಪಿಎಲ್ ಕಾರ್ಡ್ ರದ್ದು ಮಾಡಿದರೆ ಬೀದಿಗೆ ಇಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಮಾಜಿ ಸಚಿವ ರೇಣುಕಾಚಾರ್ಯ ಎಚ್ವರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಸುಮಾರು 14 ಲಕ್ಷ ಬಿಪಿಎಲ್ ಕಾರ್ಡ್‌ಗಳನ್ನು ರದ್ದುಪಡಿಸಲು ಸಿದ್ದರಾಮಯ್ಯ ಹೊರಟಿದ್ದಾರೆ. ಇದರ ಪರಿಣಾಮವನ್ನೂ ನೀವು ಎದುರಿಸಬೇಕಾಗುತ್ತದೆ. ಈ ಹಿಂದೆ ವಿಪಕ್ಷ ನಾಯಕರಾಗಿದ್ದಾಗಲೇ ಈ ಬಗ್ಗೆ ನೀವು ಯಾಕೆ ಧ್ವನಿ ಎತ್ತಲಿಲ್ಲ? ಗ್ಯಾರಂಟಿಗೆ ಹಣ ಹೊಂದಿಸಲಾಗದೇ, ಬಿಪಿಎಲ್ ಕಾರ್ಡ್ ರದ್ದುಪಡಿಸಲು ಹೊರಟಿದ್ದಾರೆ. ಅಭಿವೃದ್ಧಿಗೆ ಹಣ ಇಲ್ಲದ, ಇದೊಂದು ಅಸಮರ್ಥ ಸರ್ಕಾರ ಎಂದು ಟೀಕಿಸಿದರು.
ದಾಖಲೆ ಕೊಡಲಿ; ಕಾಂಗ್ರೆಸ್ ಶಾಸಕರ ಖರೀದಿಸಲು ಬಿಜೆಪಿ ನೂರು ಕೋಟಿ ರೂ. ಆಫರ್ ನೀಡಿದೆ ಎನ್ನುವ ಮುಖ್ಯಮಂತ್ರಿ ಕೂಡಲೇ ಈ ಬಗ್ಗೆ ದಾಖಲೆ ಬಿಡುಗಡೆ ಮಾಡಬೇಕು. ಜತೆಗೆ ಇದರ ತನಿಖೆಗಾಗಿ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಎಸ್‌ಐಟಿ ರಚಿಸಿ ಎಂದು ಆಗ್ರಹಿಸಿದರು.
ಶಾಸಕ ರವಿ ಗಣಿಗ ಬಿಜೆಪಿಯವರು 50ಕೋಟಿ ರೂ. ಆಫರ್ ಕೊಟ್ಟಿರುವ ಬಗ್ಗೆ ಪೆನ್ ಡ್ರೈವ್ ಇದೆ ಎನ್ನುತ್ತಿದ್ದಾರೆ. ಅದನ್ನು ಕೂಡಲೇ ಬಹಿರಂಗಪಡಿಸಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ನೂರು ಕೋಟಿ ಆಫರ್ ಎನ್ನುತ್ತಿದ್ದಾರೆ. ಇದನ್ನು ಸಿಬಿಐ ಇಲ್ಲವೇ ಇಡಿ ತನಿಖೆ ಆಗಬೇಕು ಎಂದು ಒತ್ತಾಯಿಸಿದರು.
ಕೋಟಿ ಕೋಟಿ ಹಣ ಪಡೆದು ಮಾರಾಟವಾಗಲು ನಿಮ್ಮ ಶಾಸಕರು ಜಾನುವಾರುಗಳಾ? ನಿಮ್ಮ ಶಾಸಕರರ ಬಗ್ಗೆ ನಿಮಗೆ ನಂಬಿಕೆ ಇಲ್ಲ. ಕಾಂಗ್ರೆಸ್‌ನವರು ದಾಖಲೆಗಳೊಂದಿಗೆ ಮಾತನಾಡಿ ಬುಟ್ಟಿಯಲ್ಲಿ ಹಾವು ಇದೆ ಎಂದು ಹೇಳಿ ಅರಿವೇ ಹಾವು ಬಿಡಬೇಡಿ. ಈ ಆರೋಪವನ್ನು ನೀವು ಧರ್ಮಸ್ಥಳ, ಅಜ್ಜಯ್ಯನ ಮಠ ಇಲ್ಲವೇ ಚಾಮುಂಡಿ ಸನ್ನಿಧಾನ ಎಲ್ಲಿ ಬರುತ್ತೀರೋ ಬಂದು ಸಾಬೀತು ಪಡಿಸಿ. ಬಿಜೆಪಿಯವರು ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸುತ್ತಿಲ್ಲ. ಕಾಂಗ್ರೆಸ್ ಪಕ್ಷದಿಂದಲೇ ಸರ್ಕಾರ ಅಸ್ಥಿರಗೊಳ್ಳುತ್ತಿದೆ. ಸಿದ್ದರಾಮಯ್ಯ ಅವರನ್ನು ನೂರಕ್ಕೆ ನೂರರಷ್ಟು ಕಾಂಗ್ರೆಸ್ ನವರೇ ರಾಜೀನಾಮೆ ಕೊಡಿಸುತ್ತಾರೆ ಎಂದರು.
ಜಮೀರ್ ವಜಾಗೊಳಿಸಿ: ಮುಡಾ, ವಾಲ್ಮೀಕಿ ಹಗರಣ ಮುಚ್ಚಿಹಾಕಲು ಕೋವಿಡ್ ಪ್ರಕರಣಕ್ಕೆ ಎಸ್‌ಐಟಿ ರಚನೆ ಮಾಡಲು ನಿರ್ಧರಿಸಿದ್ದಾರೆ. ವಕ್ಫ್ ಸಚಿವ ಜಮೀರ್ ಅಹಮ್ಮದ್ ಒಬ್ಬ ಮತಾಂಧ. ರೈತರಿಗೆ ನೋಟಿಸ್ ನೀಡಿದ ಜಮೀರ್ ಅಹಮದ್ ರನ್ನು ಸಚಿವ ಸ್ಥಾನದಿಂದ ತಕ್ಷಣ ವಜಾ ಮಾಡಬೇಕು.



