ದಾವಣಗೆರೆ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ದಾವಣಗೆರೆ ಜಿಲ್ಲೆಯವರಿಗೇ ಬಿಜೆಪಿ ಟಿಕೆಟ್ ನೀಡಬೇಕು ಎಂದು ಆಗ್ರಹಿಸಿರುವ ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯ, ಪರೋಕ್ಷವಾಗಿ ಹಾಲಿ ಸಂಸದ ಜಿ.ಎಂ.ಸಿದ್ದೇಶ್ವರ್ ಗೆ ಟಾಂಗ್ ನೀಡಿದ್ದಾರೆ. ಇನ್ನೂ ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗದನ್ನು ಬ್ರಹ್ಮನಿಂದಲೂ ತಪ್ಪಿಸಲು ಸಾಧ್ಯವಿಲ್ಲ ಎಂದಿದ್ದಾರೆ.
ಮಾಜಿ ಶಾಸಕ ಎಸ್. ವಿ. ರಾಮಚಂದ್ರಪ್ಪ ಅವರ ಜನ್ಮ ದಿನದ ಶುಭಕೋರಿ ಮಾತನಾಡಿದ ಅವರು, ಈ ಬಾರಿಯ ಬಿಜೆಪಿ ಟಿಕಿಟ್ ಜಿಲ್ಲೆಯವರಿಗೆ ಟಿಕೆಟ್ ನೀಡಬೇಕು ಎಂಬುದು ಜಿಲ್ಲೆಯ ಮತದಾರರು, ಬಿಜೆಪಿ ಮುಖಂಡರು, ಕಾರ್ಯಕರ್ತರ ಒತ್ತಾಯವಾಗಿದೆ ಎಂದ್ರು…. ಈ ಮೂಲಕ ಹಾಲಿ ಸಂಸದ ಜಿ.ಎಂ.ಸಿದ್ದೇಶ್ವರ (ಚಿತ್ರದುರ್ಗ ಮೂಲದ) ಅವರಿಗೆ ಈ ಬಾರಿ ಟಿಕೆಟ್ ನೀಡುವಂತಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
ಮಾತು ಮುಂದುವರಿಸಿ ಸಿದ್ದೇಶ್ವರ್ ಮತ್ತು ಅವರ ತಂದೆ ಮಲ್ಲಿಕಾರ್ಜುನಪ್ಪರ ಬಗ್ಗೆ ಅಪಾರ ಗೌರವವಿದೆ. ಮಲ್ಲಿಕಾರ್ಜುನಪ್ಪರು ಎರಡು ಬಾರಿ ಸಂಸದರಾಗಿ ಕೇಂದ್ರದ ಯೋಜನೆಗಳನ್ನು ಜನರಿಗೆ ತಲುಪಿಸಿದ್ದಾರೆ. ಸಿದ್ದೇಶ್ವರ ಅವರು ನಾಲ್ಕು ಬಾರಿ ಎಂಪಿ ಆಗಿದ್ದಾರೆ. ಅವರ ಕೊಡುಗೆ ಮರೆಯುವಂತಿಲ್ಲ ಎಂದಿದ್ದಾರೆ.
ಜಿಲ್ಲೆಯವರಿಗೇ ಟಿಕೆಟ್ ನೀಡಬೇಕೆಂದು ಬೆಂಗಳೂರಿನಲ್ಲಿ ನಡೆದ ಬಿಜೆಪಿ ಸಭೆಯಲ್ಲಿ ಪ್ರಸ್ತಾಪಿಸಿದ್ದೇನೆ. ಇದು ರೇಣುಕಾಚಾರ್ಯನ ಅಭಿಪ್ರಾಯ ಅಲ್ಲ, ಪಕ್ಷದ ಮುಖಂಡರು, ಕಾರ್ಯಕರ್ತರು, ಜಿಲ್ಲೆಯ ಅಭಿಮತವಾಗಿದೆ. ಪಕ್ಷ ಯಾರಿಗೆ ಟಿಕೆಟ್ ನೀಡಿದರೂ ಗೆಲುವಿಗೆ ಶ್ರಮಿಸುತ್ತೇವೆ.ಪ್ರಧಾನಿ ನರೇಂದ್ರ ಮೋದಿ ಮೂರನೇ ಬಾರಿ ಮತ್ತೆ ಪ್ರಧಾನಿ ಆಗಬೇಕು. ಸ್ಪರ್ಧೆ, ಪೈಪೋಟಿ ಯಾವುದೂ ಇಲ್ಲ. ನರೇಂದ್ರ ಮೋದಿ ಅವರು ಮೂರನೇ ಬಾರಿ ಪ್ರಧಾನಿಯಾಗುವುದನ್ನು ಬ್ರಹ್ಮನಿಂದಲೂ ತಪ್ಪಿಸಲು ಸಾಧ್ಯವಿಲ್ಲ. ವಿರೋಧಿ ಬಣದ 28 ಪಕ್ಷಗಳ ಆಟ ನಡೆಯಲ್ಲ ಎಂದು ಹೇಳಿದರು.
ದಾವಣಗೆರೆ ಜಿಲ್ಲೆಯವರಿಗೆ ಅವಕಾಶ ಸಿಕ್ಕಿಲ್ಲ ಎಂಬ ಕೊರಗಿದೆ. ಪ್ರತಿಯೊಬ್ಬ ಕಾರ್ಯಕರ್ತರ ಭಾವನೆಗಳನ್ನು ವಿಜಯೇಂದ್ರ, ಯಡಿಯೂರಪ್ಪ ಸೇರಿದಂತೆ ಎಲ್ಲಾ ನಾಯಕರಿಗೂ ತಿಳಿಸುತ್ತೇವೆ. ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ. ವೈ. ವಿಜಯೇಂದ್ರ ನೇತೃತ್ವದಲ್ಲಿ 28 ಲೋಕಸಭೆ ಕ್ಷೇತ್ರಗಳನ್ನು ಗೆಲ್ಲುತ್ತೇವೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಎಸ್. ವಿ. ರಾಮಚಂದ್ರಪ್ಪ, ಮಹಾನಗರ ಪಾಲಿಕೆ ಮಾಜಿ ಮೇಯರ್ ಅಜಯ್ ಕುಮಾರ್, ಬಿಜೆಪಿ ಜಿಲ್ಲಾಧ್ಯಕ್ಷ ರಾಜಶೇಖರ್, ಟಿಂಕರ್ ಮಂಜಣ್ಣ, ರಾಜು, ರವಿಕುಮಾರ್ , ಲೋಕಿಕೆರೆ ನಾಗರಾಜ್ , ಮಾಡಾಳ್ ಮಲ್ಲಿಕಾರ್ಜುನ್, ಶಿವನಗೌಡ ಪಾಟೀಲ್ ಮತ್ತಿತರರು ಇದ್ದರು.



