ದಾವಣಗೆರೆ: ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಹಾಗೂ ವೃತ್ತಿ ಶಿಕ್ಷಣಕ್ಕೆ ಬ್ಯಾಂಕ್ ಗಳಿಂದ ಸರಿಯಾಗಿ ಸಾಲ, ಸೌಲಭ್ಯ ಸಿಗುತ್ತಿಲ್ಲ ಮತ್ತು ಸ್ಪಂದಿಸುತ್ತಿಲ್ಲ ಎಂಬ ದೂರುಗಳು ಬಂದಿವೆ. ಬ್ಯಾಂಕ್ ಅಧಿಕಾರಿಗಳು ಪ್ರತಿ 15 ದಿನಕ್ಕೊಮ್ಮೆ ಕಾಲೇಜುಗಳಲ್ಲಿ ಜಾಗೃತಿ ಶಿಬಿರಗಳನ್ನು ಹಮ್ಮಿಕೊಳ್ಳುವಂತೆ ದಾವಣಗೆರೆ ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ ಬ್ಯಾಂಕ್ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಗುರುವಾರ ಲೀಡ್ ಬ್ಯಾಂಕ್ ವತಿಯಿಂದ ನಡೆದ ಜಿಲ್ಲಾ ಮಟ್ಟದ ಬ್ಯಾಂಕರ್ಸ್ ಸಭೆಯಲ್ಲಿ ಮಾತನಾಡಿದರು. ವಿದ್ಯಾರ್ಥಿಗಳಿಂದ ಶೈಕ್ಷಣಿಕ ಉದ್ದೇಶಕ್ಕಾಗಿ ಸಲ್ಲಿಕೆಯಾಗುವ ಸಾಲದ ಅರ್ಜಿಗಳನ್ನು ಪರಿಶೀಲನೆಯ ನೆಪದಲ್ಲಿ ದೀರ್ಘ ಸಮಯ ಇಟ್ಟುಕೊಳ್ಳದೆ ಕಾಲಮಿತಿಯೊಳಗೆ ವಿಲೇವಾರಿ ಮಾಡಬೇಕು. ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಗಳು ಕೂಡ ರೈತರಿಗೆ ಬೆಳೆ ಸಾಲ ನೀಡಿಕೆ ಪ್ರಮಾಣವನ್ನು ಹೆಚ್ಚಿಸಬೇಕು. ಹಾಗೂ ವಿನಾಕಾರಣ ಸಾಲದ ಅರ್ಜಿಗಳನ್ನು ತಿರಸ್ಕರಿಸಬಾರದು. ಮತ್ತು ವಿದ್ಯಾರ್ಥಿಗಳು, ರೈತರಿಗೆ ಸಾಲ ನೀಡಿಕೆಗೆ ಸಿಬಿಲ್ ಸ್ಕೋರ್ ಮಾನದಂಡವಾಗಬಾರದು.ಮುಂದಿನ ಬಾರಿ ಸಭೆಯ ವೇಳೆಗೆ ಬಾಕಿ ಇರುವ ಎಲ್ಲ ಅರ್ಜಿಗಳನ್ನು ವಿಲೇವಾರಿ ಮಾಡಬೇಕೆಂದು ಸೂಚಿಸಿದರು.
ಆಟೋ ಚಾಲಕರೊಬ್ಬರು ತಮ್ಮ ಮಗಳ ವಿದ್ಯಾಭ್ಯಾಸ ಹಣಕ್ಕಾಗಿ ಭಿಕ್ಷೆ ಪಾತ್ರೆ ಹಿಡಿದು ತಿರುಗಬೇಕಾಗಿದೆ. ಬ್ಯಾಂಕ್‍ಗಳಿಂದ ಶೈಕ್ಷಣಿಕ ಸಾಲ ಸರಿಯಾಗಿ ನೀಡುತ್ತಿಲ್ಲ ಎಂದು ಸಾಕಷ್ಟು ದೂರುಗಳು ಕೇಳಿ ಬಂದಿವೆ. ಸಾಲ ನೀಡಲು ಏಕೆ ಆಗುತ್ತಿಲ್ಲ ಎಂದು ಪ್ರಶ್ನಿಸಿದಾಗ ಲೀಡ್ ಬ್ಯಾಂಕ್ ಮ್ಯಾನೇಜರ್ ಶೈಲಜಾ ಮಾತನಾಡಿ, ಶಿಕ್ಷಣ ಹಾಗೂ ಮನೆ ನಿರ್ಮಾಣ ಸಾಲ ನೀಡಿಕೆಯಲ್ಲಿ ಜಿಲ್ಲೆ ನಿರೀಕ್ಷಿತ ಪ್ರಮಾಣದಲ್ಲಿ ಸಾಧನೆ ಮಾಡಿಲ್ಲ, ಉಳಿದಂತೆ ಕೃಷಿ ಮತ್ತು ಇತರೆ ಕ್ಷೇತ್ರಗಳಿಗೆ ಗುರಿ ಮೀರಿ ಸಾಧನೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು. ಕಳೆದ ವರ್ಷ 700 ವಿದ್ಯಾರ್ಥಿಗಳಿಗೆ ಮತ್ತು ಈ ವರ್ಷ 105 ಜನರಿಗೆ ಶೈಕ್ಷಣಿಕ ಸಾಲ ನೀಡಲಾಗಿದೆ. ಕೆಲ ಅರ್ಜಿಗಳನ್ನು ತಿರಸ್ಕರಿಸಲಾಗಿದೆ ಎಂದರು.
ಮುಂದಿನ ಬ್ಯಾಂಕರ್ಸ್ ಸಭೆಯಲ್ಲಿ ಈ ಬಗ್ಗೆ ಸರಿಯಾದ ಮಾಹಿತಿ ನೀಡಿ, ಶಿಕ್ಷಣ ಸಾಲ ಹೆಚ್ಚು ಮಾಡುವಂತೆ ಸೂಚಿಸಲಾಗುವುದು ಎಂದರು.ಸಂಸದರು ಮಾತನಾಡಿ ಜಿಲ್ಲೆಯಲ್ಲಿ ಶೈಕ್ಷಣಿಕ ಸಾಲ ನೀಡಿಕೆ ಮತ್ತು ಡಿಸಿಸಿ ಬ್ಯಾಂಕ್ ಸಾಲ ನೀಡಿಕೆಯು ತೃಪ್ತಿಕರವಾಗಿಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯದ ಇತರೆ ಜಿಲ್ಲೆಗಳಲ್ಲಿ ಆಗಿರುವ ಪ್ರಗತಿಯನ್ನು ಅಧ್ಯಯನ ಮಾಡಿ ಶಿಕ್ಷಣ ಸಾಲ ನೀಡಿಕೆ ಹೆಚ್ಚಳ ಮಾಡುವಂತೆ ಸಂಸದರು ಸೂಚಿಸಿದರು.
ಡಿಸಿಸಿ ಬ್ಯಾಂಕ್ ನಿಂದಲೂ ಸರಿಯಾಗಿ ಸಾಲ ಸಿಗುತ್ತಿಲ್ಲ ಎಂದು ಅನೇಕ ರೈತರು ತಮ್ಮ ಅಳಲು ತೋಡಿಕೊಂಡಿದ್ದಾರೆ. ಸಮಸ್ಯೆ ಏನಾಗಿದೆ ಎಂದಾಗ ಬ್ಯಾಂಕಿನ ಸಿಇಓ ನಂಜುಂಡೇಗೌಡ ಮಾತನಾಡಿ 2021 ರಲ್ಲಿ 512 ಕೋಟಿ, 22 ರಲ್ಲಿ 612, ಕೋಟಿ ರೂ, 23 ರಲ್ಲಿ 838 ಮತ್ತು 2024 ರಲ್ಲಿ 840 ಕೋಟಿ ರೂ ಸಾಲ ನೀಡಲಾಗಿದೆ.ಆದರೆ ರೈತರ ಬೇಡಿಕೆಗೆ ತಕ್ಕಂತೆ ಸಾಲ ನೀಡಲು ಸಾಧ್ಯವಾಗುತ್ತಿಲ್ಲ, ನಬಾರ್ಡ್ ಮತ್ತು ಅಪೆಕ್ಸ್ ಬ್ಯಾಂಕ್ ನಿಂದ ನಿರೀಕ್ಷಿತ ಮಟ್ಟದಲ್ಲಿ ಅನುದಾನ ದೊರೆಯುತ್ತಿಲ್ಲ. ಹಾಗಾಗಿ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ಠೇವಣಿ ಹೆಚ್ಚಳ ಮಾಡಿಕೊಂಡು ಸಾಲ ನೀಡಿಕೆ ಪ್ರಮಾಣ ಹೆಚ್ಚಳಕ್ಕೆ ಚಿಂತನೆ ಮಾಡಲಾಗಿದೆ ಎಂದರು.
ಸಾಲಕ್ಕಾಗಿ ಸಲ್ಲಿಕೆಯಾಗುವ ಅರ್ಜಿಗಳನ್ನು ಪರಿಶೀಲನೆಯ ನೆಪದಲ್ಲಿ ದೀರ್ಘ ಸಮಯ ಇಟ್ಟುಕೊಳ್ಳದೇ ಕಾಲಮಿತಿಯೊಳಗೆ ವಿಲೇವಾರಿ ಮಾಡಬೇಕು. ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಗಳು ಕೂಡ ರೈತರಿಗೆ ಬೆಳೆ ಸಾಲ ನೀಡಿಕೆ ಪ್ರಮಾಣವನ್ನು ಹೆಚ್ಚಿಸಬೇಕೆಂದು ಸಂಸದರು ಸೂಚಿಸಿದರು.
ಜಿಪಂ ಸಿಇಒ ಸುರೇಶ್ ಇಟ್ನಾಳ್ ಮಾತನಾಡಿ, ಯಾವುದೇ ಇನ್ ಫುಟ್ ಸಬ್ಸಿಡಿ ಹಣವನ್ನು ಸಾಲಕ್ಕೆ ಕಟಾವಣೆಮಾಡಿಕೊಳ್ಳಬಾರದು ಎಂದು ಸಾಕಷ್ಟು ಬಾರಿ ಹೇಳಿದರೂ ಕೆಲ ಬ್ಯಾಂಕ್‍ನವರು ಅದೇ ಚಾಳಿ ಮುಂದುವರಿಸಿದ್ದಾರೆ. ಕುಂದು ಕೊರತೆ ಸಭೆಯಲ್ಲಿ ಸಚಿವರು, ಶಾಸಕರಿಗೆ ದೂರುಗಳು ಬಂದಿವೆ. ಯಾವುದೇ ಕಾರಣಕ್ಕೂ ಗೃಹಲಕ್ಷ್ಮೀ, ಅಂಗವಿಕಲ ಪಿಂಚಣಿ ಸೇರಿದಂತೆ ಯಾವುದೇ ಇನ್‍ಫುಟ್ ಸಬ್ಸಿಡಿ ಹಣವನ್ನು ಇನ್ನು ಮುಂದೆ ಸಾಲಕ್ಕೆ ಜಮಾವಣೆ ಮಾಡಿಕೊಳ್ಳಬಾರದು. ತಾಂತ್ರಿಕವಾಗಿ ಒಂದು ವೇಳೆ ಜಮಾವಣೆಯಾದರೆ ಆ ಹಣವನ್ನು ಮರಳಿ ಅವರ ಉಳಿತಾಯ ಖಾತೆಗೆ ಜಮೆ ಮಾಡಬೇಕೆಂದು ಸೂಚಿಸಿದರು.
ಸಭೆಯಲ್ಲಿ ನಬಾರ್ಡ್ ಅಧಿಕಾರಿ ರಶ್ಮಿ ರೇಖಾ, ಆರ್ ಬಿಐ ಅಧಿಕಾರಿ ವೆಂಕಟರಾಮಯ್ಯ, ಜಿಪಂ ಉಪಕಾರ್ಯದರ್ಶಿ ಕೃಷ್ಣನಾಯ್ಕ, ಜಿಲ್ಲಾ ಲೀಡ್ ಬ್ಯಾಂಕ್ ಮ್ಯಾನೇಜರ್ ಶೈಲ ಕೆ. ಮುರಾರಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.