ದಾವಣಗೆರೆ: ಬಿಜೆಪಿ ಜಿಲ್ಲೆಯ 7 ಮತ್ತು ಹರಪನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲೂ ಗೆಲ್ಲಲಿದೆ. ನಾನು ಪ್ರಚಾರಕ್ಕೆ ಹೋದಲ್ಲೆಲ್ಲಾ ಬಿಜೆಪಿಗೆ ವೋಟು ಕೊಡುವ ಭರವಸೆ ಸಿಗುತ್ತಿದೆ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಯಕೊಂಡ ಕ್ಷೇತ್ರದಲ್ಲಿ ಬಂಡಾಯ ಅಭ್ಯರ್ಥಿ ಅವರನ್ನು ಕರೆಸಿ ಮಾತನಾಡಿದ್ದೇವೆ. ನಾಮಪತ್ರ ವಾಪಸ್ ತೆಗೆದುಕೊಳ್ಳಲಿದ್ದಾರೆ. ಇನ್ಯಾವ ಕ್ಷೇತ್ರದಲ್ಲಿ ಯಾವುದೇ ಬಂಡಾಯ ಇಲ್ಲ ಎಂದರು.
ಶಾಸಕ ಮಾಡಾಳ್ ವಿರೂಪಾಕ್ಷಪ್ಪನಿಗೆ ಬುದ್ಧಿ ಕಮ್ಮಿ, ನಾನೇ ಲೋಕಾಯುಕ್ತ ದಾಳಿ ಮಾಡಿಸಿದ್ದೇನೆಂದು ಶಾಮನೂರು ಶಿವಶಂಕರಪ್ಪ ಹೇಳಿಕೆಯನ್ನು ಹಿಡಿದು ಕೂತಿದ್ದಾರೆ. ಅವರ ತಪ್ಪು ತಿಳುವಳಿಕೆ ಬಗ್ಗೆ ಬೇಜಾರಾಗಿದೆ.ಮಾಡಾಳ್ ವಿರೂಪಾಕ್ಷಪ್ಪ ಮೇಲೆ ನಾನು ಲೋಕಾಯುಕ್ತ ದಾಳಿ ಮಾಡಿಸುವಷ್ಟು ಪ್ರಭಾವಿಯಲ್ಲ . ನಾನು ಅಷ್ಟು ಪ್ರಭಾವಿಯಾಗಿದ್ದರೆ ನನ್ನ ತಮ್ಮನ ಮೇಲೆ ಎರಡು ದಾಳಿ ಆಗಿದ್ದವು. ಅವುಗಳನ್ನು ನಾನು ತಡೆಯಬಹುದಿತ್ತು ಎಂದರು.
ವಿರೂಪಾಕ್ಷಪ್ಪ ನನ್ನ ಸ್ನೇಹಿತ. ನಾನು ಅವರ ಮೇಲೆ ಲೋಕಾಯುಕ್ತ ದಾಳಿ ಮಾಡಿಸಿಲ್ಲ ಎಂದು ಸ್ಪಷ್ಟನೆ ನೀಡಿದರು. ಈಗಾಗಲೇ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ತಮ್ಮ ಪುತ್ರನನ್ನು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಸಿದ್ದಾರೆ. ಮಾಡಾಳ್ ವಿರುದ್ಧ ರಾಜ್ಯ ಹಾಗೂ ಕೇಂದ್ರದ ನಾಯಕರು ಕ್ರಮ ಕೈಗೊಳ್ಳುತ್ತಾರೆ ಎಂದು ತಿಳಿಸಿದರು.