Connect with us

Dvgsuddi Kannada | online news portal | Kannada news online

ಸಾಸ್ವೆಹಳ್ಳಿ ಏತನೀರಾವರಿ ಯೋಜನೆ ಭೂಸ್ವಾಧೀನ ಪ್ರಕ್ರಿಯೆ ತ್ವರಿತಗೊಳಿಸಿ: ಜಿ.ಎಂ. ಸಿದ್ದೇಶ್ವರ

ದಾವಣಗೆರೆ

ಸಾಸ್ವೆಹಳ್ಳಿ ಏತನೀರಾವರಿ ಯೋಜನೆ ಭೂಸ್ವಾಧೀನ ಪ್ರಕ್ರಿಯೆ ತ್ವರಿತಗೊಳಿಸಿ: ಜಿ.ಎಂ. ಸಿದ್ದೇಶ್ವರ

ದಾವಣಗೆರೆ: ಜಿಲ್ಲೆಯ ಸಾಸ್ವೆಹಳ್ಳಿ ಏತನೀರಾವರಿ ಯೋಜನೆಗೆ ಸಂಬಂಧಿಸಿದಂತೆ ಪಂಪ್‍ ಹೌಸ್‍ಗಳು, ಡೆಲವರಿ ಚೇಂಬರ್ ಗಳು, ಎಲೆಕ್ಟ್ರಿಕಲ್ ಸಬ್‍ ಸ್ಟೇಷನ್‍ಗಳಿಗೆ ವಿದ್ಯುತ್ ಸಂಪರ್ಕಕ್ಕಾಗಿ ನಿರ್ಮಿಸಬೇಕಿರುವ ವಿದ್ಯತ್ ಟವರ್‍ಗಳ ನಿರ್ಮಾಣಕ್ಕೆ ಅಗತ್ಯವಿರುವ ಎಲ್ಲ ಭೂಸ್ವಾಧೀನ ಪ್ರಕ್ರಿಯೆಗಳನ್ನು ವಿಳಂಬಕ್ಕೆ ಅವಕಾಶ ನೀಡದಂತೆ ತ್ವರಿತವಾಗಿ ಪೂರ್ಣಗೊಳಿಸಬೇಕು, ಇದರಲ್ಲಿ ಯಾವುದೇ ಅಡೆತಡೆಗಳಿದ್ದಲ್ಲಿ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಪರಿಹರಿಸಿಕೊಳ್ಳಬೇಕು ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಾಸ್ವೆಹಳ್ಳಿ ಸೇರಿದಂತೆ ವಿವಿಧ ಏತನೀರಾವರಿ ಯೋಜನೆಗಳ ಕುರಿತು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಲಾದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿ, ಸಾಸ್ವೆಹಳ್ಳಿ ಏತನೀರಾವರಿ ಯೋಜನೆಯಡಿ ಜಾಕ್‍ವೆಲ್ ಕಮ್ ಪಂಪ್‍ಹೌಸ್, ಡೆಲಿವರಿ ಛೇಂಬರ್, ಎಲೆಕ್ಟ್ರಿಕಲ್ ಸಬ್‍ಸ್ಟೇಷನ್, ರೈಸಿಂಗ್ ಮೈನ್‍ಗಳ ನಿರ್ಮಾಣಕ್ಕಾಗಿ ಹೊನ್ನಾಳಿ ತಾಲ್ಲೂಕಿನಲ್ಲಿ 6 ಎಕರೆ 03 ಗುಂಟೆ ಹಾಗೂ ಚನ್ನಗಿರಿ ತಾಲ್ಲೂಕಿನಲ್ಲಿ 09 ಎಕರೆ 14 ಗುಂಟೆ ಸೇರಿದಂತೆ 15 ಎಕರೆ 17 ಗುಂಟೆ ಭೂಸ್ವಾಧೀನ ಮಾಡಿಕೊಳ್ಳಲಾಗುತ್ತದೆ. ಈಗಾಗಲೆ ಸಾಸ್ವೆಹಳ್ಳಿ ಗ್ರಾಮದಲ್ಲಿ 03 ಎಕರೆ 03 ಗುಂಟೆಗೆ ಸಂಬಂಧಿಸಿದಂತೆ ಭೂಮಿ ಕಳೆದುಕೊಳ್ಳುವ ರೈತರಿಗೆ ಕಳೆದ ವರ್ಷ ಮೇ ತಿಂಗಳಿನಲ್ಲಿ ಶೇ. 50 ರಷ್ಟು ಪರಿಹಾರ ಹಣ ಪಾವತಿಸಲಾಗಿದೆ.

ಅದೇ ರೀತಿ ಚನ್ನಗಿರಿ ತಾಲ್ಲೂಕು ಚಕ್ಕಲಿ ಗ್ರಾಮ ಬಳಿ ಪಂಪ್‍ಹೌಸ್, ಎಲೆಕ್ಟ್ರಿಕಲ್ ಸಬ್‍ಸ್ಟೇಷನ್, ಅಪ್ರೋಚ್ ರಸ್ತೆಗೆ ಅಗತ್ಯವಿರುವ ಒಟ್ಟು 07 ಎಕರೆ ಭೂಮಿಗೆ ಸಂಬಂಧಿಸಿದಂತೆ ಕಳೆದ ವರ್ಷ ಮೇ ತಿಂಗಳಿನಲ್ಲಿ ಶೇ. 50 ರಷ್ಟು ಪರಿಹಾರ ಹಣ ಪಾವತಿಸಲಾಗಿದೆ. ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲ್ಲೂಕಿನ ಮುತ್ತಗದೂರು ಬಲಿ ಪಂಪ್‍ಹೌಸ್ ಹಾಗೂ ವಿದ್ಯುತ್ ಸಬ್‍ಸ್ಟೇಷನ್, ಚಿತ್ರದುರ್ಗ ತಾಲ್ಲೂಕು ಮದಕರಿಉರ ಮತ್ತು ದೊಡ್ಡಿಗನಾಳ್ ಗ್ರಾಮ ಬಳಿ ಡೆಲವರಿ ಚೇಂಬರ್, ಅಪ್ರೋಚ್ ರಸ್ತೆಗಾಗಿ ಸದ್ಯ ಭೂಸ್ವಾಧೀನ ಪ್ರಕ್ರಿಯೆಯನ್ನು ತ್ವರಿತವಾಗಿ ಪೂರ್ಣಗೊಳಿಸಿ ನಿಗಮಕ್ಕೆ ಹಸ್ತಾಂತರ ಮಾಡುವ ಕಾರ್ಯ ಬಾಕಿ ಇದೆ. ಭೂಸ್ವಾಧೀನ ಕಾರ್ಯವನ್ನು ವಿಳಂಬಕ್ಕೆ ಅವಕಾಶವಿಲ್ಲದಂತೆ ಶೀಘ್ರ ಪೂರ್ಣಗೊಳಿಸಬೇಕು. ಯಾವುದೇ ಅಡೆತಡೆಗಳು ಇದ್ದಲ್ಲಿ ಕೂಡಲೆ ಅಧಿಕಾರಿಗಳು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು, ಸಮಸ್ಯೆ ಪರಿಹರಿಸಿಕೊಳ್ಳಬೇಕು ಎಂದು ಸಂಸದರು ಸೂಚನೆ ನೀಡಿದರು.

ಹೊನ್ನಾಳಿ ತಾಲ್ಲೂಕಿನಲ್ಲಿ ಪಂಪ್‍ಹೌಸ್-1 ರ ಬಳಿ ನಿರ್ಮಿಸಲು ಉದ್ದೇಶಿಸಿರುವ ಎಲೆಕ್ಟ್ರಿಕಲ್ ಸಬ್‍ಸ್ಟೇಷನ್‍ಗೆ ವಿದ್ಯುತ್ ಸಂಪರ್ಕಕ್ಕಾಗಿ ದಿಡಗೂರು, ಬೀರಗೊಂಡನಹಳ್ಳಿ, ಚಿಕ್ಕಬಾಸೂರು, ಉಜ್ಜನೀಪುರ, ಹೊಟ್ಯಾಪುರ, ಸದಾಶಿವಪುರ, ಸಾಸ್ವೆಹಳ್ಳಿ, ಮಾವಿನಕೋಟೆ ಗ್ರಾಮ ವ್ಯಾಪ್ತಿಯಲ್ಲಿ ಒಟ್ಟು 49 ವಿದ್ಯುತ್ ಟವರ್‍ಗಳನ್ನು ನಿರ್ಮಿಸಬೇಕಿದ್ದು, 48 ಎಕರೆ ಭೂಮಿಯನ್ನು ಗುರುತಿಸಲಾಗಿದೆ. ಇದಕ್ಕಾಗಿ ಅಗತ್ಯ ಜಾಗ ಮತ್ತು ಕಾರಿಡಾರ್ ಹಾದುಹೋಗುವ ಮಾರ್ಗದ ಸರ್ವೆ ನಕ್ಷೆ ಹಾಗೂ ಬಾಧಿತರಾಗುವ ರೈತರ ಭೂಮಿಯ ಸರ್ವೆ ನಂಬರ್‍ಗಳೊಂದಿಗೆ ಸರ್ವೆ ಕಾರ್ಯ ಪೂರ್ಣಗೊಂಡಿದ್ದು, ಪರಿಹಾರಮೊತ್ತ ನಿಗದಿಪಡಿಸುವುದು ಬಾಕಿ ಇದೆ. ಹೊಳಲ್ಕೆರೆ ತಾಲ್ಲೂಕು ಸಾಸಲು ಗ್ರಾಮ ಬಳಿಯ ಸಬ್‍ಸ್ಟೇಷನ್‍ಗೆ 20 ಟವರ್‍ಗಳ ನಿರ್ಮಾಣಕ್ಕೆ ಸರ್ವೆ ಪೂರ್ಣಗೊಂಡಿದೆ. ಅದೇ ರೀತಿ ಕೆರೆಬಿಳಚಿ ಗ್ರಾಮ ಬಳಿ ವಿದ್ಯುತ್ ಸಬ್‍ಸ್ಟೇಷನ್‍ಗೆ ವಿದ್ಯುತ್ ಸಂಪರ್ಕಿಸಲು 4.50 ಕಿ.ಮೀ. ಮಾರ್ಗದಲ್ಲಿ 20 ವಿದ್ಯುತ್ ಟವರ್ ನಿರ್ಮಾಣಕ್ಕೆ ಜಕ್ಕಲಿ, ಸೋಮಲಾಪುರ, ಕೆರೆಬಿಳಚಿ ಗ್ರಾಮಗಳ ಸರ್ವೆ ಕಾರ್ಯವನ್ನು ಚನ್ನಗಿರಿ ತಹಸಿಲ್ದಾರರು ತ್ವರಿತವಾಗಿ ಮಾಡಿಸಬೇಕು, ಎಂದು ಅಧಿಕಾರಿಗಳು ಸಭೆಯ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು ಬಾಕಿ ಇರುವ ಸರ್ವೆ ಕಾರ್ಯವನ್ನು ಆಯಾ ತಹಸಿಲ್ದಾರರು ಪೂರ್ಣಗೊಳಿಸಬೇಕು. ಪರಿಹಾರ ಮೊತ್ತದ ದರವನ್ನು ಒಂದು ವಾರದೊಳಗೆ ನಿಗದಿಪಡಿಸಲಾಗುವುದು ಎಂದು ಭರವಸೆ ನೀಡಿದರು.

ಸಂಸದರು ಮಾತನಾಡಿ, ಅಧಿಕಾರಿಗಳು ಸರ್ವೆ ಕಾರ್ಯ, ಭೂಸ್ವಾಧೀನದಂತಹ ಪ್ರಕ್ರಿಯೆಗಳಿಗೆ ಸಂಬಂಧಿಸಿದಂತೆ ಫಾಲೋಅಪ್ ಮಾಡುವುದಿಲ್ಲ, ಹೀಗಾಗಿ ಯೋಜನೆಗಳಲ್ಲಿ ಪ್ರಗತಿಯಾಗುವುದಿಲ್ಲ. ಅಧಿಕಾರಿಗಳ ಇಂತಹ ಕಾರ್ಯವೈಖರಿಯನ್ನು ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ರಾಜನಹಳ್ಳಿ ಏತನೀರಾವರಿ : ಜಿಲ್ಲೆಯ ಜಗಳೂರು ತಾಲ್ಲೂಕಿನ 03 ಮತ್ತು ದಾವಣಗೆರೆ ತಾಲ್ಲೂಕಿನ 19 ಸೇರಿದಂತೆ ಒಟ್ಟು 22 ಕೆರೆಗಳಿಗೆ ನೀರು ತುಂಬಿಸುವ ರಾಜನಹಳ್ಳಿ ಏತ ನೀರಾವರಿ ಯೋಜನೆಯಲ್ಲಿ ಮೊದಲನೆ ಹಂತದಲ್ಲಿ ಹರಿಹರ ತಾಲ್ಲೂಕಿನ ಹಲಸಬಾಳು ಗ್ರಾಮ ಬಳಿ ತುಂಗಭದ್ರಾ ನದಿಯಿಂದ ನೀರೆತ್ತಿ 28 ಕಿ.ಮೀ. ದೂರದಲ್ಲಿರುವ ದಾವಣಗೆರೆ ತಾಲ್ಲೂಕಿನ ಮಲ್ಲಶೆಟ್ಟಿಹಳ್ಳಿ ಗ್ರಾಮದ ಹತ್ತಿರದ ಎರಡನೆ ಹಂತಕ್ಕೆ ನೀರೊದಗಿಸುವುದು. ಎರಡನೆ ಹಂತದಲ್ಲಿ ಉದ್ದೇಶಿತ 22 ಕೆರೆಗಳಿಗೆ 150 ಕಿ.ಮೀ. ಪೈಪ್‍ಲೈನ್ ಮುಖಾಂತರ ನೀರೊದಗಿಸುವ ಯೋಜನೆ ಇದಾಗಿದೆ. ಯೋಜನೆಯಡಿ ಸದ್ಯ 2022 ರ ಜುಲೈ 31 ರವರೆಗೆ ನಿರ್ವಹಣೆ ಗುತ್ತಿಗೆಯನ್ನು ನೀಡಲಾಗಿದೆ ಎಂದು ಯೋಜನೆಯ ಕಾರ್ಯಪಾಲಕ ಅಭಿಯಂತರ ಮಲ್ಲಪ್ಪ ಹೇಳಿದರು. ಹಲಸಬಾಳು ಪಂಪ್‍ಹೌಸ್‍ಗೆ ಸಂಪರ್ಕಿಸುವ 225 ಮೀ. ಉದ್ದ ಹಾಗೂ ಮಲ್ಲಶೆಟ್ಟಿಹಳ್ಳಿ ಬಳಿಯ 50 ಮೀ. ಉದ್ದದ ಇಂಟೇಕ್ ಚಾನಲ್‍ನ ಹೂಳನ್ನು ತೆಗೆಸಲು ಸೂಚನೆ ನೀಡಲಾಗಿದ್ದು, ಸದ್ಯ ಇಂಟೇಕ್‍ಚಾನಲ್‍ನಲ್ಲಿ ನೀರು ಖಾಲಿಯಿದ್ದು, ಮಳೆಗಾಲ ಪ್ರಾರಂಭವಾಗುವುದರ ಒಳಗಾಗಿ ಹೂಳು ತೆಗೆಸಬೇಕು ಎಂದು ಸಂಸದರು ಸೂಚನೆ ನೀಡಿದರು.

ಏತನೀರಾವರಿ ಯೋಜನೆಯ ರಾಷ್ಟ್ರೀಯ ಹೆದ್ದಾರಿ 04 ರ ಪಕ್ಕದಲ್ಲಿರುವ ಪೈಪ್‍ಲೈನ್‍ಅನ್ನು ಸ್ಥಳಾಂತರಿಸುವ ಕಾಮಗಾರಿ ತ್ವರಿತವಾಗಿ ಕೈಗೊಳ್ಳದಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸಂಸದರು, ಸಂಬಂಧಪಟ್ಟ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಏತ ನೀರಾವರಿ ಯೋಜನೆಯ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿ, ಪೈಪ್‍ಲೈನ್ ಸ್ಥಳಾಂತರಿಸುವ ಕಾರ್ಯ ಶೀಘ್ರ ಪೂರ್ಣಗೊಳ್ಳಬೇಕು ಎಂದರು. ಉತ್ತರಿಸಿದ ರಾ.ಹೆ. ಪ್ರಾಧಿಕಾರದ ಅಧಿಕಾರಿಗಳು ಈಗಾಗಲೆ 12 ಕಿ.ಮೀ. ಪೈಕಿ 7.5 ಕಿ.ಮೀ. ಪೈಪ್‍ಲೈನ್ ಸ್ಥಳಾಂತರ ಪೂರ್ಣಗೊಂಡಿದ್ದು, ಇನ್ನೂ 4.5 ಕಿ.ಮೀ. ಕಾಮಗಾರಿ ಬಾಕಿ ಇದೆ. ಭೂಮಿ ಹಸ್ತಾಂತರ ಪ್ರಕ್ರಿಯೆಯಲ್ಲಿ ಸಮಸ್ಯೆಯಿದ್ದು, ವಿಳಂಬವಾಗುತ್ತಿದೆ ಎಂದರು.

ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿ, ಭೂಮಿ ಸ್ವಾಧೀನಕ್ಕೆ ಪಡೆದು, ಪೊಲೀಸ್ ಬಂದೋಬಸ್ತ್ ತೆಗೆದುಕೊಂಡು ಕಾಮಗಾರಿ ಶೀಘ್ರ ಪೂರ್ಣಗೊಳಿಸುವಂತೆ ಸೂಚನೆ ನೀಡಿದರು.

ರಾ.ಹೆ. ನಲ್ಲಿ ನೀರು ನಿಲ್ಲದಂತೆ ಕ್ರಮವಹಿಸಿ : ದಾವಣಗೆರೆಯಿಂದ ಹಾವೇರಿವರೆಗಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ಫ್ಲೈಓವರ್‍ಗಳ ಬಳಿ ಹಾಗೂ ಕೆಳ ಸೇತುವೆ ಬಳಿ ಮಳೆ ನೀರು ರಸ್ತೆಯ ಮೇಲೆಯೇ ನಿಲ್ಲುತ್ತಿದ್ದು, ಇದರಿಂದ ವೇಗವಾಗಿ ಬರುವ ವಾಹನಗಳ ಗಾಜುಗಳಿಗೆ ನೀರು ಸಿಡಿದು ಮುಂದಿನ ರಸ್ತೆ ಕಾಣದಂತಾಗುತ್ತಿದೆ. ಹೀಗಾಗಿ ಅಪಘಾತಕ್ಕೆ ಕಾರಣವಾಗುವ ಎಲ್ಲ ಸಾಧ್ಯತೆಗಳಿವೆ. ತಾವೇ ಖುದ್ದಾಗಿ ಇದರ ಅನುಭವ ಪಡೆದಿದ್ದೇನೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಇಂತಹ ಪ್ರದೇಶಗಳನ್ನು ಗುರುತಿಸಿ, ಸೂಕ್ತ ಕ್ರಮ ವಹಿಸಬೇಕು. ಯಾವುದೇ ಕಾರಣಕ್ಕೂ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಳೆ ನೀರು ನಿಲ್ಲುವಂತಿರಬಾರದು ಎಂದು ತಾಕೀತು ಮಾಡಿದರು.

ಸಭೆಯಲ್ಲಿ ಮಾಯಕೊಂಡ ಕ್ಷೇತ್ರದ ಶಾಸಕ ಪ್ರೊ. ಲಿಂಗಣ್ಣ, ಕರ್ನಾಟಕ ನೀರಾವರಿ ನಿಗಮ ತುಂಗಾ ಮೇಲ್ದಂಡೆ ಯೋಜನಾ ವಲಯದ ಮುಖ್ಯ ಇಂಜಿನಿಯರ್ ಯತೀಶ್‍ಚಂದ್ರ, ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್ ಸೇರಿದಂತೆ ಬೆಸ್ಕಾಂ, ಕೆಪಿಟಿಸಿಎಲ್, ಲೋಕೋಪಯೋಗಿ ಇಲಾಖೆಗಳ ಇಂಜಿನಿಯರ್‍ಗಳು, ತಹಸಿಲ್ದಾರರು ಉಪಸ್ಥಿತರಿದ್ದರು.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top