ದಾವಣಗೆರೆ: ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಎರಡು ಸಲ ಮೋಸ ಆಗಿದ್ದು,ಈ ಸಲ ಮಾತ್ರ ಯಾವ ಮೋದಿ, ವಾಜಪೇಯಿ ಅಲೆ ನಡೆಯೋದಿಲ್ಲ. ನಾವು ಗೆದ್ದೇ ಗೆಲ್ಲುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಎಸ್.ಎಸ್ ಮಲ್ಲಿಕಾರ್ಜುನ ವಿಶ್ವಾಸ ವ್ಯಕ್ತಪಡಿಸಿದರು.
ಎಂಸಿಸಿ ಬಿ ಬ್ಲಾಕ್ ನ ಐಎಂಎ ಭವನದಲ್ಲಿ ಕುಟುಂಬ ಸಮೇತ ಬಂದು ಮತ ಚಲಾಯಿಸಿ ಮಾತನಾಡಿದರು.ಕಳೆದ ಎರಡು ಲೋಕಸಭಾ ಚುನಾವಣೆಯಲ್ಲಿ ಮೋಸ ಆಗಿದೆ. ಈ ಬಾರಿ ರಾಜ್ಯದಲ್ಲಿ ಯಾವುದೇ ಮೋದಿ ಅಲೆ ಇಲ್ಲ. ನಾವು ಕೊಟ್ಟ ಗ್ಯಾರೆಂಟಿ ಹಾಗೂ ಅಭಿವೃದ್ಧಿ ಅಲೆ ಮಾತ್ರ ಇದೆ ಎಂದರು.
ನಮ್ಮ ಪ್ರತಿ ಕಾರ್ಯಕರ್ತರು ಶ್ರಮ ವಹಿಸಿ ಕೆಲಸ ಮಾಡುತ್ತಿದ್ದಾರೆ. ಎಂಟು ವಿಧಾನಸಭಾ ಕ್ಷೇತ್ರದಲ್ಲಿಯೂ ಕಾಂಗ್ರೆಸ್ ಪಕ್ಷ ಅಧಿಕ ಮತ ಪಡೆಯಲಿದ್ದು, ಹೆಚ್ಚು ಅಂತರದಲ್ಲಿ ಗೆಲ್ಲಲಿದೆ ಎಂದರು.
ತಮ್ಮ ಚಿಹ್ನೆ ಗೊತ್ತಾಗದವರನ್ನು ಜನ ಹೇಗೆ ಆಯ್ಕೆ ಮಾಡ್ತರೋ ಗೊತ್ತಿಲ್ಲ. ಮತದಾನ ಮಾಡುವಾಗ ಇನ್ನೊಬ್ಬರು ಹೋಗಿ ಚಿಹ್ನೆ ತೋರಿಸುವುದು ಕಾನೂನು ಬಾಹಿರ ಎಂದು ಹಾಲಿ ಸಂಸದ ಜಿ.ಎಂ.ಸಿದ್ದೇಶ್ವರ, ಅವರ ಪತ್ನಿ ಬಜೆಪಿ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ ವಿರುದ್ಧ ಸಚಿವರು ಕಿಡಿಕಾರಿದರು.
ಕಾಂಗ್ರೆಸ್ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ ಮಾತನಾಡಿ, ಪ್ರಜಾಪ್ರಭುತ್ವದಲ್ಲಿ ಮತದಾನವರು ಎಲ್ಲರ ಹಕ್ಕಾಗಿದ್ದು, ಈ ಬಾರಿ ಕಾಂಗ್ರೆಸ್ ಪಕ್ಷ ಜಯಗಳಿಸಲಿದೆ ಎಂದರು. ಈ ವೇಳೆ ಎಸ್.ಎಸ್ ಮಲ್ಲಿಕಾರ್ಜುನ ಅವರ ಪುತ್ರ ಸಮರ್ಥ ಮಲ್ಲಿಕಾರ್ಜುನ, ಪುತ್ರಿ ಶ್ರೇಷ್ಠಾ ಶಾಮನೂರು ಮಲ್ಲಿಕಾರ್ಜುನ ಮತ ಚಲಾವಣೆ ಮಾಡಿದರು.