ದಾವಣಗೆರೆ: ಮುಂಬರುವ ಸಾರ್ವತ್ರಿಕ ಲೋಕಸಭಾ ಚುನಾವಣೆ ಮಾರ್ಚ್, ಏಪ್ರಿಲ್‍ನಲ್ಲಿ ನಡೆಯುವ ಸಾಧ್ಯತೆಯಿದ್ದು, ಯಾವುದೇ ಮತದಾರರು ಕೈ ಬಿಟ್ಟು ಹೋಗದಂತೆ ಮತದಾರರ ಪಟ್ಟಿ ತಯಾರಿಸಲು ಅಧಿಕಾರಿಗಳು ಮುಂದಾಗಬೇಕೆಂದು ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಎಂ.ವಿ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಮುಂಬುರುವ ಸಾರ್ವತ್ರಿಕ ಲೋಕಸಭಾ ಚುನಾವಣೆ ಪೂರ್ವಸಿದ್ದತಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮತದಾರರ ತಿದ್ದುಪಡಿ, ಸೇರ್ಪಡೆಗೆ ಜನವರಿ 12ರವರೆಗೆ ಅವಧಿ ವಿಸ್ತರಿಸಲಾಗಿದೆ. ಆದ್ದರಿಂದ ಯಾವುದೇ ಗೊಂದಲಗಳಿಗೆ ಅಸ್ಪದ ನೀಡದೇ ಮತದಾರರ ಪಟ್ಟಿಯನ್ನು ತಯಾರಿಸಬೇಕು.
ಶುದ್ದವಾದ ಮತದಾರರ ಪಟ್ಟಿಯಿಂದ ಸಮರ್ಪಕ ಚುನಾವಣೆ ನಡೆಸಲು ಸಾಧ್ಯವಾಗುತ್ತದೆ. 2024ರ ಜನವರಿ 1ಕ್ಕೆ 18 ವರ್ಷ ತುಂಬುವ ಯುವ ಮತದಾರರನ್ನು ಮತದಾರರ ಪಟ್ಟಿಗೆ ಸೇರ್ಪಡೆ ಮಾಡಲು ಮತಗಟ್ಟೆ ಅಧಿಕಾರಿಗಳು ಮನೆಮನೆಗೂ ತೆರಳಿ ಮತದಾರರ ಪಟ್ಟಿ ತಯಾರಿಸಬೇಕು.
ಕರ್ನಾಟಕ ವಿಧಾನ ಪರಿಷತ್ತಿನ ಪದವೀಧರರ ಮತ್ತು ಶಿಕ್ಷಕರ ಕ್ಷೇತ್ರಗಳ ಸ್ಥಾನ ತೆರವು: ಕರ್ನಾಟಕ ವಿಧಾನ ಪರಿಷತ್ತಿನ ವಿವಿಧ ಪದವೀಧರರ ಮತ್ತು ಶಿಕ್ಷಕರ ಕ್ಷೇತ್ರಗಳಿಗೆ ಭಾರತ ಚುನಾವಣಾ ಆಯೋಗವು ಕರ್ನಾಟಕ ವಿಧಾನ ಪರಿಷತ್ತಿನ ಪದವೀಧರರ ಮತ್ತು ಶಿಕ್ಷಕರ ಕ್ಷೇತ್ರದ ಸದಸ್ಯ ಸ್ಥಾನವು 2024ರ ಜೂನ್ 21 ರಂದು ತೆರವಾಗುತ್ತವೆ.
ಕರ್ನಾಟಕ ನೈರುತ್ಯ ಪದವೀಧರರ ಕ್ಷೇತ್ರಕ್ಕೆ ಚನ್ನಗಿರಿ, ಹೊನ್ನಾಳಿ ನ್ಯಾಮತಿ ತಾಲ್ಲೂಕುಗಳು ಬರಲಿವೆ. ಸದಸ್ಯ ಆಯನೂರು ಮಂಜುನಾಥ್ ಹಾಗೂ ಕರ್ನಾಟಕ ಆಗ್ನೇಯ ಶಿಕ್ಷಕರ ಕ್ಷೇತ್ರ ದಾವಣಗೆರೆ, ಹರಿಹರ ಮತ್ತು ಜಗಳೂರು ತಾಲ್ಲೂಕು ಸದಸ್ಯರಾದ ಡಾ.ವೈ.ಎ ನಾರಾಯಣಸ್ವಾಮಿ ಹಾಗೂ ಕರ್ನಾಟಕ ನೈರುತ್ಯ ಶಿಕ್ಷಕರ ಕ್ಷೇತ್ರ ಚನ್ನಗಿರಿ ಹೊನ್ನಾಳಿ, ನ್ಯಾಮತಿ ತಾಲ್ಲೂಕಿನ ಸದಸ್ಯ ಎಸ್.ಎಲ್ ಭೋಜೇಗೌಡ ಇರುವ ಸ್ಥಾನಗಳು ತೆರವಾಗುತ್ತವೆ.
ಕರಡು ಮತದಾರರ ಪಟ್ಟಿ ಪ್ರಕಟ : ಕರ್ನಾಟಕ ವಿಧಾನ ಪರಿಷತ್ತಿನ ವಿವಿಧ ಪದವೀಧರರ ಮತ್ತು ಶಿಕ್ಷಕರ ಕ್ಷೇತ್ರಗಳಿಗೆ 2023 ಡಿಸೆಂಬರ್ 30 ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಚುರಪಡಿಸಲಾಗಿದೆ. ಕರ್ನಾಟಕ ಆಗ್ನೇಯ ಶಿಕ್ಷಕರ ಕ್ಷೇತ್ರ ದಾವಣಗೆರೆ, ಹರಿಹರ ಮತ್ತು ಜಗಳೂರು ತಾಲ್ಲೂಕುಗಳಲ್ಲಿ ಒಟ್ಟು 2,564 ಪುರುಷ ಮತದಾರರು, 1,384 ಮಹಿಳಾ ಮತದಾರರನ್ನು ಒಳಗೊಂಡಂತೆ ಒಟ್ಟು 3,948 ಮತದಾರರಿದ್ದಾರೆ.
ಕರ್ನಾಟಕ ನೈರುತ್ಯ ಶಿಕ್ಷಕರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ನ್ಯಾಮತಿ, ಹೊನ್ನಾಳಿ ಹಾಗೂ ಚನ್ನಗಿರಿ ತಾಲ್ಲೂಕು (ಬಸವಪಟ್ಟಣ-1 ಮತ್ತು 2ನೇ ಹೋಬಳಿ, ಸಂತೆಬೆನ್ನೂರು-1 ಮತ್ತು 2ನೇ ಹೋಬಳಿ, ದೇವರಹಳ್ಳಿ ಗ್ರಾಮ ಹೊರತು ಪಡಿಸಿ) ಚನ್ನಗಿರಿ ತಾಲ್ಲೂಕು ಕಸಬಾ, ಉಬ್ರಾಣಿ ಹೋಬಳಿ, ದೇವರಹಳ್ಳಿ ಗ್ರಾಮಗಳಲ್ಲಿ ಒಟ್ಟು 688 ಪುರುಷ ಮತದಾರರು, 246 ಮಹಿಳಾ ಮತದಾರರನ್ನು ಒಳಗೊಂಡಂತೆ ಒಟ್ಟು 934 ಮತದಾರರಿದ್ದಾರೆ.
ಕರ್ನಾಟಕ ನೈರುತ್ಯ ಪದವೀಧರರ ಕ್ಷೇತ್ರ ಚನ್ನಗಿರಿ ತಾಲ್ಲೂಕು (ಬಸವಪಟ್ಟಣ-1 ಮತ್ತು 2ನೇ ಹೋಬಳಿ, ಸಂತೇಬೆನ್ನೂರು-1 ಮತ್ತು 2ನೇ ಹೋಬಳಿ, ದೇವರಹಳ್ಳಿ ಗ್ರಾಮ ಹೊರತು ಪಡಿಸಿ) ಚನ್ನಗಿರಿ ತಾಲ್ಲೂಕು ಕಸಬಾ, ಉಬ್ರಾಣಿ ಹೋಬಳಿ, ದೇವರಹಳ್ಳಿ ಗ್ರಾಮ ಒಟ್ಟು 3,900 ಪುರುಷ ಮತದಾರರು 2096 ಮಹಿಳಾ ಮತದಾರರನ್ನು ಒಳಗೊಂಡಂತೆ ಒಟ್ಟು 5,117 ಮತದಾರರಿದ್ದಾರೆ.ಅಪರ ಜಿಲ್ಲಾಧಿಕಾರಿ ಪಿ.ಎನ್ ಲೋಕೇಶ್, ಮತಗಟ್ಟೆ ಹಂತದ ಅಧಿಕಾರಿಗಳು ಹಾಗೂ ವಿವಿಧ ರಾಜಕೀಯ ಪಕ್ಷಗಳ ಮುಖಂಡರಿ ಉಪಸ್ಥಿತರಿದ್ದರು.