ದಾವಣಗೆರೆ: ದಾವಣಗೆರೆ ಲೋಕಸಭಾ ಕ್ಷೇತ್ರದ ಮತದಾನ ಮೇ 7 ರಂದು ಬೆಳಗ್ಗೆ 7 ರಿಂದ ಪ್ರಾರಂಭವಾಗುತ್ತದೆ. ಮತದಾನಕ್ಕೂ ಮೊದಲು ಬೆಳಗ್ಗೆ 5.30 ಕ್ಕೆ ಅಣಕು ಮತದಾನ ಆರಂಭವಾಗಲಿದೆ, ಈ ವೇಳೆ ಅಭ್ಯರ್ಥಿಗಳ ಏಜೆಂಟರು ಹಾಜರಿರಬೇಕೆಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ; ವೆಂಕಟೇಶ್ ಎಂ.ವಿ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಹಾಗೂ ಚುನಾವಣಾ ಕಣದಲ್ಲಿನ ಅಭ್ಯರ್ಥಿಗಳಿಗೆ 48 ಗಂಟೆಗಳಲ್ಲಿ ಅನುಸರಿಸಬೇಕಾದ ಮಾರ್ಗಸೂಚಿಗಳ ಬಗ್ಗೆ ಮಾಹಿತಿ ನೀಡುವ ವೇಳೆ ಮಾತನಾಡಿದರು.
ಮತದಾನ ಮುಕ್ತಾಯವಾಗುವ 48 ಗಂಟೆಯೊಳಗೆ ಬಹಿರಂಗ ಪ್ರಚಾರಕ್ಕೆ ತೆರೆಬೀಳಲಿದ್ದು ಮನೆ ಮನೆ ಪ್ರಚಾರಕ್ಕೆ ಮಾತ್ರ ಅವಕಾಶ ಇದೆ. ಈ ಸಮಯದಲ್ಲಿ 144 ಸೆಕ್ಷನ್ ಜಿಲ್ಲೆಯಲ್ಲಿ ಜಾರಿಗೊಳಿಸಲಾಗಿದ್ದು 5 ಜನರಿಗಿಂತ ಹೆಚ್ಚಾಗಿ ಗುಂಪು ಸೇರುವಂತಿಲ್ಲ. ಮನೆ ಮನೆ ಪ್ರಚಾರದ ವೇಳೆ ಇದು ಅನ್ವಯವಾಗುವುದಿಲ್ಲ, ಆದರೆ ಯಾರಿಗೂ ತೊಂದರೆಯಾಗಂತೆ ಮನೆ ಮನೆ ಪ್ರಚಾರ ಮಾಡಬೇಕೆಂದು ತಿಳಿಸಿದರು.
ಅಣಕು ಮತದಾನ ಬೇಗ ಆರಂಭ; ಮೇ 7 ರಂದು ಬೆಳಗ್ಗೆ 7 ಗಂಟೆಯಿಂದ ಮತದಾನ ಆರಂಭವಾಗಲಿದ್ದು ಇದಕ್ಕೂ ಮೊದಲು ಏಜೆಂಟರ್ ಸಮಕ್ಷಮ ಅಣಕು ಮತದಾನ ಮಾಡಬೇಕು. ಚುನಾವಣಾ ಕಣದಲ್ಲಿ 30 ಅಭ್ಯರ್ಥಿಗಳಿದ್ದು ನೋಟಾ ಸೇರಿ 31 ಆಗಲಿದೆ. ಪ್ರತಿಯೊಬ್ಬರಿಗೂ 2 ಮತ ಹಾಕಬೇಕಾಗಿರುವುದರಿಂದ ಹೆಚ್ಚು ಸಮಯ ತೆಗೆದುಕೊಳ್ಳಲಿದೆ. ಇದಕ್ಕಾಗಿ ಬೆಳಗ್ಗೆ 5.30 ಕ್ಕೆ ಅಣಕು ಮತದಾನ ಪ್ರಕ್ರಿಯೆಗಳು ಪ್ರಾರಂಭವಾಗಲಿದ್ದು ಅಭ್ಯರ್ಥಿಗಳ ಏಜೆಂಟರು ಆ ಸಮಯದಲ್ಲಿ ಇರುವಂತೆ ನೋಡಿಕೊಳ್ಳಬೇಕೆಂದು ತಿಳಿಸಿದರು.
ಬಹಿರಂಗ ಪ್ರಚಾರ ಅಂತ್ಯವಾದ ನಂತರ ಯಾವುದೇ ಸಭೆ, ಸಮಾರಂಭ ನಡೆಸುವಂತಿಲ್ಲ. ಧ್ವನಿವರ್ಧಕ ಬಳಸುವಂತಿಲ್ಲ, 48 ಗಂಟೆಗಳ ಅವಧಿಯಲ್ಲಿ ಅಭ್ಯರ್ಥಿಗೆ 1, ಏಜೆಂಟ್‍ಗೆ 1 ಹಾಗೂ ಎಲ್ಲಾ ವಿಧಾನಸಭಾ ಕ್ಷೇತ್ರಕ್ಕೆ 1 ವಾಹನ ಪಡೆಯಲು ಅವಕಾಶ ಇದೆ. ಮತದಾನ ದಿನ ಮತಗಟ್ಟೆಯಿಂದ 200 ಮೀಟರ್ ಅಂತರದಲ್ಲಿ 10×10 ಅಳತೆಯಲ್ಲಿ ಪೆಂಡಾಲ್ ಹಾಕಿಕೊಂಡು ಬಿಳಿ ಹಾಳೆಯಲ್ಲಿ ಮತಚೀಟಿ ನೀಡಲು ಮಾತ್ರ ಅವಕಾಶ, ಪಕ್ಷದ ಚಿಹ್ನೆ, ಗುರುತು, ಹೆಸರನ್ನು ಮುದ್ರಿಸಿ ನೀಡುವಂತಿಲ್ಲ, ಪೆಂಡಾಲ್ ಹಾಕಲು ಅನುಮತಿ ಪಡೆಯಬೇಕೆಂದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸೈಯ್ಯದಾ ಆಫ್ರೀನ್ ಭಾನು ಎಸ್.ಬಳ್ಳಾರಿ ಹಾಗೂ ವಿವಿಧ ರಾಜಕೀಯ ಪಕ್ಷಗಳ ಪದಾಧಿಕಾರಿಗಳು, ಅಭ್ಯರ್ಥಿಗಳು ಉಪಸ್ಥಿತರಿದ್ದರು.



