ದಾವಣಗೆರೆ: ಲೋಕಸಭಾ ಚುನಾವಣೆ ಮತದಾನವು ಮೇ 7 ರಂದು ನಡೆಯಲಿದ್ದು ಮುಕ್ತ, ನ್ಯಾಯ ಸಮ್ಮತ, ಪಾರದರ್ಶಕ, ಸಾರ್ವಜನಿಕ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡಲು ಮೇ 5 ರ ಸಂಜೆ 6 ಗಂಟೆಯಿಂದ ಮೇ 7 ರಂದು ಮತದಾನ ಮುಕ್ತಾಯವಾಗುವವರೆಗೂ ಜಿಲ್ಲೆಯಾದ್ಯಂತ 144 ಸೆಕ್ಷನ್ ಅನ್ವಯ ಎಲ್ಲಾ ಮತಗಟ್ಟೆಗಳ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾ ದಂಡಾಧಿಕಾರಿ ಡಾ; ವೆಂಕಟೇಶ್ ಎಂ.ವಿ ಆದೇಶಿಸಿದ್ದಾರೆ.
ಮತದಾರರನ್ನು ಹೊರತುಪಡಿಸಿ 5 ಜನರಿಗಿಂತ ಹೆಚ್ಚು ಗುಂಪು ಸೇರುವಂತಿಲ್ಲ, ಯಾವುದೇ ರಾಜಕೀಯ, ಧಾರ್ಮಿಕ ಮೆರವಣಿಗೆ ಮಾಡುವಂತಿಲ್ಲ, ಶಸ್ತ್ರಾಸ್ತ್ರಗಳು, ಮಾರಕಾಸ್ತ್ರ, ದೊಣ್ಣೆ, ಕಲ್ಲು, ಚಾಕು, ಇಟ್ಟಿಗೆ, ಕೋಲು ಸೇರಿದಂತೆ ದೈಹಿಕ ಹಿಂಸೆ ಮಾಡಬಲ್ಲ ಯಾವುದೇ ಆಯುಧಗಳನ್ನು ತೆಗೆದುಕೊಂಡು ಓಡಾಡುವಂತಿಲ್ಲ. ಪ್ರಚೋದನಾಕಾರಿ ಭಾಷಣ, ಸಭೆ, ಸಮಾರಂಭ ಮಾಡುವುದು ನಿಷೇಧ. ಮತಗಟ್ಟೆಯೊಳಗೆ ಮೊಬೈಲ್ ಫೋನ್, ಕಾರ್ಡ್‍ಲೆಸ್ ಫೋನ್ ಸೇರಿದಂತೆ ಇನ್ನಿತರೆ ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ತೆಗೆದುಕೊಂಡು ಹೋಗುವಂತಿಲ್ಲ. ಕ್ಷೇತ್ರದಲ್ಲದವರು ಕ್ಷೇತ್ರದಿಂದ ಹೊರ ಹೋಗಿರಬೇಕು ಎಂದು ಆದೇಶದಲ್ಲಿ ತಿಳಿಸಿದ್ದಾರೆ.



