ದಾವಣಗೆರೆ: ಇಂದು ಬೆಳಿಗ್ಗೆ ಸಂಸದ ಜಿ.ಎಂ.ಸಿದ್ದೇಶ್ವರ, ಪಾಲಿಕೆ ಸದಸ್ಯರು, ಜಿಲ್ಲಾಧಿಕಾರಿ ಹಾಗೂ ಅಧಿಕಾರಿಗಳ ತಂಡ ಸಿಟಿ ರೌಂಡ್ಸ್ ಹಾಕಿ. ನಗರದಲ್ಲಿ ನಡೆಯುತ್ತಿರುವ ಸ್ಮಾರ್ಟ್ ಸಿಟಿ ಕಾಮಗಾರಿಗಳನ್ನು ವೀಕ್ಷಿಸಿದರು.
ಜಿಲ್ಲಾಧಿಕಾರಿಗಳ ತಂಡದೊಂದಿಗೆ ನಗರದ ಜಿಎಂಐಟಿ ಕಾಲೇಜಿನಿಂದ ಹೊರಟ ತಂಡ ಶಿವಾಲಿ ಟಾಕೀಸ್, ಹಿಂದು ರುದ್ರಭೂಮಿ, ಗಾಂಧೀನಗರ ವೃತ್ತ, ಅಂಬೇಡ್ಕರ್ ವೃತ್ತ, ಭಾಷಾನಗರ, ಎಸ್‍ಪಿಎಸ್ ನಗರ, ಯಲ್ಲಮ್ಮ ನಗರ ಸೇರಿದಂತೆ ಕುಂದವಾಡ ಕೆರೆ ಹಾಗೂ ಸುತ್ತಮುತ್ತ ಇರುವ ಸ್ಥಳಗಳಿಗೆ ಭೇಟಿ ನೀಡಿ ಕಾಮಗಾರಿಗಳನ್ನು ವೀಕ್ಷಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ಜಿ.ಎಂ ಸಿದ್ದೇಶ್ವರ್, ನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯ ಕಾಮಗಾರಿಗಳು ಸಮರ್ಪಕವಾಗಿ ನಡೆಯುತ್ತಿಲ್ಲ. ಶಿವಾಲಿ ಟಾಕೀಸ್ ಸುತ್ತಮುತ್ತ ಇರುವ ಒಳಚರಂಡಿ ಕಾಮಗಾರಿ ಅತ್ಯಂತ ನಿಧಾನಗತಿಯಲ್ಲಿ ಸಾಗುತ್ತಿದ್ದು, ಅಲ್ಲಿ ವಾಸಿಸುವ ಜನರು ಕಸ-ಕಡ್ಡಿಗಳನ್ನು ಎಲ್ಲೆಂದರಲ್ಲಿಯೇ ಎಸೆಯುತ್ತಿದ್ದಾರೆ. ಇದರಿಂದ ಮಾಲಿನ್ಯ ಉಂಟಾಗಿ ರೋಗ-ರುಜಿನಗಳು ಹೆಚ್ಚುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಗರದಲ್ಲಿ ಸ್ವಚ್ಛತೆಯ ಕೆಲಸವಾಗಬೇಕಾಗಿದ್ದು, ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ಜನರಲ್ಲಿ ಸ್ವಚ್ಛತೆಯ ಕುರಿತು ಅರಿವು ಮೂಡಿಸಬೇಕು. 2021 ರ ವೇಳೆಗೆ ಮುಗಿಯಬೇಕಿದ್ದ ಜಲಸಿರಿ ಯೋಜನೆಯ ಕಾಮಗಾರಿಯನ್ನು 2022 ರೊಳಗೆ ಪೂರ್ಣಗೊಳಿಸಿ ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಪೂರೈಸಬೇಕು. ಒಂದು ವೇಳೆ ಈ ಕಾಮಗಾರಿಗಳು ತ್ವರಿತ ಗತಿಯಲ್ಲಿ ನಡೆಯದಿದ್ದರೆ ಸಂಬಂಧಿಸಿದ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಕುಂದುವಾಡ ಕೆರೆ ಕಾಮಗಾರಿ ಭರದಿಂದ ಸಾಗುತ್ತಿದ್ದು, ಹೆಚ್ಚು ನೀರು ಸಂಗ್ರಹದೊಂದಿಗೆ ಕೆರೆಯ ಸೌಂದರ್ಯೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಇದರಿಂದ ನಗರದ ನಾಗರಿಕರಿಗೆ ಸಾಕಷ್ಟು ನೀರು ಒದಗಿಸಲಾಗುತ್ತಿದೆ. ಹಾಗೂ ಬೆಳಗಿನ ವಾಯುವಿಹಾರಕ್ಕೆ ಉತ್ತಮ ಪರಿಸರವಿದ್ದು, ಆರೋಗ್ಯ ಕಾಪಾಡಿಕೊಳ್ಳಲು ಅನುಕೂಲವಾಗುತ್ತದೆ ಎಂದು ತಿಳಿಸಿದರು.
ಕೊರೋನ ಸೋಂಕಿನಿಂದ ಉಂಟಾದ ಲಾಕ್‍ಡೌನ್ ಪರಿಣಾಮದಿಂದಾಗಿ ನಗರ ವೀಕ್ಷಣೆ ಮಾಡಲು ಸಾಧ್ಯವಾಗಲಿಲ್ಲ. ಆದರೆ ಇದೀಗ ನಗರದ ಸ್ವಚ್ಚತೆಯತ್ತ ಗಮನಹರಿಸಿದ್ದು ಕಸಮುಕ್ತ ನಗರವನ್ನಾಗಿ ಮಾಡಲು ಪ್ರಯತ್ನಿಸುತ್ತಿದ್ದೇವೆ. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಮತ್ತು ಮಹಾನಗರಪಾಲಿಕೆ ಶ್ರಮಿಸಬೇಕು. ಹಾಗೂ ನಗರದ ಸುತ್ತಮುತ್ತ ಸ್ವಚ್ಚತೆಯನ್ನು ಕಾಯ್ದುಕೊಳ್ಳಲು ಜನರಲ್ಲಿ ಜಾಗೃತಿ ಮೂಡಿಸಬೇಕು. ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ನಿಧಾನಗತಿಯಲ್ಲಿ ಸಾಗುತ್ತಿರುವ ಕಾಮಗಾರಿಗಳನ್ನು ಪೂರೈಸಬೇಕು ಎಂದರು.
ಕುಂದವಾಡ ಕೆರೆಯ ಪಶ್ಚಿಮ ಭಾಗದಲ್ಲಿ ನೀರು ಸೋರಿಕೆಯಾಗುತ್ತಿದ್ದು ಅದನ್ನು ತಡೆಗಟ್ಟಲು ಹೆಚ್.ಡಿ.ಇ.ಪಿ ಪ್ಲಾಸ್ಟಿಕ್ ಅಳವಡಿಸಲಾಗಿದೆ. ಹಾಗೂ ಕೆರೆಯ ಸುತ್ತಮುತ್ತ ಇರುವ ಕಾರ್ಖಾನೆ, ಹೊಲ-ಗದ್ದೆ ಗಳಿಂದ ಬರುವ ಕಲುಷಿತ ನೀರನ್ನು ಕೆರೆಗೆ ಹರಿಸದಂತೆ ಎಚ್ಚರವಹಿಸಬೇಕು ಎಂದರು.
ಮುಂದಿನ ದಿನಗಳಲ್ಲಿ 10 ದಿನಗಳಿಗೊಮ್ಮೆ ಅಧಿಕಾರಿಗಳು ಮೂರು ನಾಲ್ಕು ತಂಡ ರಚಿಸಿಕೊಂಡು ನಗರದ ಸುತ್ತಮುತ್ತ ಸಂಚರಿಸಿ ಕಾಮಗಾರಿ ಹಾಗೂ ಸ್ವಚ್ಚತೆಯ ಕುರಿತು ಪರಿಶೀಲನೆ ನಡೆಸಿ, ನನಗೆ ವರದಿ ನೀಡಬೇಕು ಎಂದು ಸೂಚಿಸಿದರು. ಈ ಸಂದರ್ಭದಲ್ಲಿ ಮಹಾನಗರಪಾಲಿಕೆ ಉಪಮೇಯರ್ ಶಿಲ್ಪ ಜಯಪ್ರಕಾಶ್, ಆಯುಕ್ತರಾದ ವಿಶ್ವನಾಥ್ ಮುದಜ್ಜಿ, ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಡಿ. ಮಲ್ಲಾಪುರ ಸೇರಿದಂತೆ ಮಹಾನಗರಪಾಲಿಕೆಯ ಸದಸ್ಯರು ಪಾಲ್ಗೊಂಡಿದ್ದರು.