ದಾವಣಗೆರೆ: ಬಿರು ಬಿಸಿಲಿನಿಂದ ಕಂಗೆಟ್ಟಿದ್ದ ಇಳೆಗೆ ವರುಣ ತಂಪೆರೆದಿದ್ದಾನೆ. ಇಂದು (ಏ.19) ಸಂಜೆ ಜಿಲ್ಲೆಯ ಕೆಲ ಪ್ರದೇಶದಲ್ಲಿ ಏಕಾಏಕಿ ಗುಡುಗು, ಸಿಡಿಲು, ಬಿರು ಗಾಳಿ ಸಹಿತ ಭಾರಿ ಮಳೆಯಾಗಿದೆ. ಜಿಲ್ಲೆಯ ಆಲೂರು, ಪುಟಗನಾಳ್, ಮಗಾನಹಳ್ಳಿ, ಕಡ್ಲೆಬಾಳು, ಕೊಂಡಜ್ಜಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಭಾರಿ ಮಳೆಯಾಗಿದೆ. ಬಿರು ಗಾಳಿಗೆ ಮರಗಳು ಧರೆಗೆ ಉರುಳಿದ್ದು, ರಸ್ತೆ ಸಂಚಾರಕ್ಕೆ ಹಾನಿಯಾಗಿದೆ. ಹಂಚು, ತಗಡು ಹಾರಿ ಹೋಗಿವೆ. ಅನೇಕ ಕಡೆ ವಿದ್ಯುತ್ ಕಂಬಗಳು ನೆಲಕ್ಕೆ ಉರುಳಿ ಬಿದ್ದಿವೆ. ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.
ಬಿಸಿಲಿನ ತಾಪಮಾನದಿಂದ ಕಂಗೆಟ್ಟಿದ್ದ ಜನಕ್ಕೆ ಸಂಜೆಯ ಮಳೆ ತುಸು ನಿಟ್ಟುಸಿರು ಬಿಡುವಂತೆ ಮಾಡಿದೆ. ಸಂಜೆ 5 ಗಂಟೆಯಿಂದಲೇ ದಟ್ಟ ಮೋಡ ಆವರಿಸಿತ್ತು. ಜೋರು ಗಾಳಿ, ಗುಡುಗು, ಸಿಡಿಲು ಸಹಿತ ಉತ್ತಮ ಮಳೆಯಾಗಿದೆ. ಬಿಸಿಲಿನ ತಾಪಮಾನದಿಂದ ಬಸವಳಿದು ಹೋಗಿದ್ದ ಜಿಲ್ಲೆಯ ಜನರು ಮಳೆ ಆಗಮನವನ್ನೇ ಎದುರು ನೋಡುತ್ತಿದ್ದರು. ಬಿಸಿ ಗಾಳಿಯಿಂದ ಸುಡುತ್ತಿದ್ದ ವಾತಾವರಣ ತುಸು ತಂಪಾಗಿಸಿದೆ. ಮುಂಗಾರಿನ ಕೃಷಿಕಾರ್ಯಕ್ಕೆ ಉತ್ತಮ ಹದ ಮಳೆಯಾಗಿದೆ. ಈ ಮಳೆ ಅಡಿಕೆ ಬೆಳೆಗೆ ಮಳೆ ತಂಪೆರೆದಿದೆ.
ಇನ್ನೂ ಎರಡು ದಿನ ಗುಡುಗು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜ್ಯದ 27ಕ್ಕೂ ಅಧಿಕ ಜಿಲ್ಲೆಗಳಲ್ಲಿ ಮಳೆಯಾಗಲಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು, ವಿಜಯನಗರದಲ್ಲಿ ಮಳೆಯಾಗಲಿದೆ. 30-40 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.



