ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆಗೆ ಮೇಯರ್ ಚುನಾವಣೆಯಲ್ಲಿ ಕೊನೆ ಕ್ಷಣದಲ್ಲಿ ಹೈಡ್ರಾಮ ನಡೆಯಿತು. ಇಂದು (ಮಾ.04) ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ನ ವಿನಾಯಕ ಪೈಲ್ವಾನ್ ಬಿಜೆಪಿ ಪಾಳ್ಯದಲ್ಲಿ ಗುರುತಿಸಿಕೊಂಡಿದ್ದರಿಂದ ಪಾಲಿಕೆಯಲ್ಲಿ ಗದ್ದಲದ ವಾತಾವಣ ನಿರ್ಮಾಣವಾಗಿತ್ತು. ಭಾರಿ ಗದ್ದಲ, ನೂಕಾಟ ನಡುವೆ ನೂತನ ಮೇಯರ್ ಆಗಿ ಬಿಜೆಪಿಯಿಂದ ವಿನಾಯಕ ಪೈಲ್ವಾನ ಆಯ್ಕೆಯಾದರು.
ಸತತ ನಾಲ್ಕನೇ ಬಾರಿಗೂ ಆಪರೇಷನ್ ಕಮಲದ ಮೂಲಕ ಗದ್ದಲದ ನಡುವೆ ಬಿಜೆಪಿ ಅಧಿಕಾರ ಉಳಿಸಿಕೊಳ್ಳುವಲ್ಲಿ
ಯಶಸ್ವಿಯಾಗಿದೆ. ಮಧ್ಯಾಹ್ನ 12 ಗಂಟೆಗೆ ವಿನಾಯಕ ಪೈಲ್ವಾನ್ ಅವರನ್ನು ನಾಮಪತ್ರ ಸಲ್ಲಿಸಲು ಬಿಜೆಪಿ ಸದಸ್ಯರು ಭದ್ರತೆ ನಡುವೆ ಕರೆ ತಂದಿದ್ದರು. ಬಿಜೆಪಿ ಮಾಜಿ ಮೇಯರ್
ಎಸ್.ಟಿ. ವೀರೇಶ್, ಕೆ.ಪ್ರಸನ್ನಕುಮಾರ್, ಸೋಗಿ ಶಾಂತಕುಮಾರ್ ವಿನಾಯಕ ಪೈಲ್ವಾನ್ ಅವರನ್ನು ಸುತ್ತುವರೆದು ಭದ್ರತೆ ನಡುವೆ ನಾಮಪತ್ರ ಸಲ್ಲಿಸುವಲ್ಲಿ ಯಶಸ್ವಿಯಾದರು. ಕಾಂಗ್ರೆಸ್ ಸದಸ್ಯರು ಭಾರಿ ಗದ್ದಲ ಮಾಡಿ, ಬಿಜೆಪಿ ವಿರುದ್ಧ ಘೋಷಣೆ ಕೂಗಿದರೂ ಯಾವುದೇ ಪ್ರಯೋಜನ ಆಗಲಿಲ್ಲ.
ಒಟ್ಟು 45 ಸದಸ್ಯತ್ವ ಬಲದ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ 24 ಸ್ಥಾನದೊಂದಿಗೆ ಬಹುಮತ ಹೊಂದಿತ್ತು. ಆದರೆ, ಪರಿಶಿಷ್ಟ ಪಂಗಡಕ್ಕೆ ಮೇಯರ್ ಸ್ಥಾನ ಮೀಸಲಾಗಿದ್ದರಿಂದ ಬಿಜೆಪಿಯಲ್ಲಿ ಯಾರು ಇರಲಿಲ್ಲ. ಹೀಗಾಗಿ 20 ಸ್ಥಾನದ ಕಾಂಗ್ರೆಸ್ ಅಧಿಕಾರಕ್ಕೇರಲು ಸಿದ್ಧತೆ ಮಾಡಿಕೊಂಡಿತ್ತು. ಕಾಂಗ್ರೆಸ್ ಈ ಬಾರಿ ಅಧಿಕಾರಕ್ಕೇರುವುದು ಪಕ್ಕಾ ಎಂದಕೊಂಡಿತ್ತು.ಆದರೆ, ಕೊನೆ ಕ್ಷಣದಲ್ಲಿ ಕಾಂಗ್ರೆಸ್ ನ ವಿನಾಯಕ ಪೈಲ್ವಾನ ಬಿಜೆಪಿ ಕಡೆ ಗುರುತಿಸಿಕೊಂಡು ಕಾಂಗ್ರೆಸ್ ಲೆಕ್ಕಾಚಾರ ಉಲ್ಟಾ ಮಾಡಿದರು.
ಮೇಯರ್ ಸ್ಥಾನಕ್ಕೆ ಕಾಂಗ್ರೆಸ್ ನಿಂದ ಸವಿತಾ ಗಣೇಶ್ ಮತ್ತು ವಿನಾಯಕ ಪೈಲ್ವಾನ್ ಹಾಗೂ ಉಪ ಮೇಯರ್ ಸ್ಥಾನಕ್ಕೆ ಶಿವಲೀಲಾ ಕೊಟ್ರೇಶ್ ಯಶೋದಾ ನಾಮಪತ್ರ ಸಲ್ಲಿಸಿದ್ದರು.ಕಾಂಗ್ರೆಸ್ ಸವಿತಾ ಗಣೇಶ್ ಹುಲ್ಲಮನಿ ಅವರನ್ನು ಮೇಯರ್ ಮಾಡುವುದಾಗಿ ಭರವಸೆ ನೀಡಿದ್ದ ಹಿನ್ನೆಲೆ ವಿನಾಯಕ ಪೈಲ್ವಾನ್ ಅಸಮಾಧಾನಗೊಂಡು ಬಿಜೆಪಿ ಕಡೆ ವಾಲಿದ್ದಾರೆ. ಕಳೆದ ಎರಡು ಬಾರಿ ಚುನಾವಣೆಯಲ್ಲೂ ಕಾಂಗ್ರೆಸ್ ಸದಸ್ಯರಿಗೆ ಗಾಳ ಹಾಕಿ, ಕಾಂಗ್ರೆಸ್ ಗೆ ಪೆಟ್ಟು ನೀಡಿ ಅಧಿಕಾರ ಹಿಡಿದಿದ್ದ ಬಿಜೆಪಿ, ಈ ಬಾರಿಯೂ ಕಾಂಗ್ರೆಸ್ ಸದಸ್ಯ ವಿನಾಯಕ ಪೈಲ್ವಾನ್ ಗೆ ಗಾಳ ಬೀಸಿದೆ.ಆಡಳಿತಾರೂಢ ಬಿಜೆಪಿ ಅಗತ್ಯ ಬಹುಮತ ಹೊಂದಿದ್ದರೂ ಮೇಯರ್ ಸ್ಥಾನ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದ್ದು, ಬಿಜೆಪಿಯಲ್ಲಿ ಪರಿಶಿಷ್ಟ ಪಂಗಡವರು ಯಾರು ಇಲ್ಲ. ಕೊನೆಗೆ ಕಾಂಗ್ರೆಸ್ ನ ವಿನಾಯಕ ಪೈಲ್ವಾನ್ ಅವರನ್ನು ಸೆಳೆಯುವಲ್ಲಿ ಯಶಸ್ವಿಯಾದ ಬಿಜೆಪಿ ಅಧಿಕಾರ ಉಳಿಸಿಕೊಂಡಿದೆ.
ಮೇಯರ್ ಉಪ ಮೇಯರ್ ಸ್ಥಾನದ ಮೀಸಲಾತಿ ಘೋಷಣೆ ನಂತರ ಕೈ ಪಾಳೆಯ ಉತ್ಸಾಹದಲ್ಲಿತ್ತು. ಮೇಯರ್ ಸ್ಥಾನಕ್ಕೆ ಪರಿಶಿಷ್ಟ ಪಂಗಡದ ಐವರಿದ್ದರು. ಮೇಯರ್ ನಮಗೇ ಎಂದು ಕಾಂಗ್ರೆಸ್ ಸದಸ್ಯರು ವಿಶ್ವಾಸದಲ್ಲಿದ್ದರು. ಮೇಯರ್ ಸ್ಥಾನ ಬಿಟ್ಟುಕೊಡಲು ಬಿಜೆಪಿ ಸುತಾರಾಂ ಸಿದ್ಧ ಇರಲಿಲ್ಲ. ಕೊನೆಗೂ ಆಪರೇಷನ್ ಕಮಲದ ಮೂಲಕ ಮೇಯರ್ ಉಳಿಸಿಕೊಂಡಿದೆ.



