ದಾವಣಗೆರೆ: ಜಿಲ್ಲೆಯ ಮಾಯಕೊಂಡ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಆಗಿರುವ ಪುಷ್ಪಾ ವಾಗೀಶ್ ಮತ್ತು ಅವರ ಪತಿ ಬಿ.ಎಂ.ವಾಗೀಶಸ್ವಾಮಿ ಬೇಡ ಜಂಗಮ ನಕಲಿ ಜಾತಿ ಪ್ರಮಾಣಪತ್ರ ಪಡೆದು ಪರಿಶಿಷ್ಟರಿಗೆ ವಂಚನೆ ಮಾಡಿದ್ದು, ಅವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿ ಬಂಧಿಸಬೇಕು ಎಂದು ಪರಿಶಿಷ್ಟ ಜಾತಿಗಳ ರಕ್ಷಣಾ ವೇದಿಕೆ ಆಗ್ರಹಿಸಿದೆ.
ವೇದಿಕೆಯ ಸಂಚಾಲಕ ಚಿನ್ನಸಮುದ್ರ ಶೇಖರ್‌ನಾಯ್ಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಂಶವೃಕ್ಷ ಮತ್ತು ದಾಖಲಾತಿ ಪ್ರಕಾರ ಲಿಂಗಾಯತರಾದ ಬಿ. ಎಂ.ವಾಗೀಶ್ ಸೇರಿ ಏಳು ಮಂದಿ ಕುಟುಂಬ ಸದಸ್ಯರು ಬೆಂಗಳೂರು ದಕ್ಷಿಣ ಜಿಲ್ಲೆಯ ವ್ಯಾಪ್ತಿಯಲ್ಲಿ ಬೇಡ ಜಂಗಮ ಹೆಸರಿನಲ್ಲಿ ಒಂದೇ ದಿನ ನಕಲಿ ಜಾತಿ ಪ್ರಮಾಣಪತ್ರ ಪಡೆದು, ಪರಿಶಿಷ್ಟ ಜಾತಿಯವರಿಗೆ ವಂಚನೆ ಮಾಡಿದ್ದಾರೆ. ಮಾಯಕೊಂಡ ಎಸ್ಸಿ ಮೀಸಲು ಕ್ಷೇತ್ರದಲ್ಲಿ ಪತ್ನಿ ಹೆಸರಲ್ಲಿ ನಾಮಪತ್ರ ಸಲ್ಲಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಬೆಂಗಳೂರು ದಕ್ಷಿಣ ಜಿಲ್ಲೆಯ ಜಿಲ್ಲಾಧಿಕಾರಿ, ಬಿ.ಎಂ.ವಾಗೀಶ್ ಅವರ ನಕಲಿ ಜಾತಿ ಪ್ರಮಾಣ ಪತ್ರವನ್ನು ರದ್ದುಗೊಳಿಸಿದ ಆದೇಶ ಗಮನಿಸಿ ಮಾಯಕೊಂಡ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ, ಅವರ ನಾಮಪತ್ರವನ್ನು ರದ್ದುಗೊಳಿಸಿದ್ದಾರೆ. ಆದರೆ ಇದೇ ಜಾತಿ ಪತ್ರ ಗೊಂದಲವುಳ್ಳ ವಾಗೀಶರ ಪತ್ನಿ ಪುಷ್ಪಾ ಅವರ ನಾಮಪತ್ರ ಅಂಗೀಕರಿಸಿದ್ದಾರೆ. ಈ ಪ್ರಕರಣದಲ್ಲಿ ಅಧಿಕಾರಿಗಳು ಶಾಮೀಲಾಗಿರುವ ಶಂಕೆ ಕಾಡಿದೆ ಎಂದರು.
ನಕಲಿ ಜಾತಿ ಪ್ರಮಾಣಪತ್ರದೊಂದಿಗೆ ನಾಮಪತ್ರ ಸಲ್ಲಿಸಿ ಮಾಯಕೊಂಡ ಮೀಸಲು ಕ್ಷೇತ್ರದ ಕಣದಲ್ಲಿ ಉಳಿದ ಪುಷ್ಪಾ ವಾಗೀಶ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ವೇದಿಕೆ ಸದಸ್ಯರು ಮಂಗಳವಾರ ಬೆಂಗಳೂರಿಗೆ ತೆರಳಿ ರಾಜ್ಯಪಾಲರು, ಎಸ್ಸಿ-ಎಸ್ಟಿ ಆಯೋಗ, ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ದೂರು ಸಲ್ಲಿಸಲಿದ್ದೇವೆ. ನ್ಯಾಯ ಸಿಗದಿದ್ದರೆ ವಿಧಾನಸೌಧದ ಮುಂದೆ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಎಚ್ಚರಿಸಿದರು.
ಪುಷ್ಪಾ ವಾಗೀಶ್ ಅವರ ನಕಲಿ ಜಾತಿಪ್ರಮಾಣಪತ್ರ ಈಗಾಗಲೆ ಕೋರ್ಟ್‌ನಲ್ಲಿ ರದ್ದಾಗಿದ್ದರೂ ರಜೆ ಕಾರಣಕ್ಕೆ ಪ್ರತಿ ಸಿಗುತ್ತಿಲ್ಲ. ವಾಗೀಶ್ ಅವರು ಬೇಡ ಜಂಗಮರೇ ಆಗಿದ್ದಲ್ಲಿ ಅದನ್ನು ಸಾಬೀತುಪಡಿಸಲಿ ಎಂದರು. ಈ ಸಂದರ್ಭದಲ್ಲಿ ದಸಂಸ ರಾಜ್ಯ ಸಂಚಾಲಕ ಎಚ್.ಮಲ್ಲೇಶ್, ಎಸ್.ಟಿ.ಸೋಮಶೇಖರ್, ತಣಿಗೆರೆ ಅಣ್ಣಪ್ಪ, ಚಂದ್ರಪ್ಪ ಕಂದಗಲ್, ಲಕ್ಷ್ಮಣ್ ರಾಮಾವತ್ ಇದ್ದರು.



