ಕೋವಿಡ್ ನಿಯಂತ್ರಣದಲ್ಲಿ ಪೌರಕಾರ್ಮಿಕರ ಸೇವೆ ಅನನ್ಯ: ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ

Dvgsuddi
By
Dvgsuddi
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ....
3 Min Read

ದಾವಣಗೆರೆ: ಇಡೀ ಜಗತ್ತು ಕೊರೊನಾ ಸಂಕಷ್ಟದ ಸಮಯದಲ್ಲಿ  ನಗರ, ಪಟ್ಟಣಗಳಲ್ಲಿ ರೋಗ ರುಜಿನಗಳು ಹರಡದಂತೆ ತಮ್ಮ ಆರೋಗ್ಯವನ್ನೂ ಲೆಕ್ಕಿಸದೆ, ಸಾರ್ವಜನಿಕರ ಆರೋಗ್ಯ ಕಾಪಾಡುವಲ್ಲಿ ಮುಂದಾಗಿದ್ದರು. ನಗರದಲ್ಲಿ ಕೋವಿಡ್ ನಿಯಂತ್ರಿಸುವಲ್ಲಿ ಪೌರಕಾರ್ಮಿಕರ ಸೇವೆ ಅನನ್ಯ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಶ್ಲಾಘಿಸಿದರು.

ನಗರದ ನಿಜಲಿಂಗಪ್ಪ ಬಡಾವಣೆ ಕರ್ನಾಟಕ ಸರ್ಕಾರಿ ನೌಕರರ ಸಮುದಾಯ ಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪೌರಕಾರ್ಮಿಕರ ದಿನಾಚರಣೆಯ ಉದ್ಘಾಟನೆ ನೆರವೇರಿಸಿ  ಮಾತನಾಡಿದರು. ಎಲ್ಲೆಡೆ ಕೊರೊನಾ  ವ್ಯಾಪಕವಾಗಿ ಹರಡಿದ ಸಂದರ್ಭದಲ್ಲಿ ಹಾಗೂ ಇದರ ನಿಯಂತ್ರಣಕ್ಕಾಗಿ ಘೋಷಿಸಲಾದ ಕಂಟೈನ್ಮೆಂಟ್ ಏರಿಯಾಗಳಲ್ಲಿ ಪೌರಕಾರ್ಮಿಕರು ಜೀವದ ಹಂಗು ತೊರೆದು ಮುಕ್ತವಾಗಿ ಕಾರ್ಯ ನಿರ್ವಹಿಸಿದ್ದರು. ನಗರದ ಕೋವಿಡ್ ನಿಯಂತ್ರಿಸುವಲ್ಲಿ ಮಹತ್ವದ ಪಾತ್ರ ವಹಿಸಿದ ಎಲ್ಲಾ ಪೌರಕಾರ್ಮಿಕರ ಹಿತಕ್ಕಾಗಿ ಜಿಲ್ಲಾಡಳಿತ ಯಾವಾಗಲು ಅವರ ಪರವಾಗಿರುತ್ತದೆ ಎಂದು ಭರವಸೆ ನೀಡಿದರು.

ಫ್ಲೈಓವರ್, ಕಾಂಕ್ರೀಟ್ ರಸ್ತೆ, ಫುಟ್‍ಪಾತ್, ಉದ್ಯಾನವನ ಸೇರಿದಂತೆ ಆಕರ್ಷಿತ ಯೋಜನೆಗಳಿಂದ ಇಂದು ದಾವಣಗೆರೆ ಸ್ಮಾರ್ಟ್ ಸಿಟಿ ಆಗಿಲ್ಲ ಬದಲಾಗಿ ಪೌರಕಾರ್ಮಿಕರು ಸ್ಮಾರ್ಟ್ ಆಗಿ ಕೆಲಸ ನಿರ್ವಹಿಸಿದ್ದರಿಂದ ಸ್ಮಾರ್ಟ್ ಸಿಟಿ ಆಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಪೌರಕಾರ್ಮಿಕರ ಕಾರ್ಯ ವೈಖರಿಗೆ ಪ್ರಶಂಸೆ ವ್ಯಕ್ತಪಡಿಸಿದರು.

ದೇಶದ ರಕ್ಷಣೆಗೆ ಸೈನಿಕರು ಹಗಲಿರುಳು ಸೇವೆ ಸಲ್ಲಿಸಿದ ರೀತಿಯಲ್ಲಿ ನಗರಕ್ಕೆ ಪೌರಕಾರ್ಮಿಕರು ಶ್ರಮಿಸುತ್ತಿದ್ದಾರೆ. ಗೃಹಭಾಗ್ಯ ಯೋಜನೆಯಡಿ ಅನೇಕ ಫಲಾನುಭವಿಗಳ ಹೆಸರುಗಳು ಬಿಟ್ಟುಹೋಗಿದ್ದು, ನಿಯಮಾನುಸಾರ ಸಲ್ಲಿಸಿದ ಅರ್ಜಿಗಳನ್ನು ಸರ್ಕಾರಕ್ಕೆ ತಲುಪಿಸುತ್ತೇವೆ. ಹಾಗೂ ಪೌರಕಾರ್ಮಿಕರ ನ್ಯಾಯಯುತವಾದ ಎಲ್ಲಾ ಬೇಡಿಕೆಗಳನ್ನು ಕಾನೂನಾತ್ಮಕವಾಗಿ ಪರಿಶೀಲಿಸಿ ಅವುಗಳನ್ನು ಈಡೇರಿಸುವಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದು ವಿಶ್ವಾಸ ಮೂಡಿಸಿದರು.

ಭಾರತದ ವಾಸಯೋಗ್ಯ ಪಟ್ಟಿಯಲ್ಲಿ ದಾವಣಗೆರೆ ದೇಶಕ್ಕೆ 9ನೇ ಸ್ಥಾನ ಹಾಗೂ ಕರ್ನಾಟಕ ರಾಜ್ಯಕ್ಕೆ 2ನೇ ಸ್ಥಾನ ಪಡೆದುಕೊಂಡಿದ್ದು, ಇದರಲ್ಲಿ ಪೌರಕಾರ್ಮಿಕರ ಪಾತ್ರ ಮಹತ್ವದಾಗಿದೆ. ಇದು ಮತ್ತಷ್ಟು ಮೇಲ್ಮಟ್ಟಕ್ಕೆ ಹೋಗಬೇಕೆಂದರೆ ಪೌರಕಾರ್ಮಿಕರೊಂದಿಗೆ ಎಲ್ಲರ ಪಾಲ್ಗೊಳ್ಳುವಿಕೆ ಮುಖ್ಯ ಎಂದು ಜಿಲ್ಲಾಧಿಕಾರಿ ಹೇಳಿದರು.

ಮಹಾನಗರ ಪಾಲಿಕೆ ಮಹಾಪೌರ ಎಸ್.ಟಿ.ವೀರೇಶ್ ಮಾತನಾಡಿ, ಯಾವುದೇ ವೃತ್ತಿ ದೊಡ್ಡದು, ಸಣ್ಣದು ಎಂಬುದಿಲ್ಲ. ಎಲ್ಲಾ ವೃತ್ತಿಗಳು ಅದರದ್ದೇ ಆದ ಘನತೆ ಹೊಂದಿದೆ. ನಗರದ ಸೌಂದರ್ಯ ಹಾಗೂ ಸ್ವಚ್ಛತೆ ಕಾಪಾಡುವಲ್ಲಿ ಪೌರಕಾರ್ಮಿಕರ ಕೆಲಸ ಮಹತ್ವದ್ದು. ಇಂದು ಪೌರಕಾರ್ಮಿಕರಿಗೆ ಸರ್ಕಾರದಿಂದ ಸಿಗಬೇಕಾದ ಎಲ್ಲಾ ಸೌಲಭ್ಯಗಳು ತಲುಪುತ್ತಿದೆ ಎಂದರೆ ಅದಕ್ಕೆ ಸಂಘಟನೆಗಳ ಪಾತ್ರ ಹಿರಿಯದು. ಆದ್ದರಿಂದ ಎಲ್ಲಾ ಪೌರಕಾರ್ಮಿಕರು ಸಂಘಟಿತರಾಗಬೇಕು ಎಂದು ಕರೆ ನೀಡಿದರು.

ಕೆಲವೇ ದಿನಗಳಲ್ಲಿ ನೇರಪಾವತಿ ನೌಕರರನ್ನು ಖಾಯಂ ಮಾಡಲಾಗುವುದು. ಪೌರಕಾರ್ಮಿಕರ ದೃಷ್ಟಿಯಿಂದ ತಾತ್ಕಾಲಿಕವಾಗಿ ಆಸ್ಪತ್ರೆ ತೆರೆಯಲಾಗುವುದು. ಪೌರಕಾರ್ಮಿಕರ ಸುರಕ್ಷತೆಗೆ ಉನ್ನತ ಗುಣಮಟ್ಟದ ಗ್ಯಾಮ್ ಬೂಟ್, ಗ್ಲೌಸ್, ಮಾಸ್ಕ್, ಯೂನಿಫಾರಂ, ಬ್ಯಾಡ್ಜ್ ಸೇರಿದಂತೆ ಇನ್ನಿತರ ಪರಿಕರಗಳನ್ನು ನೀಡಲಾಗುವುದು. ಅಕ್ಟೋಬರ್ 2 ರಿಂದ ನಿತ್ಯ 25 ರಿಂದ 30 ಪೌರಕಾರ್ಮಿಕರಿಗೆ ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಲಾಗುವುದು. ಎಲ್ಲಾ ಪೌರಕಾರ್ಮಿಕರಿಗೂ ವಿಮೆ ನೀಡಲಾಗುವುದು ಎಂದು ಭರವಸೆ ನೀಡಿದರು.

ಕೆಲವು ತಾಂತ್ರಿಕ ಹಾಗೂ ಹಣದ ಕೊರತೆಯಿಂದ ಗೃಹಭಾಗ್ಯ ಯೋಜನೆಯ ಕಾಮಾಗಾರಿ ನಿಂತಿದ್ದು, ಡಿಸೆಂಬರ್ ಒಳಗಾಗಿ ಕಾಮಗಾರಿ ಮುಗಿಸಬೇಕು ಎಂದು ಇಂಜಿನಿಯರ್‍ಗಳಿಗೆ ತಾಕೀತು ಮಾಡಲಾಗಿದೆ. ಆದಷ್ಟು ಬೇಗ ಫಲಾನುಭವಿಗಳಿಗೆ ಮನೆ ಒದಗಿಸಲಾಗುವುದು ಎಂದು ತಿಳಿಸಿದರು.

ಪೌರಕಾರ್ಮಿಕರು ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ನೀಡಬೇಕು. ಐಎಎಸ್, ಕೆಎಎಸ್ ಓದುವ ಮಕ್ಕಳಿಗೆ ಉಚಿತ ಸೌಲಭ್ಯ ನೀಡಲಾಗುತ್ತಿದ್ದು, ಪೌರಕಾರ್ಮಿಕರ ಮಕ್ಕಳಿಗೆ ಮೊದಲ ಆದ್ಯತೆ ನೀಡಲಾಗುವುದರಿಂದ, ಡಾಕ್ಟರ್, ಇಂಜಿನಿಯರಿಂಗ್ ಸೇರಿದಂತೆ ಮೇಲ್ದರ್ಜೆ ಸ್ಥಾನಗಳನ್ನು ಅಲಂಕರಿಸುವ ಕನಸು ಕಾಣಬೇಕು. ಪೌರಕಾರ್ಮಿಕರಿಗೆ ಹಿಂದೆಂದಿಗಿಂತ ಹೆಚ್ಚಿನ ಸೌಲಭ್ಯಗಳು ಈಗ ದೊರಕುತ್ತಿದ್ದು, ಈ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಸಾರ್ವಜನಿಕ ಆರೋಗ್ಯ ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಎಲ್.ಡಿ.ಗೋಣೆಪ್ಪ ಮಾತನಾಡಿ, ಪೌರಕಾರ್ಮಿಕರಿಗೆ ಸರ್ಕಾರದಿಂದ ಎಷ್ಟೇ ಸವಲತ್ತು ಒದಗಿಸಿದರೂ ಸಾಲದು. 60 ವರ್ಷದ ನಂತರ ನಿವೃತ್ತಿ ಹೊಂದಿದ ಪೌರಕಾರ್ಮಿಕರ ಕೆಲಸವನ್ನು ಅವರ ಕುಟುಂಬದ ಸದಸ್ಯರಿಗೆ ನೀಡಬೇಕು. ಇಂಧನ ಅವ್ಯವಹಾರ ತಡೆಗಟ್ಟಲು ಪಾಲಿಕೆಯಲ್ಲಿ ಪೆಟ್ರೋಲ್ ಬಂಕ್ ನಿರ್ಮಾಣವಾಗಬೇಕು ಎಂದು ಮನವಿ ಮಾಡಿದರು.

ಪಾಲಿಕೆ ಸದಸ್ಯ ಎ.ನಾಗರಾಜ್ ಮಾತನಾಡಿ, ನಗರದಲ್ಲಿ ಪೌರಕಾರ್ಮಿಕರ ಸಂಖ್ಯೆ ಕಡಿಮೆ ಇದ್ದು, ಹೆಚ್ಚುವರಿಯಾಗಿ 228 ಪೌರಕಾರ್ಮಿಕರನ್ನು ನೇಮಕಾತಿ ಮಾಡಿಕೊಳ್ಳಬೇಕು. ದೊಡ್ಡ ದೊಡ್ಡ ವಾರ್ಡ್‍ಗಳಲ್ಲಿ ಸ್ವಚ್ಛತೆಯಾಗುತ್ತಿದೆ ವಿನಃ ಸಣ್ಣ ವಾರ್ಡ್‍ಗಳಲ್ಲಿ ಸಮರ್ಪಕವಾಗಿ ಸ್ಚಚ್ಛತೆಯಾಗುತ್ತಿಲ್ಲ ಎಂದು ಹೇಳಿದರು.

ಈ ವೇಳೆ ಪೌರಕಾರ್ಮಿಕರ ಮಕ್ಕಳ ಸಾಧನೆಯನ್ನು ಪ್ರೋತ್ಸಾಹಿಸಿ ಸನ್ಮಾನಿಸಲಾಯಿತು. ವಯೋನಿವೃತ್ತಿ ಹೊಂದುತ್ತಿರುವ ಜಿ.ಬಿ.ಲಕ್ಕಳ್ಳಿ ಹಾಲವಕ್ಕ ಅವರನ್ನು ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಮಹಾ ನಗರಪಾಲಿಕೆ ಉಪಮಹಾಪೌರ ಶಿಲ್ಪ.ಹೆಚ್.ಆರ್., ಆಯುಕ್ತ ವಿಶ್ವನಾಥ ಮುದಜ್ಜಿ, ಉಪಆಯುಕ್ತರಾದ ನಳೀನ, ಸ್ಥಾಯಿ ಸಮಿತಿ ಅಧ್ಯಕ್ಷರಾದ ರೇಣುಕಾ ಶ್ರೀನಿವಾಸ್, ಉಮಾ ಪ್ರಕಾಶ್, ಗೀತಾ ದಿಳ್ಯಪ್ಪ, ಎನ್.ನೀಲಗಿರಿಯಪ್ಪ, ಗೋವಿಂದರಾಜ್, ಎಲ್.ಎಮ್.ಹನುಮಂತಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.

 

Share This Article
Follow:
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
Leave a Comment

Leave a Reply

Your email address will not be published. Required fields are marked *