ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆ ಆಡಳಿತದಲ್ಲಿಯೂ 40 ಪರ್ಸೆಂಟೇಜ್ ಕಮಿಷನ್ ನಡೆಯುತ್ತಿದೆ. 40 ಪರ್ಸೆಂಟೇಜ್ ಗಾಗಿ ಸಣ್ಣ ಸಣ್ಣ ಕಾಮಗಾರಿಗಳನ್ನು ಒಟ್ಟುಗೂಡಿಸಿ ಪ್ಯಾಕೇಜ್ ಟೆಂಡರ್ ಕರೆಯಲಾಗುತ್ತಿದೆ ಎಂದು ವಿಪಕ್ಷ ನಾಯಕ ಎ. ನಾಗರಾಜ್ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾನಗರ ಪಾಲಿಕೆಯಲ್ಲಿ ಆಡಳಿತ ವೈಫಲ್ಯ ಎದ್ದು ಕಾಣುತ್ತಿದ್ದು, ಜನಸಾಮಾನ್ಯರಿಗೆ ತೀವ್ರ ತೊಂದರೆಯಾಗಿದೆ. ಇಂದಿನ ಮೇಯರ್ ಅಧಿಕಾರ ವಹಿಸಿಕೊಂಡು 10 ತಿಂಗಳಾದರೂ ಸಮರ್ಪಕವಾಗಿ ಅನುದಾನ ಬಳಕೆ ಮಾಡಿಲ್ಲ. ಪಾಲಿಕೆ ಆಡಳಿತಕ್ಕೆ ಅಭಿವೃದ್ಧಿ ಬೇಕಿಲ್ಲ. ಇಲ್ಲಿನ ಸಿಬ್ಬಂದಿಗಳನ್ನು ಕೊರೊನಾ ವ್ಯಾಕ್ಸಿನ್ ಗೆ ಬಳಸಿಕೊಳ್ಳುವುದರಿಂದ ಪಾಲಿಕೆಯಲ್ಲಿ ಸಾರ್ವಜನಿಕರ ಕೆಲಸಗಳು ಆಗುತ್ತಿಲ್ಲ.ಮುಖ್ಯವಾಗಿ ಮುಖ್ಯ ಮಂತ್ರಿಗಳ ಅನುದಾನದ ನಗರೋತ್ಥಾನ ಕಾಮಗಾರಿ ಟೆಂಡರ್ ನಿಧಾನಗತಿಯಲ್ಲಿ ನಡೆಯುತ್ತಿದೆ ಎಂದು ಆರೋಪಿಸಿದರು.
ಕಮಿಷನ್ ಗಾಗಿ ಸಣ್ಣ ಸಣ್ಣ ಕಾಮಗಾರಿಗಳನ್ನು ಒಟ್ಟುಗೂಡಿಸಿ ಪ್ಯಾಕೇಜ್ ಟೆಂಡರ್ ಕರೆಯಲಾಗುತ್ತಿದೆ. ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದರು ನಿಯಂತ್ರಣಕ್ಕೆ ಪಾಲಿಕೆ ಕ್ರಮವಹಿಸುತ್ತಿಲ್ಲ. ಕಳೆದ ಸೆಪ್ಟೆಂಬರ್ 13 ರಂದು ನಡೆದ ಸ್ಥಾಯಿ ಸಮಿತಿ ಸಭೆಯಲ್ಲಿ ಸುಮಾರು 25 ಕೋಟಿ ಕಾಮಗಾರಿಗಳ ಅನುಮೋದನೆ ನೀಡಿದ್ದರು. ಟೆಂಡರ್ ಕರೆಯುವಲ್ಲಿ ಆಯುಕ್ತರು ಮತ್ತು ಮೇಯರ್ ವಿಳಂಬ ನೀತಿ ಅನುಸರಿಸುತ್ತಿದ್ದಾರೆ. ಪ್ರತಿ ತಿಂಗಳು ನಡೆಸುವ ಕೌನ್ಸಿಲ್ ಸಾಮಾನ್ಯ ಸಭೆ 10 ತಿಂಗಳಲ್ಲಿ 2 ಸಭೆ ನಡೆಸಿದ್ದು, ಇದು ಪಾಲಿಕೆ ಆಡಳಿತದ ವೈಫಲ್ಯಕ್ಕೆ ತೋರಿಸುತ್ತಿದೆ ಎಂದರು. ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯ ಮಂಜುನಾಥ್ ಗಡಿಗುಡಾಳ್, ಕೆ.ಚಮನ್ ಸಾಬ್, ಸೈಯದ್ ಚಾರ್ಲಿ, ಯುವರಾಜ್, ಹುಲ್ಲುಮನಿ ಗಣೇಶ್ ಉಪಸ್ಥಿತರಿದ್ದರು.



