ದಾವಣಗೆರೆ: ಅನಧಿಕೃತ ಬಡಾವಣೆಯ ಸೈಟ್, ಮನೆ, ಕಟ್ಟಡಗಳಿಗೆ ಡೋರ್ ನಂಬರ್ ನೀಡಿ, ಇ- ಆಸ್ತಿ ಸೃಜಿಸಿ ಬಿ ಖಾತೆ ನೀಡಲು ಅಭಿವೃದ್ಧಿ ಮತ್ತು ಸುಧಾರಣೆಯ ಹೆಸರಲ್ಲಿ ದಾವಣಗೆರೆ ಮಹಾನಗರ ಪಾಲಿಕೆ ಪಡೆಯುತ್ತಿದ್ದ 10 ಸಾವಿರ ಶುಲ್ಕವನ್ನು ರದ್ದುಪಡಿಸಿ ಸರ್ಕಾರ ಆದೇಶಿಸಿದೆ.
- ಅಭಿವೃದ್ಧಿ ಮತ್ತು ಸುಧಾರಣೆಯ ಹೆಸರಲ್ಲಿ ಪಡೆಯುತ್ತಿದ್ದ 10 ಸಾವಿರ ಹೆಚ್ಚುವರಿ ಶುಲ್ಕ ರದ್ದು
- ಸರ್ಕಾರ ಬಿ ಖಾತೆ ಗೆ ನಿಗದಿ ಪಡಿಸಿದ್ದ ದರದ ಜೊತೆಗೆ ದಾವಣಗೆರೆ ಮಹಾನಗರ ಪಾಲಿಕೆ ಹೆಚ್ಚುವರಿ ಶುಲ್ಕ ಪಡೆಯತ್ತಿತ್ತು
- ಈಗಾಗಲೇ ಹೆಚ್ಚುವರಿ ಶುಲ್ಕ ಪಾವತಿಸಿದವರು ರಸೀದಿಯೊಂದಿಗೆ ಪಾಲಿಕೆ ವಲಯ ಕಚೇರಿಗೆ ಬಂದು ಮನವಿ ಸಲ್ಲಿಸಿದರೆ ಶುಲ್ಕ ವಾಪಸ್ ನೀಡಲಾಗುವುದು
ಭೂಪರಿವರ್ತನೆಯಾಗದೇ ಅನಧಿಕೃತ ಬಡಾವಣೆಯ ಸೈಟ್,ಮನೆ,ಕಟ್ಟಡಗಳಿಗೆ ಬಿ ಖಾತಾ ನೀಡುವ ಅಭಿಯಾನ ನಡೆಯುತ್ತಿದ್ದು, ಈ ವೇಳೆ ದಾವಣಗೆರೆ ಮಹಾನಗರ ಪಾಲಿಕೆಯು ಅರ್ಜಿದಾರರಿಂದ ಬಿ ಖಾತಾ ನೀಡಲು ಹೆಚ್ಚುವರಿ 10 ಸಾವಿರ ಶುಲ್ಕ ಪಡೆಯುತ್ತಿರುವ ಆರೋಪ ಕೇಳಿ ಬಂದಿತ್ತು.
ರಾಜ್ಯದ ಇತರೆ ಯಾವುದೇ ಮಹಾನಗರ ಪಾಲಿಕೆ, ಸ್ಥಳೀಯ ಸಂಸ್ಥೆಗಳಲ್ಲಿ ಅಭಿವೃದ್ಧಿ ಮತ್ತು ಸುಧಾರಣೆ ಶುಲ್ಕ ಹೆಸರಿನಲ್ಲಿ ಹೆಚ್ಚುವರಿ ಶುಲ್ಕ ಪಡೆಯುತ್ತಿರಲಿಲ್ಲ. ಆದರೆ, ದಾವಣಗೆರೆಯಲ್ಲಿ ಮಾತ್ರ ಹೊಸದಾಗಿ ಡೋರ್ ಬರ್ ನೀಡಲು ಶುಲ್ಕ ಪಡೆಯಲಾಗುತ್ತಿತ್ತು.
ಅನಧಿಕೃತ ಆಸ್ತಿಗಳಿಗೆ ಖಿ ಖಾತಾ ಮಾಡಿಸಲು ಸರ್ಕಾರ ನಿಗದಿಪಡಿಸಿದ ಶುಲ್ಕವನ್ನು ಮಾತ್ರ ಪಾವತಿಸಬೇಕು. ಬೇರೆ ಯಾವುದೇ ಶುಲ್ಕವನ್ನು ಪಾವತಿಸುವ ಅಗತ್ಯವಿಲ್ಲ. ಈಗಾಗಲೇ ಹೆಚ್ಚುವರಿ ಶುಲ್ಕ ಪಾವತಿಸಿದವರು ರಸೀದಿ ಜೊತೆಗೆ ಮನವಿ ಸಲ್ಲಿಸಿದರೆ ಶುಲ್ಕ ಮರಳಿಸಲಾಗುವುದು ಎಂದು ಮಹಾನಗರ ಪಾಲಿಕೆ ಆಯುಕ್ತೆ ರೇಣುಕಾ ಮಾಹಿತಿ ನೀಡಿದ್ದಾರೆ.