ದಾವಣಗೆರೆ: ದಾವಣಗೆರೆ ಮಹಾನಗರಪಾಲಿಕೆ ಮಹಾಪೌರ, ಉಪಮಹಾಪೌರ ಸ್ಥಾನದ ಆಯ್ಕೆಗೆ ಸೆಪ್ಟೆಂಬರ್.27 ರಂದು ಮಹಾನಗರಪಾಲಿಕೆ ಸಭಾಂಗಣದಲ್ಲಿ ಪ್ರಾದೇಶಿಕ ಆಯುಕ್ತರಾದ ಅಮ್ಲಾನ್ ಆದಿತ್ಯ ಬಿಸ್ವಾಸ್ ಅಧ್ಯಕ್ಷತೆಯಲ್ಲಿ ಚುನಾವಣೆ ನಡೆಯಲಿದೆ.
ಸೆ.27 ರ ಬೆಳಿಗ್ಗೆ 12 ಗಂಟೆಯಿಂದ ಮಧ್ಯಾಹ್ನ 1 ಗಂಟೆ ವರೆಗೆ ನಾಮಪತ್ರಗಳ ಸ್ವೀಕಾರ, ಮಧ್ಯಾಹ್ನ 3 ಗಂಟೆ ನಂತರ ನಾಮಪತ್ರಗಳ ಪರಿಶೀಲನೆ, ಕ್ರಮಬದ್ಧ ನಾಮಪತ್ರಗಳ ಘೋಷಣೆ, ಉಮೇದುವಾರಿಕೆಯನ್ನುಹಿಂತೆಗೆದುಕೊಳ್ಳುವುದು, ಉಮೇದುವಾರರ ಪಟ್ಟಿ ಘೋಷಣೆ, ಅವಿರೋಧ ಆಯ್ಕೆಯಾದಲ್ಲಿ ಫಲಿತಾಂಶ ಘೋಷಣೆ, ಚುನಾವಣೆ ಅಗತ್ಯವಿದ್ದಲ್ಲಿ ಕೈ ಎತ್ತುವ ಮೂಲಕ ಮತದಾನ, ಸದಸ್ಯರ ಸಹಿ ದಾಖಲಿಸುವುದು, ಮತಗಳ ಎಣಿಕೆ ಹಾಗೂ ಫಲಿತಾಂಶ ಘೋಷಣೆ ಮಾಡಲಾಗುವುದು ಎಂದು ಮಹಾನಗರ ಪಾಲಿಕೆ ಆಯುಕ್ತರಾದ ರೇಣುಕಾ ತಿಳಿಸಿದ್ದಾರೆ.
ಈ ಬಾರಿ ಮೇಯರ್ ಸ್ಥಾನ ಹಿಂದುಳಿದ ವರ್ಗ ‘ಎ’, ಉಪ ಮೇಯರ್ ಸ್ಥಾನವನ್ನು ಹಿಂದುಳಿದ ವರ್ಗ ‘ಬಿ’ ಗೆ ಮೀಸಲಾತಿ ಘೋಷಿಸಿದೆ. ಒಟ್ಟು 45 ಸದಸ್ಯ ಬಲದ ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್ ಆಡಳಿತ ನಡೆಸುತ್ತಿದೆ.



