ದಾವಣಗೆರೆ: ಕರ್ನಾಟಕ ಸರ್ಕಾರದ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ರಾಷ್ಟ್ರೀಯ ಜೀವನೋಪಾಯ ಅಭಿಯಾನದಡಿಯಲ್ಲಿ ಸಾಧನೆ ಮಾಡಿದ ಕರ್ನಾಟಕದ ಆಯ್ದನಗರ ಸ್ಥಳೀಯ ಸಂಸ್ಥೆಗಳಿಗೆ ಕೊಡ ಮಾಡುವ ರಾಜ್ಯ ಮಟ್ಟದ ಪ್ರಶಸ್ತಿಗೆ ದಾವಣಗೆರೆ ಮಹಾನಗರ ಪಾಲಿಕೆ ಭಾಜನವಾಗಿದೆ.
ಪ್ರತಿ ವರ್ಷ ಅಂತರ ರಾಷ್ಟ್ರೀಯ ಮಹಿಳಾ
ದಿನಾಚರಣೆ ಸಂದರ್ಭದಲ್ಲಿ ನೀಡುವ ಪ್ರಶಸ್ತಿಗೆ ದಾವಣಗೆರೆ ಮಹಾನಗರ ಪಾಲಿಕೆಯೂ ಸೇರಿದಂತೆ, ರಾಜ್ಯದ ಆಯ್ದ ಪುರಸಭೆ, ಪಟ್ಟಣ ಪಂಚಾಯ್ತಿ, ನಗರಸಭೆ, ಮಹಾನಗರ ಪಾಲಿಕೆಗಳು ಆಯ್ಕೆಯಾಗಿವೆ.ಒಟ್ಟು ಮೂರು ವಿಭಾಗಗಳಲ್ಲಿ ಮಾಡಿದ ಸಾಧನೆಗಾಗಿ ದಾವಣಗೆರೆ ಮಹಾನಗರ ಪಾಲಿಕೆಯನ್ನು ರಾಜ್ಯ ಮಟ್ಟದ ಪ್ರಶಸ್ತಿಗಳಿಗೆ ಆಯ್ಕೆ ಮಾಡಿದ್ದು, ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಏರ್ಪಾಡಾಗಿರುವ ಅಂತರ ರಾಷ್ಟ್ರೀಯ
ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲಿಕೆ ಆಯುಕ್ತರಾದ ರೇಣುಕಾ ಅವರು ಪ್ರಶಸ್ತಿ ಸ್ವೀಕರಿಸಿದ್ದಾರೆ.
ಸಾಮಾಜಿಕ ಕ್ರೋಢೀಕರಣ ಮತ್ತು ಸಾಂಸ್ಥಿಕ ಅಭಿವೃದ್ಧಿ ಉಪ ಘಟಕ, ಸ್ಥಳೀಯ ಬೀದಿ ಬದಿ ವ್ಯಾಪಾರಿಗಳಿಗೆ ಬೆಂಬಲ ಮತ್ತು ಸ್ವಯಂ ಉದ್ಯೋಗ ಕಾರ್ಯಕ್ರಮದಲ್ಲಿ ದಾವಣಗೆರೆ ಮಹಾನಗರ ಪಾಲಿಕೆ ಸಾಧನೆ ಮಾಡಿದೆ ಎಂದು ರಾಷ್ಟ್ರೀಯ ಜೀವನೋಪಾಯ ಅಭಿಯಾನದ ಪ್ರಕಟಣೆಯಲ್ಲಿ ವಿವರಿಸಲಾಗಿದೆ.



