ದಾವಣಗೆರೆ: ಸರ್ಕಾರಿ, ಸಾರ್ವಜನಿಕರ ಆಸ್ತಿ ಒತ್ತುವರಿ ಮತ್ತು ನಕಲಿ ದಾಖಲೆ ಸೃಷ್ಠಿ ತಡೆಯಲು ದಾವಣಗೆರೆ ಮಹಾನಗರ ಪಾಲಿಕೆ (davangere city municipal corporation) ಹಳೆಯ ಎಲ್ಲಾ ದಾಖಲೆಗಳನ್ನು ಲ್ಯಾಮಿನೇಶನ್ ಮಾಡಲಾಗಿದೆ ಎಂದು ಮೇಯರ್ ಕೆ. ಚಮನ್‌ಸಾಬ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪಾಲಿಕೆಯ ಹಳೆ ದಾಖಲೆ ತಿದ್ದಿ, ನಕಲಿ ದಾಖಲೆ ಸೃಷ್ಠಿಸಿ ಸಾರ್ವಜನಿಕ ಆಸ್ತಿ ಕಬಳಿಸುವುದನ್ನು ತಪ್ಪಿಸಲು ದಾವಣಗೆರೆ ಮಹಾನಗರ ಪಾಲಿಕೆ ವಿಶೇಷ ಕ್ರಮ ವಹಿಸಿದೆ. 50 ವರ್ಷ ಹಳೆಯ ದಾಖಲೆಯ ಪ್ರತಿಯೊಂದು ಪ್ರತಿಯನ್ನೂ ಲ್ಯಾಮಿನೇಶನ್ ಮಾಡಿದೆ ಎಂದರು.
ಸಾರ್ವಜನಿಕ ಸ್ವತ್ತಾದ ಉದ್ಯಾನವನ, ರಸ್ತೆ, ಸರ್ಕಾರಿ ಭೂಮಿ, ನಾಗರಿಕರ ನಿವೇಶನಗಳಿಗೆ ನಕಲಿ ದಾಖಲೆ ಸೃಷ್ಠಿಸಿ ಒತ್ತುವರಿ ಮಾಡಿಕೊಂಡ ಪ್ರಕರಣ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಪಾಲಿಕೆ ಈ ಹೊಸ ಕ್ರಮ ಕೈಗೊಂಡಿದೆ.ಹಳೆಯ ದಾಖಲೆಯ ಪ್ರತಿಯೊಂದು ಪುಟವನ್ನೂ ಲ್ಯಾಮಿನೇಶನ್ ಮಾಡಿಸಲಾಗಿದೆ. ಲ್ಯಾಮಿನೇಶನ್ ಮಾಡಿದ ಲಕ್ಷಾಂತರ ಪುಟಗಳನ್ನು ವ್ಯವಸ್ಥಿತವಾಗಿ ಬಂಡಿಂಗ್ ಸಹ ಮಾಡಿಸಿದ್ದು ಅದಕ್ಕಾಗಿ ವಿಶೇಷ ರೀತಿಯ ರ್‍ಯಾಕ್ ಸಹ ಮಾಡಿಸಲಾಗಿದೆ ಎಂದರು.
ದಾಖಲೆಗಳ ಕೊಠಡಿಯಲ್ಲಿ ಸಿಸಿ ಕ್ಯಾಮರಾ ಅಳವಡಿಸಿ ಭೂಗಳ್ಳರ ಮೇಲೆ ಹದ್ದಿನ ಕಣ್ಣಿಡುವ ವ್ಯವಸ್ಥೆ ಮಾಡಿದೆ. ಇದರಿಂದ ಹಳೆಯ ದಾಖಲೆ ತಿದ್ದಿ ಬೇರೆಯವರ ಹೆಸರಿಗೆ ಆಸ್ತಿ ಲಪಟಾಯಿಸಲು ಅವಕಾಶವೇ ಇಲ್ಲದಂತೆ ಮಾಡಿದೆ. 1948ರಿಂದ 2000 ವರೆಗೆ ಪಾಲಿಕೆಯ ಅಂದಾಜು 40 ಕೋಟಿ ರೂ. ಮೌಲ್ಯದ ಒತ್ತುವರಿಯಾಗಿದ್ದ ಆಸ್ತಿ ಜಪ್ತಿ ಮಾಡಿದೆ ಎಂದು ತಿಳಿಸಿದರು.