ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆ ಮೇಯರ್, ಉಪ ಮೇಯರ್ ಸ್ಥಾನಕ್ಕೆ ಇಂದು ನಡೆದ ಚುನಾವಣೆ ನಡೆದಿದ್ದು, ಬಹುಮತ ಹೊಂದಿದ್ದ ಕಾಂಗ್ರೆಸ್ ಅಧಿಕಾರ ಹಿಡಿದಿದೆ.
ಮೇಯರ್ ಆಗಿ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಕೆ. ಚಮನ್ ಸಾಬ್ ಹಾಗೂ ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೇರಿದ್ದ ಸೋಗಿ ಶಾಂತಕುಮಾರ್ ಉಪಮೇಯರ್ ಆಗಿ ಆಯ್ಕೆಯಾಗಿದ್ದಾರೆ
ಮೇಯರ್ ಸ್ಥಾನ ಬಿಸಿಎಂ ಎ ಹಾಗೂ ಉಪಮೇಯರ್ ಸ್ಥಾನ ಬಿಸಿಎಂ ಬಿಗೆ ಮೀಸಲಾತಿ ನಿಗದಿಯಾಗುತ್ತು. ಪಾಲಿಕೆಯ 45 ಸದಸ್ಯರ ಪೈಕಿ ಓರ್ವ ಕಾಂಗ್ರೆಸ್ ಸದಸ್ಯ ನಿಧನ ಹೊಂದಿದ್ದಾರೆ. ಹೀಗಾಗಿ 44 ಸದಸ್ಯರಿದ್ದಾರೆ. ಸಂಸದೆ, ಇಬ್ಬರು ಶಾಸಕರು, ವಿಧಾನಪರಿಷತ್ ಸದಸ್ಯರು ಮತದಾನಕ್ಕೆ ಅವಕಾಶ ಇತ್ತು. ಬಿಜೆಪಿಯಿಂದ ನಾಲ್ವರು ಸದಸ್ಯರು ಕಾಂಗ್ರೆಸ್ ಸೇರ್ಪಡೆಯಾಗಿರುವುದರಿಂದ ಕಾಂಗ್ರೆಸ್ ಅಧಿಕಾರ ಹಿಡಿಯುವುದು ಬಹುತೇಕ ನಿಶ್ಚಿತವಾಗಿತ್ತು.
ಬಿಜೆಪಿ ಒಬ್ಬ ಸದಸ್ಯ ವಿದೇಶ ಪ್ರವಾಸದಲ್ಲಿದ್ದ ಕಾರಣ ಭಾಗಿ ಆಗಲಿಲ್ಲ. ಮೇಯರ್ ಸ್ಥಾನಕ್ಕೆ ಕಾಂಗ್ರೆಸ್ ನಲ್ಲಿ ಆಕಾಂಕ್ಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇದ್ದರೂ ಕೊನೆಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್ .ಎಸ್ .ಮಲ್ಲಿಕಾರ್ಜುನ ಸೂಚನೆ ಮೇರೆಗೆ ಕೆ. ಚಮನ್ ಸಾಬ್ ಗೆ ಮೇಯರ್ ಹಾಗೂ ಸೋಗಿ ಶಾಂತಕುಮಾರ್ ಉಪಮೇಯರ್ ಸ್ಥಾನ ಸಿಕ್ಕಿದೆ.



