ಬೆಂಗಳೂರು : ಲಂಚ ಪ್ರಕರಣದ ಲೋಕಾಯುಕ್ತ ಕೇಸ್ ನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಚನ್ನಗಿರಿ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪಗೆ ಬೇಲ್ ಮಂಜೂರಾಗಿದ್ದು, ನಿನ್ನೆ ರಾತ್ರಿ ಪರಪ್ಪನ ಅಗ್ರಹಾರದಿಂದ ಬಿಡುಗಡೆಯಾಗಿದ್ದಾರೆ.
ಬೆಳಗ್ಗೆ ಮಾಡಾಳ್ ವಿರೂಪಾಕ್ಷಪ್ಪ ಅವರಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಆದೇಶವನ್ನು ಹೊರಡಿಸಿತ್ತು. ಹೀಗಾಗಿ ಪರಪ್ಪನ ಅಗ್ರಹಾರ ಜೈಲಿನಿಂದ ಮಾಡಾಳ್ ವಿರೂಪಾಕ್ಷಪ್ಪ ಬಿಡುಗಡೆಯಾಗಿದ್ದಾರೆ.ನ್ಯಾಯಾಲಯವು ಮಾಡಾಳ್ಗೆ, 5 ಲಕ್ಷ ಬಾಂಡ್, ಇಬ್ಬರ ಶ್ಯೂರಿಟಿ ಮತ್ತು ಮೂರು ವಾರಕ್ಕೊಮ್ಮೆ ಲೋಕಾಯುಕ್ತ ಪೊಲೀಸರ ಮುಂದೆ ಹಾಜರಾಗುವಂತೆ ತಿಳಿಸಿತ್ತು. ಜೊತೆಗೆ ತನಿಖಾಧಿಕಾರಿಗಳ ವಶಕ್ಕೆ ಪಾಸ್‌ಪೋರ್ಟ್ ನೀಡಬೇಕು, ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮಕ್ಕೆ ಭೇಟಿ ನೀಡುವಂತಿಲ್ಲ, ಸಾಕ್ಷ್ಯಾಧಾರ ನಾಶಪಡಿಸಲು ಯತ್ನಿಸುವಂತಿಲ್ಲ ಎಂದು ಷರತ್ತುಬದ್ಧ ಜಾಮೀನು ಮಂಜೂರು ಮಾಡಲಾಗಿತ್ತು.ಕಳೆದ ಮಾರ್ಚ್ 27ರಂದು ಮಾಡಾಳು ವಿರೂಪಾಕ್ಷಪ್ಪ ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದರು.
ಬಿಡುಗಡೆ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ನಾನು ನಾಲ್ಕು ಗೋಡೆಗಳ ನಡುವೆ ಇದ್ದೆ. ಅಲ್ಲಿ ಟಿವಿ ಪತ್ರಿಕೆ ಇರಲಿಲ್ಲ. ರಾಜಕಾರಣದಲ್ಲಿ ಏನು ನಡೆಯುತ್ತಿದೆ ಎಂಬುದು ನನಗೆ ತಿಳಿದಿಲ್ಲ. ಮನೆಗೆ ಹೋದ ಬಳಿಕ ಮಾಹಿತಿ ಪಡೆದು ಮುಂದಿನ ರಾಜಕೀಯ ನಡೆ ತಿಳಿಸುತ್ತೇನೆ. ಸದ್ಯ ನಾನು ಏನನ್ನು ಹೇಳುವ ಪರಿಸ್ಥಿತಿಯಲ್ಲಿ ಇಲ್ಲ ಎಂದು ಮಾಡಾಳ್ ವಿರೂಪಾಕ್ಷಪ್ಪ ಹೇಳಿದರು.
ಚನ್ನಗಿರಿ ಕ್ಷೇತ್ರ ಶಾಸಕರೂ ಆಗಿರುವ ಮಾಡಾಳ್ ವಿರೂಪಾಕ್ಷಪ್ಪ ಅವರು ಕೆಎಸ್‌ಡಿಎಲ್‌ನ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಸಂಸ್ಥೆಗೆ ರಾಸಾಯನಿಕಗಳನ್ನು ಪೂರೈಸುವ ಗುತ್ತಿಗೆಯನ್ನು ಪಡೆದಿದ್ದ ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡಲು ಲಂಚಕ್ಕೆ ಭೇಟಿ ಇಟ್ಟಿದ್ದರು ಎಂದು ಆರೋಪಿಸಲಾಗಿತ್ತು. ಅಲ್ಲದೆ ಗುತ್ತಿಗೆದಾರರಿಗೆ 80 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟ ಆರೋಪವೂ ಇವರ ಮೇಲೆ ಕೇಳಿ ಬಂದಿತ್ತು. ಈ ಲಂಚದ ಭಾಗವಾಗಿ 40 ಲಕ್ಷ ರೂಪಾಯಿಯನ್ನು ಮಾಡಾಳ್ ವಿರುಪಾಕ್ಷಪ್ಪ ಅವರ ಮಗ ಮಾಡಾಳ್ ಪ್ರಶಾಂತ್ ಮಾಡಾಳ್ ಸ್ವೀಕರಿಸುವ ವೇಳೆ ಲೋಕಾಯುಕ್ತ ಪೊಲೀಸರು ದಾಳಿ ನಡಡಸಿ ಹಣವನ್ನು ವಶಕ್ಕೆ ಪಡೆದು ಪ್ರಶಾಂತ್ ಅವರನ್ನು ಬಂಧಿಸಿದ್ದರು.
ಬಳಿಕ ವಿರುಪಾಕ್ಷಪ್ಪ ಮತ್ತು ಅವರ ಮಗನ ಬೆಂಗಳೂರಿನ ಕಚೇರಿಗಳು ಹಾಗೂ ಮನೆ ಮೇಲೆ ಜೊತೆಗೆ ಚನ್ನಗಿರಿಯ ಮನೆಗಳ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆ ಕೋಟ್ಯಂತರ ರೂಪಾಯಿಗಳನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದರು.



