ದಾವಣಗೆರೆ: ಮಧ್ಯ ಕರ್ನಾಟಕದ ದಾವಣಗೆರೆ ಲೋಕಸಭಾ ಕ್ಷೇತ್ರ ಈ ಬಾರಿ ಮತ್ತೊಮ್ಮೆ ಜಿದ್ದಾಜಿದ್ದಿನ ಕಣವಾಗಿದೆ. ಇದ್ದಕ್ಕೆ ಮುಖ್ಯ ಕಾರಣ ಕಾಂಗ್ರೆಸ್ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಕುಟುಂಬ ಮತ್ತು ಬಿಜೆಪಿ ಹಾಲಿ ಸಂಸದ ಜಿ.ಎಂ ಸಿದ್ದೇಶ್ವರ್ ಕುಟುಂಬ ಎದುರಾಳಿಗಳಾಗಿದ್ದಾರೆ.
ಈ ಬಾರಿ ದಾವಣಗೆರೆಯಲ್ಲಿ ಮೊದಲ ಬಾರಿ ಬಿಜೆಪಿ ಮಹಿಳಾ ಅಭ್ಯರ್ಥಿಯಾಗಿ ಜಿ.ಎಂ.ಸಿದ್ದೇಶ್ವರ ಅವರ ಪತ್ನಿ ಗಾಯತ್ರಿ ಸಿದ್ದೇಶ್ವರ ಅವರನ್ನು ಕಣಕ್ಕೆ ಇಳಿಸಿದೆ. ಇದಕ್ಕೆ ಕಾಂಗ್ರೆಸ್ ಕೂಡ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರ ಪತ್ನಿ, ಶಾಮನೂರು ಶಿವಶಂಕರಪ್ಪ ಸೊಸೆಯಾದ ಪ್ರಭಾ ಮಲ್ಲಿಕಾರ್ಜುನಗೆ ಟಿಕೆಟ್ ನೀಡಿದೆ. ಇದೇ ಮೊದಲ ಬಾರಿ ಮಹಿಳೆಯರಿಬ್ಬರ ನಡುವಿನ ಸ್ಪರ್ಧೆ ತೀವ್ರ ಕುತೂಹಲ ಮೂಡಿಸಿದೆ.
ಎರಡು ಕುಟುಂಬಗಳ ನಡುವೆ ನೇರಾ ನೇರ ಸ್ಫರ್ಧೆ ನಡೆಯಲಿದೆ. ಈ ಕ್ಷೇತ್ರದಲ್ಲಿ ಹಾಲಿ ಸಂಸದ ಜಿ.ಎಂ ಸಿದ್ದೇಶ್ವರ ಸತತ ನಾಲ್ಕು ಬಾರಿ ಸಂಸದರಾಗಿದ್ದಾರೆ. ಇದಲ್ಲದೆ ಅವರ ತಂದೆ ಸಹ ಎರಡು ಬಾರಿ ಆಯ್ಕೆಯಾಗಿದ್ದು, ಕ್ಷೇತ್ರದಲ್ಲಿ ಬಿಜೆಪಿ ಹೋಲ್ಡಿಂಗ್ ಗಟ್ಟಿಯಾಗುದೆ. ಇನ್ನೂ ಶಾಮನೂರು ಶಿವಶಂಕರಪ್ಪ ಕುಟುಂಬ ಸಹ ದಾವಣಗೆರೆಯಲ್ಲಿ ಬಿಗಿ ಹಿಡಿತ ಹೊಂದಿದ್ದಾರೆ. ಹೀಗಾಗಿ ದಾವಣಗೆರೆ ಈ ಬಾರಿಯ ಚುನಾವಣೆ ಎರಡು ಕುಟುಂಬದ ಪ್ರತಿಷ್ಠಿತ ಕಣವಾಗಲಿದೆ.
ಶಾಮನೂರು ಕುಟುಂಬ ಮತ್ತು ಜಿ.ಎಂ ಸಿದ್ದೇಶ್ವರ ಕುಟುಂಬ ಇದಕ್ಕೂ ಮುನ್ನ ಸಾಕಷ್ಟು ಬಾರಿ ಎದುರಾಳಿಗಳಾಗಿದ್ದರೂ ಅಲ್ಲಿ ಜಿ.ಎಂ ಸಿದ್ದೇಶ್ವರ ಗೆಲುವು ಸಾಧಿಸಿದ್ದರು. ಇದೀಗ ಮತ್ತೊಮ್ಮೆ ಎರಡು ಪಕ್ಷದಲ್ಲಿ ಕುಟುಂಬ ರಾಜಕಾರಣಕ್ಕೆ ಮನ್ನಣೆ ನೀಡಿದ್ದಾರೆ. ಇದರ ವಿರುದ್ಧ ಬಿಜೆಪಿಯಲ್ಲಿ ಯಲ್ಲಿ ಈಗಾಗಲೇ ಬಂಡಾಯದ ಗಾಳಿ ಜೀರಾಗಿ ಬೀಸುತ್ತಿದೆ. ಕಾಂಗ್ರೆಸ್ ನಲ್ಲಿಯೂ ಸಹ ಬಂಡಾಯ ಜೋರಾಗಿದೆ.
ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರ ಪತ್ನಿ, ಶಾಸಕ ಶಾಮನೂರು ಶಿವಶಂಕರಪ್ಪ ಅವರ ಸೊಸೆ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರಿಗೆ ನಿರೀಕ್ಷೆಯಂತೆ ಕಾಂಗ್ರೆಸ್ ಟಿಕೆಟ್ ಘೋಷಣೆಯಾಗಿದೆ. ಹಾಲಿ ಸಂಸದ ಜಿ.ಎಂ. ಸಿದ್ದೇಶ್ವರ ಅವರ ಪತ್ನಿ ಗಾಯತ್ರಿ ಅವರಿಗೆ ಬಿಜೆಪಿಯು ಅಚ್ಚರಿಯ ಅಭ್ಯರ್ಥಿಯಾಗಿ ಕಳೆದ ವಾರ ಟಿಕೆಟ್ ಘೋಷಿಸಿದ್ದರಿಂದ ಅವರ ಎದುರಾಳಿ ಯಾರಾಗಬಹುದು ಎಂಬ ಕುತೂಹಲ ಮತದಾರರಲ್ಲಿ ಮನೆ ಮಾಡಿತ್ತು.
ಗಾಯತ್ರಿ ಸಿದ್ದೇಶ್ವರ ಅವರಿಗೆ ಟಿಕೆಟ್ ನೀಡಿದ್ದರಿಂದ ಬಿಜೆಪಿ ಬಂಡಾಯ ಮುಖಂಡರಾದ ಮಾಜಿ ಸಚಿವ ಎಸ್ .ಎ ರವೀಂದ್ರನಾಥ್, ರೇಣುಕಾಚಾರ್ಯ, ಕರುಣಾಕರ ರೆಡ್ಡಿ, ಅಜಯ್ ಕುಮಾರ್, ಲೋಕಿಕೆರೆ ನಾಗರಾಜ್, ಬಸವರಾಜ್ ನಾಯ್ಕ್ ಸೇರಿ ಹಲವು ಮುಖಂಡರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಬಂಡಾಯ ಅಭ್ಯರ್ಥಿ ಕಣಕ್ಕೆ ಇಳಿಸುವ ಎಚ್ಚರಿಕೆ ನೀಡಿದ್ದಾರೆ. ಇನ್ನೂ ಕಾಂಗ್ರೆಸ್ ನಲ್ಲಿ ಪ್ರಭಾ ಮಲ್ಲಿಕಾರ್ಜುನ ಅವರಿಗೆ ಟಿಕೆಟ್ ನೀಡಿದ್ದರಿಂದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಯುವ ಮುಖಂಡ ಜಿ.ಬಿ. ವಿನಯಕುಮಾರ್ ಅವರು ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿನಯಕುಮಾರ್ ಕ್ಷೇತ್ರದಲ್ಲಿ ಸಾಕಷ್ಟು ಓಡಾಡಿ ಜನರ ಸಮಸ್ಯೆ ಆಲಿಸಿದ್ದರು. ಯುವಕರ ಸೆಳೆದುಕೊಂಡು ಕಳೆದ ಆರು ತಿಂಗಳಿಂದ ಕ್ಷೇತ್ರದಲ್ಲಿ ಪಾದಯಾತ್ರೆ ಮಾಡಿದ್ದರು. ಇದರಿಂದ ಎರಡೂ ಪಕ್ಷಗಳ ನಡುವೆ ಬಂಡಾಯದ ಬಿಸಿ ಜೋರಾಗಿದೆ. ಕ್ಷೇತ್ರದಲ್ಲಿ ಎರಡು ಕುಟುಂಬದ ನಡುವೆ ನೇರ ಸ್ಪರ್ಧೆ ಏರ್ಪಟ್ಟರೂ, ಬಂಡಾಯ ಅಭ್ಯರ್ಥಿಗಳು ಕಣದಲ್ಲಿ ಉಳಿದರೆ ಚತುಷ್ಕೋನ ಸ್ಪರ್ಧೆಗೆ ಎದುರಾಗಲಿದೆ.