ದಾವಣಗೆರೆ: ಲೋಕಸಭಾ ಚುನಾವಣೆ ನಡೆಯುತ್ತಿದ್ದು ನೀತಿ ಸಂಹಿತೆ ಜಾರಿಯಲ್ಲಿದೆ. ಜವಳಿ, ಚಿನ್ನಬೆಳ್ಳಿ, ಸ್ಟೀಲ್ ಅಂಗಡಿ ವ್ಯಾಪಾರಿಗಳು ಸೇರಿದಂತೆ ಟ್ರಾನ್ಸ್ ಪೋರ್ಟ್ ಮಾಲೀಕರು ನಿಯಮಬದ್ದವಾಗಿ ವಹಿವಾಟು ನಡೆಸುವ ಮೂಲಕ ಚುನಾವಣಾ ನೀತಿ ಸಂಹಿತೆ ಪಾಲನೆ ಮಾಡಬೇಕು. ಈ ಮೂಲಕ ಮುಕ್ತ, ನ್ಯಾಯಸಮ್ಮತ ಹಾಗೂ ಪಾರದರ್ಶಕವಾದ ಚುನಾವಣೆ ನಡೆಸಲು ಎಲ್ಲಾ ಸಹಕಾರ ನೀಡಬೇಕೆಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ; ವೆಂಕಟೇಶ್ ಎಂ.ವಿ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯಲ್ಲಿನ ಜವಳಿ, ಚಿನ್ನಬೆಳ್ಳಿ, ಸ್ಟೀಲ್ ಅಂಗಡಿ ವರ್ತಕರು, ಪೆಟ್ರೋಲ್ ಬಂಕ್, ಸಮುದಾಯ ಭವನ, ಹೋಟೆಲ್ ಮಾಲಿಕರು ಮತ್ತು ಸರಕು ಸಾಗಣೆ ವಾಹನಗಳ ಮಾಲಿಕರು ಹಾಗೂ ಮುದ್ರಣಾಲಯದ ಮಾಲಿಕರೊಂದಿಗೆ ನಡೆಸಿದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಚುನಾವಣಾ ಸಂದರ್ಭದಲ್ಲಿ ಜನರಿಗೆ ಉಚಿತ ಕೊಡುಗೆ ನೀಡಲು ವಸ್ತುಗಳನ್ನು ಖರೀದಿ ಮಾಡುವ ಸಂಭವವಿರುತ್ತದೆ. ಸೀರೆ ಹಂಚಿಕೆ, ಕಿಚನ್ ವಸ್ತುಗಳ ಹಂಚಿಕೆ, ಬೆಳ್ಳಿ ಬಂಗಾರದ ಉಡುಗೊರೆ ನೀಡುವ ಸಂಭವಿರುತ್ತದೆ. ಮಾಲೀರು ಯಾರು ಒಂದೇ ತರಹದ ವಸ್ತುಗಳನ್ನು ಖರೀದಿಸುವರು ಅಂತಹವರ ವಿವರವನ್ನು ನೀಡಬೇಕಾಗುತ್ತದೆ.
ಯಾವುದೇ ವಸ್ತುಗಳನ್ನು ಖರೀದಿಸಿದರೂ ಜಿ.ಎಸ್.ಟಿ. ಬಿಲ್ ನೀಡುವುದು ಕಡ್ಡಾಯವಾಗಿರುತ್ತದೆ. ಯಾವುದೇ ಮದುವೆಯ ಸಮಾರಂಭಕ್ಕೆ ಜವಳಿ ಖರೀದಿಸಿದಲ್ಲಿ ಅದಕ್ಕೆ ಸಂಬಂಧಿಸಿದ ಜಿ.ಎಸ್.ಟಿ. ಬಿಲ್ ಇಟ್ಟುಕೊಳ್ಳಬೇಕಾಗುತ್ತದೆ. ಮತ್ತು ಅಂಗಡಿ ಮಾಲಿಕರು ಆಗಮಿಸುವ ಗ್ರಾಹಕರಿಗೆ ಆನ್‍ಲೈನ್ ವ್ಯವಹಾರ ಮಾಡಲು ತಿಳಿಸಬೇಕು. ಯಾವುದೇ ಅಂಗಡಿಗೆ ವಾಣಿಜ್ಯ ತೆರಿಗೆ ಅಧಿಕಾರಿಗಳು ಬಂದಾಗ ಎಲ್ಲಾ ದಾಖಲೆಗಳನ್ನು ಇಟ್ಟುಕೊಂಡು ಪರಿಶೀಲನೆಗೆ ಸಹಕಾರ ನೀಡಬೇಕಾಗುತ್ತದೆ. ನಿಯಮಬದ್ದವಾಗಿ ವ್ಯವಹಾರ ಮಾಡಲು ಯಾವುದೇ ಅಭ್ಯಂತರ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ನಗದು ಸಾಗಣೆಗೆ ಅನುಮತಿ ಪಡೆಯಿರಿ; ಅಂಗಡಿಯಲ್ಲಿ ವ್ಯಾಪಾರ ಮಾಡಿದ ವೇಳೆ ಸ್ವೀಕರಿಸಲಾದ ನಗದನ್ನು ಬ್ಯಾಂಕ್‍ಗೆ ಹೋಗಿ ಜಮಾ ಮಾಡಲು ಹೋಗುವಾಗ ನಗದು ವಶಕ್ಕೆ ಪಡೆಯುತ್ತಾರೆ ಎಂದು ವರ್ತಕರು ಪ್ರಸ್ತಾಪಿಸಿದರು. ಇದಕ್ಕೆ ಜಿಲ್ಲಾಧಿಕಾರಿಯವರು ವಹಿವಾಟು ನಡೆಸುತ್ತಿರುವ ಬಗ್ಗೆ ಮತ್ತು ಹಣವನ್ನು ಸಾಗಣೆ ಮಾಡುತ್ತಿರುವ ಬಗ್ಗೆ ದಾಖಲೆಗಳ ಸಮೇತ ಸಂಬಂಧಿಸಿದ ಆಯಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿಗಳಿಗೆ ಸಲ್ಲಿಸಿ ವಹಿವಾಟು ನಡೆಸಬಹುದು.
ಈಗಾಗಲೇ ಧರ್ಮಸ್ಥಳ ಸಂಘದವರು ಹಣಕಾಸಿನ ವಹಿವಾಟು ನಡೆಸುತ್ತಿರುವ ಮತ್ತು ಸಂಗ್ರಹಿಸಲಾದ ನಗದನ್ನು ಬ್ಯಾಂಕ್‍ಗೆ ಕೊಂಡೊಯ್ದು ಜಮಾ ಮಾಡಲು ಅನುಮತಿ ನೀಡಲಾಗಿದೆ. ಅದೇ ರೀತಿ ಯಾವುದೇ ಟ್ರೇಡ್‍ನವರು ನಗದು ಸಾಗಣೆ ಬಗ್ಗೆ ಸೂಕ್ತ ದಾಖಲೆಗಳನ್ನಿಟ್ಟುಕೊಳ್ಳಬೇಕಾಗುತ್ತದೆ. ವಶಕ್ಕೆ ಪಡೆದ ಹಣದ ಪುನರ್ ಪರಿಶೀಲನೆ ನಡೆಸಲು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ರಿಡ್ರೆಸ್ಸೆಲ್ ಸಮಿತಿ ಕಾರ್ಯನಿರ್ವಹಿಸುತ್ತಿದೆ ಎಂದರು.
ಚಿನ್ನ ಬೆಳ್ಳಿ ವ್ಯಾಪಾರಿಗಳು ವಿವರ ಸಲ್ಲಿಸಿ; ಚಿನ್ನ ಬೆಳ್ಳಿ ವ್ಯಾಪಾರಿಗಳು ಸಣ್ಣ ಸಣ್ಣ ವಸ್ತುಗಳನ್ನು ಹೆಚ್ಚಾಗಿ ಖರೀದಿ ಮಾಡುವವರ ವಿವರವನ್ನು ನೀಡಬೇಕು. ಯಾವುದೇ ಖರೀದಿ ಮಾಡಿದ್ದರೂ ಸಹ ಜಿ.ಎಸ್.ಟಿ. ಬಿಲ್ ನೀಡುವುದು ಕಡ್ಡಾಯವಾಗಿದೆ.
ಈ ವೇಳೆ ವರ್ತಕರು ಮಾತನಾಡಿ ಆಭರಣ ತಯಾರಿಸಲು ನೀಡಿದ್ದು ವಾಪಸ್ ಅಂಗಡಿಗೆ ನೀಡುವಾಗ ವಶಕ್ಕೆ ಪಡೆದು ಸೀಜ್ ಮಾಡಲಾಗಿತ್ತು, ಅದನ್ನು ಮೂರು ತಿಂಗಳ ನಂತರ ವಾಪಸ್ ನೀಡಲಾಯಿತು. ಇದರಿಂದ ಸಕಾಲದಲ್ಲಿ ಗ್ರಾಹಕರಿಗೆ ಆಭರಣ ನೀಡಲು ಸಾಧ್ಯವಾಗದೆ ಸಮಸ್ಯೆ ಎದುರಿಸಬೇಕಾಯಿತು ಎಂದಾಗ ಆಭರಣ ಸಿದ್ದಪಡಿಸಲು ನೀಡುವಾಗಲೂ ಅದಕ್ಕೆ ಸಂಬಂಧಿಸಿದ ರಸೀದಿಯನ್ನು ನೀಡಬೇಕಾಗುತ್ತದೆ. ರಸೀದಿ ನೀಡಿದಲ್ಲಿ ಯಾರು ಸಹ ವಶಕ್ಕೆ ಪಡೆಯುವುದಿಲ್ಲ ಎಂದು ಸಷ್ಟಪಡಿಸಿದರು.
ಕೂಪನ್ ವಹಿವಾಟು ನಡೆಸುವಂತಿಲ್ಲ; ಯಾವುದೇ ಹೋಟೆಲ್, ಅಂಗಡಿಗಳಲ್ಲಿ ಕೂಪನ್ ಮೂಲಕ ವಹಿವಾಟು ನಡೆಸುವಂತಿಲ್ಲ. ಯಾವುದೇ ಹೋಟೆಲ್‍ನಲ್ಲಿ ಯಾರು ವಾಸ್ತವ್ಯ ಹೂಡುವರು ಅವರೇ ಬಿಲ್ ಪಾವತಿಸಬೇಕು. ಮತ್ತು ಯಾವುದೇ ಹೋಟೆಲ್, ಅಂಗಡಿ, ಪೆಟ್ರೋಲ್ ಬಂಕ್‍ಗಳಲ್ಲಿ ಕೂಪನ್ ಆಧರಿಸಿ ಯಾವುದೇ ವಸ್ತುಗಳು, ಉಪಹಾರ, ಊಟ ನೀಡುವಂತಿಲ್ಲ, ಮತ್ತು ಸಮುದಾಯ ಭವನಗಳಲ್ಲಿ ರಾಜಕೀಯ ಉದ್ದೇಶಕ್ಕೆ ನೀಡುವಾಗ ಕಡ್ಡಾಯವಾಗಿ ಅನುಮತಿ ಪಡೆಯಬೇಕಾಗುತ್ತದೆ ಎಂದರು.
ಮುದ್ರಣ ಮಾಲಿಕರು ಡಿಕ್ಲರೇಷನ್ ಸಲ್ಲಿಕೆ ಕಡ್ಡಾಯ; ಕರಪತ್ರ ಮುದ್ರಣ ಮಾಲಿಕರು ನಿಯಮ 127 ಎ ಅನ್ವಯ ಯಾವುದೇ ಕರಪತ್ರ ಮುದ್ರಣ ಮಾಡಿದ 3 ದಿನಗಳೊಳಗಾಗಿ ಜಿಲ್ಲಾ ದಂಡಾಧಿಕಾರಿಗೆ ಮುದ್ರಿತ ಪ್ರತಿಗಳೊಂದಿಗೆ ಅಪೆಂಡಿಕ್ಸ್.ಬಿ ಅನ್ವಯ ಸಲ್ಲಿಸಬೇಕು. ಆಯಾ ತಾಲ್ಲೂಕುಗಳಲ್ಲಿ ಸಹಾಯಕ ಚುನಾವಣಾಧಿಕಾರಿಗಳಿದ್ದು ಅಲ್ಲಿಯು ಸಲ್ಲಿಸಬಹುದಾಗಿದೆ ಎಂದ ಅವರು ಮತದಾನ ಮುಕ್ತಾಯದ 48 ಗಂಟೆಗಳ ಮುಂಚಿನ ಅವಧಿಯಲ್ಲಿ ಮುದ್ರಣ ಮಾಧ್ಯಮದಲ್ಲಿ ಜಾಹಿರಾತು ನೀಡಲು ಅನುಮತಿ ಪಡೆಯುವುದು ಕಡ್ಡಾಯವಾಗಿರುತ್ತದೆ ಎಂದರು.
ಜಿಲ್ಲಾ ರಕ್ಷಣಾಧಿಕಾರಿ ಉಮಾ ಪ್ರಶಾಂತ್ ಮಾತನಾಡಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ವ್ಯಾಪಾರ ವಹಿವಾಟಿನಲ್ಲಿ ಯಾವುದೇ ಉಲ್ಲಂಘನೆಯಾಗಬಾರದು. ಗೋಡೌನ್‍ಗಳಲ್ಲಿ ದಾಸ್ತಾನಿರುವ ವಸ್ತುಗಳಿಗೂ ನಿಮ್ಮಲ್ಲಿರುವ ಬಿಲ್‍ಗಳಿಗೂ ತಾಳೆಯಾಗುವಂತಿರಬೇಕು. ಕೆಲವು ಸಂದರ್ಭದಲ್ಲಿ ದಾಸ್ತಾನು ಮಳಿಗೆ ಪರಿಶೀಲನೆ ಮಾಡುವ ಸಂದರ್ಭ ಬಂದಾಗ ದಾಖಲೆಗಳನ್ನಿಟ್ಟುಕೊಳ್ಳಬೇಕಾಗುತ್ತದೆ. ರೂ.50 ಸಾವಿರಕ್ಕೂ ಹೆಚ್ಚು ನಗದು ತೆಗೆದುಕೊಂಡು ಹೋಗುವಂತಿಲ್ಲ. ಹೋದರೆ ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಇಟ್ಟುಕೊಳ್ಳಬೇಕಾಗುತ್ತದೆ. ಈ ವೇಳೆ ವರ್ತಕರು ಮಾತನಾಡಿ ವ್ಯಾಪಾರ ಮಾಡಲು ಬೇರೆ ಕಡೆ ಹೋದಾಗ ನಗದು ತೆಗೆದುಕೊಂಡು ಹೋಗಬೇಕಾಗುತ್ತದೆ ಎಂದಾಗ ಈ ಬಗ್ಗೆ ಸಹಾಯಕ ಚುನಾವಣಾಧಿಕಾರಿಗಳಿಗೆ ವಿವರವಾದ ಮಾಹಿತಿ ನೀಡಬಹುದಾಗಿದೆ ಎಂದರು.
ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಜಿ.ಎಸ್.ಟಿ. ನಿಯಮಗಳ ಬಗ್ಗೆ ವಿವರ ನೀಡಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸೈಯ್ಯದಾ ಆಫ್ರೀನ್ ಭಾನು ಎಸ್.ಬಳ್ಳಾರಿ, ಹೆಚ್ಚುವರಿ ರಕ್ಷಣಾಧಿಕಾರಿ ವಿಜಯಕುಮಾರ ಎಂ.ಸಂತೋಷ್, ಚುನಾವಣಾ ವೆಚ್ಚದ ಮೇಲ್ವಿಚಾರಣಾ ಸಮಿತಿ ನೋಡಲ್ ಅಧಿಕಾರಿ ಗಿರೀಶ್.ಹೆಚ್, ವಾಣಿಜ್ಯ ತೆರಿಗೆ ಇಲಾಖೆ ಸಹಾಯಕ ಆಯುಕ್ತ ಮಂಜುನಾಥ್ ಮತ್ತು ಜವಳಿ ಅಂಗಡಿ ಮಾಲಿಕರು, ಬೆಳ್ಳಿ, ಬಂಗಾರದ ಅಂಗಡಿ, ಪೆಟ್ರೋಲ್ ಬಂಕ್, ಮುದ್ರಣಾಲಯದ ಮಾಲಿಕರು, ಟ್ರಾನ್ಸ್ ಪೋರ್ಟ್ ಮಾಲಿಕರು ಉಪಸ್ಥಿತರಿದ್ದರು.