ದಾವಣಗೆರೆ: ಮದ್ಯದಂಗಡಿಗೆ ಪರವಾನಿಗೆ ನೀಡಲು 3 ಲಕ್ಷ ಲಂಚ ಸ್ವೀಕರಿಸುತ್ತಿದ್ದಾಗಲೇ ದಾವಣಗೆರೆ ಅಬಕಾರಿ ಡಿಸಿ, ಹರಿಹರ ಅಬಕಾರಿ ವಲಯ ಕಚೇರಿಯ ನಿರೀಕ್ಷಕಿ ಸೇರಿ ನಾಲ್ವರು ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆ ಬಿದ್ದಿದ್ದಾರೆ.
ಅಬಕಾರಿ ಡಿಸಿ ಸ್ವಪ್ನ, ನಿರೀಕ್ಷಕಿ ಶೀಲಾ, ಶೈಲಶ್ರೀ ಹಾಗೂ ಪ್ರಥಮ ದರ್ಜೆ ಸಹಾಯಕ ಅಶೋಕ ಲೋಕಾಯುಕ್ತ ಬಲೆಗೆ ಬಿದ್ದ ಭ್ರಷ್ಟ ಅಧಿಕಾರಿಗಳಾಗಿದ್ದಾರೆ. ದಾವಣಗೆರ-ಹರಿಹರ ರಸ್ತೆಯ ರೈಲ್ವೆ ಗೇಟ್ ಬಳಿಯ ಡಿಜಿಆರ್ ಅಮ್ಯೂಸ್ಮೆಂಟ್ ಪಾರ್ಕ್ ಕಟ್ಟಡದಲ್ಲಿ ಡಿ. ಜಿ. ರಘುನಾಥ್ ಎಂಬುವವರು ಸಿಎಲ್ – 7 ಪರವಾನಗಿ ಪಡೆಯುವ ಸಲುವಾಗಿ ಅಬಕಾರಿ ಇಲಾಖೆಗೆ ಅರ್ಜಿ ಸಲ್ಲಿಸಿದ್ದರು. ಪರವಾನಗಿ ನೀಡಲು ಅಬಕಾರಿ ಡಿಸಿ, ನಿರೀಕ್ಷಕಿ, ಪ್ರಥಮ ದರ್ಜೆ ಸಹಾಯಕರ ಕಡೆಯಿಂದ ಮೂರು ಲಕ್ಷ ರೂಪಾಯಿಗೆ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.
ಹರಿಹರದ ತನ್ನ ಕಚೇರಿಯಲ್ಲಿ ಪ್ರಥಮ ದರ್ಜೆ ಸಹಾಯಕ ಹೆಚ್. ಎಂ. ಅಶೋಕ್ ಅವರು ಮೂರು ಲಕ್ಷ ರೂಪಾಯಿ ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ವಶಕ್ಕೆ ಪಡೆದಿದ್ದಾರೆ. ವಿಚಾರಣೆ ನಡೆಸಿದಾಗ ಅಬಕಾರಿ ಡಿಸಿ, ನಿರೀಕ್ಷಕಿ ಮತ್ತು ಮತ್ತೊಬ್ಬ ಎಫ್ ಡಿಎ ಇರುವುದಾಗಿ ಅಶೋಕ್ ಮಾಹಿತಿ ನೀಡಿದ್ದು, ಈ ಮಾಹಿತಿ ಆಧರಿಸಿ ಅವರ ಮೇಲೆ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ.
ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಎಂ. ಎಸ್. ಕೌಲಾಪೂರೆ ಅವರ ಮಾರ್ಗದರ್ಶನದಲ್ಲಿ ಪೊಲೀಸ್ ನಿರೀಕ್ಷಕ ಪ್ರಭು ಬಸೂರು, ಮಧುಸೂದನ್, ಹೆಚ್. ಎಸ್. ರಾಷ್ಟ್ರಪತಿ ಮತ್ತು ಹಾವೇರಿ ಲೋಕಾಯುಕ್ತ ಪೊಲೀಸ್ ಇನ್ ಸ್ಪೆಕ್ಟರ್ ಮಂಜುನಾಥ್ ಪಂಡಿತ್ ನೇತೃತ್ವದಲ್ಲಿ ಸಿಬ್ಬಂದಿಯಾದ ವೀರೇಶಯ್ಯ, ಆಂಜನೇಯ, ಬಸವರಾಜ್, ಗಿರೀಶ್, ವಿನಾಯಕ, ಕೃಷ್ಣನಾಯ್ಕ, ಮೋಹನ್, ಕೋಟಿನಾಯ್ಕ, ಲಿಂಗೇಶ, ಮಾಲತೇಶ, ಎಸ್. ಎನ್. ಕಡಕೋಳ, ಮಹಾಂತೇಶ್ ಕಂಬಳಿ, ಲಕ್ಷ್ಮಪ್ಪ ಆನವೇರಿ, ಹರ್ಷಿಯಾ, ಸರೋಜಾ ಅವರು ಟ್ರ್ಯಾಪ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.



