ದಾವಣಗೆರೆ: ಇ- ಸ್ವತ್ತು ಮಾಡಿಕೊಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ದಾವಣಗೆರೆ ಮಹಾನಗರ ಪಾಲಿಕೆಯ ಇಬ್ಬರು ಅಧಿಕಾರಿಗಳು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಪಾಲಿಕೆಯಲ್ಲಿ ದ್ವಿತೀಯ ದರ್ಜೆ ಸಹಾಯಕ ಹಾಗೂ ಕಂದಾಯ ಅಧಿಕಾರಿ ಲಂಚದ ಹಣ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಚಂದ್ರಶೇಖರ್ ಎಂಬುವರು ತಮ್ಮ ಹಿಟ್ಟಿನ ಗಿರಣಿ ಮನೆಯ ಇ ಸ್ವತ್ತು ಪಡೆಯಲು ಅರ್ಜಿ ಸಲ್ಲಿಸಿದ್ದರು. ಈ ದಾಖಲೆ ನೀಡಲು ಪಾಲಿಕೆ ಎಸ್ಡಿಎ ಅಧಿಕಾರಿ ಲಕ್ಕಪ್ಪ ಚಂದ್ರಶೇಖರ್ಗೆ 15 ಸಾವಿರ ಹಣ್ಣಕ್ಕೆ ಬೇಡಿಕೆ ಇಟ್ಟಿದ್ದರು.
ಚಂದ್ರಶೇಖರ್ ಹಣ ನೀಡಲು ಬಂದಾಗ ಕಂದಾಯ ಅಧಿಕಾರಿ ಅನ್ನಪೂರ್ಣ 15 ಸಾವಿರ ಕಡಿಮೆಯಾಗುತ್ತದೆ, 25 ಸಾವಿರ ಕೊಡಿ ಎಂದು ಬೇಡಿಕೆ ಇಟ್ಟಿದ್ದಾರೆ. ಇದರಿಂದ ಚಂದ್ರಶೇಖರ್ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಲೋಕಾಯುಕ್ತ ಎಸ್ಪಿ ಎಂಎಸ್ ಕೌಲಾಪೂರೆ ನೇತೃತ್ವದಲ್ಲಿ ದಾಳಿ ನಡೆದಿದೆ. ಲಂಚಕ್ಕೆ ಬೇಡಿಕೆ ಇಟ್ಟಿದ್ದ ಇಬ್ಬರು ಅಧಿಕಾರಿಗಳನ್ನು ವಶಕ್ಕೆ ಪಡೆಯಲಾಗಿದೆ.