Connect with us

Dvgsuddi Kannada | online news portal | Kannada news online

ದಾವಣಗೆರೆ: ಸೆ.9ರಂದು ರಾಷ್ಟ್ರೀಯ ಲೋಕ ಅದಾಲತ್ ; ರಾಜೀ ಸಂಧಾನ ಮೂಲಕ ಕೋರ್ಟ್ ಕೇಸ್ ಇತ್ಯರ್ಥಪಡಿಸಲು ಅವಕಾಶ

IMG 20230907 185237

ದಾವಣಗೆರೆ

ದಾವಣಗೆರೆ: ಸೆ.9ರಂದು ರಾಷ್ಟ್ರೀಯ ಲೋಕ ಅದಾಲತ್ ; ರಾಜೀ ಸಂಧಾನ ಮೂಲಕ ಕೋರ್ಟ್ ಕೇಸ್ ಇತ್ಯರ್ಥಪಡಿಸಲು ಅವಕಾಶ

ದಾವಣಗೆರೆ: ಜಿಲ್ಲೆಯ ನ್ಯಾಯಾಲಯದ ಆವರಣದಲ್ಲಿ ಸೆ.9ರಂದು ರಾಷ್ಟ್ರೀಯ ಲೋಕ ಅದಾಲತ್ ನಡೆಯಲಿದ್ದು, ಕಕ್ಷಿದಾರರು ರಾಜೀ ಸಂಧಾನದ ಮೂಲಕ ತಮ್ಮ ಬಾಕಿ ಇರುವ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಂಡು ಸಮಯ ಹಾಗೂ ಹಣದ ಸದುಪಯೋಗಪಡಿಸಿಕೊಳ್ಳಬೇಕೆಂದು ಪ್ರಧಾನ ಜಿಲ್ಲಾ ಮತ್ತು ಜಿಲ್ಲಾ ಸತ್ರ ನ್ಯಾಯಾಧೀಶರಾದ ರಾಜೇಶ್ವರಿ.ಎನ್. ಹೆಗಡೆ ತಿಳಿಸಿದರು.

ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಲೋಕ ಅದಾಲತ್ ಮೂಲಕ ಜಿಲ್ಲೆಯಲ್ಲಿನ ಅತಿ ಹೆಚ್ಚು ಪ್ರಕರಣಗಳನ್ನು ವಿಲೇವಾರಿ ಮಾಡಿ ಸಾರ್ವಜನಿಕರಿಗೆ ಅನುಕೂಲಕ್ಕಾಗಿ ಅವಕಾಶ ಕಲ್ಪಿಸಲಾಗಿದೆ. ಹಲವಾರು ಪ್ರಕರಣಗಳಲ್ಲಿ ನಾನೇ ಎಂಬ ಭಾವನೆಯಿಂದ ಕೆಲವೊಂದು ಪ್ರಕರಣಗಳು ವರ್ಷಗಟ್ಟಲೆ ನಡೆಯುತ್ತವೆ. ಇದರಿಂದ ಮನಸ್ಸುಗಳು, ಸಮಯ ಹಾಗೂ ಹಣ ವ್ಯರ್ಥವಾಗಲಿದ್ದು ಯಾವುದೇ ಪ್ರಯೋಜನವಾಗುವುದಿಲ್ಲ. ಆದ್ದರಿಂದ ಸಂಬಂಧಿಸಿದ ವಕೀಲರುಗಳು, ಕಕ್ಷಿದಾರರು, ವಿಮಾ ಕಂಪನಿಗಳು ಸಹಕರಿಸಿ ಪ್ರಕರಣಗಳನ್ನು ಶೀಘ್ರವಾಗಿ ಇತ್ಯರ್ಥಪಡಿಸಿಕೊಳ್ಳುವುದರಿಂದ ಸುಖಿ ಜೀವನ ನಡೆಸಬಹುದು ಎಂದರು.

ಜಿಲ್ಲೆಯ 25 ನ್ಯಾಯಾಲಯಗಳಲ್ಲಿ ಏಕಕಾಲಕ್ಕೆ ಸೆ. 9 ರಂದು ಲೋಕ್ ಅದಾಲತ್ ನಡೆಯಲಿದೆ. ಬಹುತೇಕ ಕೌಟುಂಬಿಕ ಪ್ರಕರಣಗಳು ಲೋಕ ಅದಾಲತ್ ಹಂತದಲ್ಲಿಯೇ ಇತ್ಯರ್ಥಪಡಿಸಲು ಸಾಧ್ಯವಿರುತ್ತದೆ. ಹಾಗೂ ಅಪಘಾತದ ಪ್ರಕರಣಗಳಿಗೂ ಇಲ್ಲಿ ಶೀಘ್ರ ಪರಿಹಾರ ಸಾಧ್ಯವಾಗುತ್ತದೆ. ಇಲ್ಲದಿದ್ದ ಪಕ್ಷದಲ್ಲಿ ವರ್ಷಾನುಗಟ್ಟಲೆ ಕಾಯಬೇಕಾಗುತ್ತದೆ. ಕೆಲವೊಂದು ಕ್ರಿಮಿನಲ್ ಕೇಸ್‍ಗಳು, ಜಾತಿನಿಂದನೆ ಪ್ರಕರಣ, ಪೋಕ್ಸೊ ಕಾಯ್ದೆ ಅಡಿಯ ಪ್ರಕರಣಗಳು ಇತ್ಯರ್ಥವಾಗುವುದಿಲ್ಲ. ಇಂತಹವುಗಳನ್ನು ಹೊರತುಪಡಿಸಿ ಸಿವಿಲ್ ದಾವೆಗಳಾದ ಜೀವನಾಂಶ, ವಿಚ್ಚೇದನ, ಭೂಸ್ವಾಧೀನ ಇಂತಹ ಪ್ರಕರಣಗಳ ಕಕ್ಷಿದಾರರನ್ನು ಮುಖಾಮುಖಿ ಕೂರಿಸಿ ಪರಿಹಾರ ಕಂಡು ಕೊಳ್ಳಬಹುದಾಗಿದೆ‌ ಎಂದು ತಿಳಿಸಿದರು.

ಜಿಲ್ಲೆಯಾದ್ಯಂತ 39157 ಪ್ರಕರಣಗಳು ಬಾಕಿ ಇದ್ದು, ಇದರಲ್ಲಿ ಸೆ.9 ರಂದು ಸುಮಾರು 5400 ಇಂತಹ ಪ್ರಕರಣಗಳನ್ನು ಇತ್ಯರ್ಥಪಡಿಸಲು ಗುರುತಿಸಲಾಗಿದೆ. ಕನಿಷ್ಠ 4 ರಿಂದ 5 ಸಾವಿರ ಇಂತಹ ಪ್ರಕರಣಗಳನ್ನು ಇತ್ಯರ್ಥಪಡಿಸುವ ಗುರಿ ಹೊಂದಲಾಗಿದ್ದು ಇದಕ್ಕೆ ವಿವಿಧ ಇಲಾಖೆಗಳ ಸಹಕಾರ ಅಗತ್ಯವೆಂದರು.ನ್ಯಾಯಾಲಯದಲ್ಲಿ ದಾಖಲಾಗದಿರುವ ಪ್ರಕರಣಗಳನ್ನು (ವ್ಯಾಜ್ಯಪೂರ್ವ ಪ್ರಕರಣಗಳು) ರಾಜೀ ಸಂಧಾನದ ಮೂಲಕ ಬಗೆಹರಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಅಂತಹ ಪ್ರಕರಣಗಳಾದ ಚೆಕ್ ಅಮಾನ್ಯ ಪ್ರಕರಣ, ಭೂಸ್ವಾಧೀನ ಪರಿಹಾರ ಪ್ರಕರಣಗಳು, ಬ್ಯಾಂಕ್ ವಸೂಲಾತಿ ಪ್ರಕರಣಗಳು, ಎಂ.ಎಂ.ಡಿ.ಆರ್ ಕಾಯ್ದೆಯಡಿಯ ಪ್ರಕರಣಗಳು, ಕಾರ್ಮಿಕ ವಿವಾದಗಳು, ಕೈಗಾರಿಕಾ ಕಾರ್ಮಿಕ ವೇತನಕ್ಕೆ ಸಂಬಂಧಿಸಿದ ಕ್ಲೇಮುಗಳು, ವಿದ್ಯುತ್ ಹಾಗೂ ನೀರಿನ ಶುಲ್ಕಗಳು, ರಾಜೀಯಾಗಬಲ್ಲ ಅಪರಾಧಿಕ ಪ್ರಕರಣಗಳು, ವೈವಾಹಿಕ ಕುಟುಂಬ ನ್ಯಾಯಾಲಯ ಹಾಗೂ ಇತರೆ ಸಿವಿಲ್ ಪ್ರಕರಣಗಳನ್ನು ಲೋಕ ಅದಾಲತ್ ಮೂಲಕ ಬಗೆಹರಿಸಿಕೊಳ್ಳಬಹುದು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಮ. ಕರೆವಣ್ಣರ್ ಮಾತನಾಡಿ, ಜಿಲ್ಲಾ ವಕೀಲರ ಸಂಘದ ಪ್ರತಿಯೊಬ್ಬರ ಸಹಕಾರದಿಂದ ರಾಜ್ಯದಲ್ಲೇ ಅತೀ ಹೆಚ್ಚು ಪ್ರಕರಣ ಇತ್ಯರ್ಥ ಮಾಡಲು ಸಾಧ್ಯವಾಗಿದೆ. ಇದರಿಂದ ನ್ಯಾಯಾಧೀಶರ ಅರ್ಧದಷ್ಟು ಕೆಲಸದ ಹೊರೆ ಕಡಿಮೆ ಆಗಿದೆ. ವಕೀಲರ ಸಹಕಾರ ಇಲ್ಲದೇ ಹೋದಲ್ಲಿ ಅದಾಲತ್ ಯಶಸ್ಸು ಕಾಣಲು ಸಾಧ್ಯವಿಲ್ಲ. ವಕೀಲರೇ ಅನೇಕ ಪ್ರಕರಣಗಳನ್ನು ಲೋಕ್ ಅದಾಲತ್‍ಗೆ ಸೂಚಿಸಿರುವ ಉದಾಹರಣೆ ಇವೆ ಎಂದು ತಿಳಿಸಿದರು. ಫೆಬ್ರವರಿ 11, 2023ರ ಪೂರ್ವದಲ್ಲಿ ಸಂಚಾರಿ ಇ – ಚಲನ್ ಮೂಲಕ ವಿಧಿಸಲದ ದಂಡಗಳಲ್ಲಿ ಶೇ.50 ಕಡಿತಗೊಳಿಸಲಾಗಿದ್ದು, ಅದರ ಸದುಪಯೋಗ ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ವಕೀಲರ ಸಂಘದ ಜಿಲ್ಲಾ ಅಧ್ಯಕ್ಷ ಎಲ್.ಎಚ್. ಅರುಣ್‍ಕುಮಾರ್ ಮಾತನಾಡಿ, ದಾವಣಗೆರೆ ಜಿಲ್ಲೆಯಲ್ಲಿ ಅತೀ ಹೆಚ್ಚು ಪ್ರಕರಣ ಇತ್ಯರ್ಥ ಪಡಿಸಿರುವ ಕಾರಣಕ್ಕೆ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರಾದ, ನ್ಯಾಯಮೂರ್ತಿ ನರೇಂದ್ರ ಅವರು ಅಭಿನಂದನಾ ಪತ್ರ ನೀಡಿರುವುದು ಸಂತೋಷದ ಸಂಗತಿ. ಲೋಕ್ ಅದಾಲತ್ ಯಶಸ್ವಿಯಾಗಿ ನಡೆಯಲು ಎಲ್ಲರ ಪಾತ್ರವೂ ಅತೀ ಪ್ರಮುಖ ಎಂದು ತಿಳಿಸಿದರು. ವಕೀಲರ ಸಂಘದ ಉಪಾಧ್ಯಕ್ಷ ಜಿ.ಕೆ. ಬಸವರಾಜ್, ಕಾರ್ಯದರ್ಶಿ ಎಸ್. ಬಸವರಾಜ್, ಸಹ ಕಾರ್ಯದರ್ಶಿ ಮಂಜುನಾಥ್ ಇತರರು ಸುದ್ದಿಗೋಷ್ಠಿಯಲ್ಲಿದ್ದರು.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

ದಾವಣಗೆರೆ

Advertisement
Advertisement Enter ad code here

Title

To Top