ದಾವಣಗೆರೆ: ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ದೇಶದ ಆರ್ಥಿಕ ವ್ಯವಹಾರಗಳನ್ನು ಗಣನೀಯವಾಗಿ ಹೆಚ್ಚಿಸಲು ಹಾಗೂ ಗ್ರಾಹಕರಿಗೆ ಆರ್ಥಿಕ ಉತ್ತೇಜನವನ್ನು ನೀಡುವ ಉದ್ದೇಶದಿಂದ ಕೇಂದ್ರ ಹಣಕಾಸು ಸೇವೆಗಳ ಇಲಾಖೆ ಮತ್ತು ಕರ್ನಾಟಕ ರಾಜ್ಯ ಮಟ್ಟದ ಬ್ಯಾಂಕರುಗಳ ಸಮಿತಿಯ ನಿರ್ದೇಶನದ ಮೇರೆಗೆ “ಸಾಲ ಸಂಪರ್ಕ ಕಾರ್ಯಕ್ರಮ” ವನ್ನು ಜೂ.08 ರಂದು ಬುಧವಾರ ಬೆಳಿಗ್ಗೆ 10.30 ಕ್ಕೆ ದಾವಣಗೆರೆ ವಿದ್ಯಾನಗರದ ಕುವೆಂಪು ಕನ್ನಡ ಭವನದಲ್ಲಿ ಆಯೋಜಿಸಲಾಗಿದೆ ಎಂದು ದಾವಣಗೆರೆ ಜಿಲ್ಲಾ ಲೀಡ್ ಬ್ಯಾಂಕಿನ ವಿಭಾಗೀಯ ಜಿ.ಜಿ.ದೊಡ್ಡಮನಿ ತಿಳಿಸಿದ್ದಾರೆ.
ಜಿಲ್ಲಾ ಲೀಡ್ ಬ್ಯಾಂಕ್ ಹಾಗೂ ಜಿಲ್ಲಾ ಬ್ಯಾಂಕರುಗಳ ಸಮನ್ವಯ ಸಮಿತಿಯ ವತಿಯಿಂದ ನಡೆಯಲಿರುವ ಈ ಸಾಲ ಸಂಪರ್ಕ ಕಾರ್ಯಕ್ರಮದಲ್ಲಿ ಜಿಲ್ಲೆಯ ಎಲ್ಲ ಪ್ರಮುಖ ಬ್ಯಾಂಕುಗಳು ಮತ್ತು ನಬಾರ್ಡ್ ಪಾಲ್ಗೊಂಡು ಗ್ರಾಹಕರಿಗೆ ವಿವಿಧ ಸಾಲ ಸೌಲಭ್ಯಗಳು ಮತ್ತು ಸರಕಾರದ ವಿವಿಧ ಯೋಜನೆಗಳ ಬಗ್ಗೆ ಮಾಹಿತಿಯನ್ನು ನೀಡಿ ಸಾಲವನ್ನು ಪಡೆಯಲು ಅನುಸರಿಸಬೇಕಾದ ವಿಧಾನಗಳ ಬಗ್ಗೆ ಮಾರ್ಗದರ್ಶನವನ್ನು ನೀಡುವ ಉದ್ದೇಶವನ್ನು ಇಟ್ಟುಕೊಳ್ಳಲಾಗಿದೆ. ಹಾಗೆಯೇ ಸಣ್ಣ-ಮದ್ಯಮ-ಅತಿ ಸಣ್ಣ ಉದ್ಯಮಿಗಳಿಗೆ ಸಾಲ, ಗೃಹ ಸಾಲ, ವಾಹನ ಸಾಲ, ಶೈಕ್ಷಣಿಕ ಸಾಲ, ಕೃಷಿ ಸಾಲ, ಸ್ತ್ರೀಶಕ್ತಿ ಸಂಘಗಳಿಗೆ ಮತ್ತು ಸ್ವಸಹಾಯ ಗುಂಪುಗಳಿಗೆ ನೀಡುವ ಸಾಲ ಯೋಜನೆಗಳಿಗೆ ಒತ್ತು ನೀಡಿ ಅರ್ಹ ಅರ್ಜಿದಾರರಿಗೆ ಶೀಘ್ರ ಸಾಲ ಮಂಜೂರಾತಿ ನೀಡುವ ಗುರಿಯನ್ನೂ ಹೊಂದಲಾಗಿದೆ ಎಂದು ಜಿ.ಜಿ.ದೊಡ್ಡಮನಿ ತಿಳಿಸಿದ್ದಾರೆ.
ಸಾಲ ಸಂಪರ್ಕ ಕಾರ್ಯಕ್ರಮದ ಉದ್ಘಾಟನೆಯನ್ನು ದಾವಣಗೆರೆಯ ಸಂಸದ ಶ್ರೀ ಜಿ.ಎಂ.ಸಿದ್ದೇಶ್ವರ ಅವರು ನೆರವೇರಿಸಲಿದ್ದಾರೆ, ಸಮಾರಂಭದ ಅಧ್ಯಕ್ಷತೆಯನ್ನು ಕೆನರಾ ಬ್ಯಾಂಕಿನ ದಾವಣಗೆರೆ ಕ್ಷೇತ್ರೀಯ ಕಾರ್ಯಾಲಯದ ಸಹಾಯಕ ಮಹಾ ಪ್ರಬಂಧಕ ವೈ.ವಿ.ಎನ್.ಶಿವ ಪ್ರಸಾದ್ ವಹಿಸುವರು ಹಾಗೂ ಮುಖ್ಯ ಅತಿಥಿಗಳಾಗಿ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಎ.ಚನ್ನಪ್ಪ, ಅತಿಥಿಗಳಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಸಹಾಯಕ ಮಹಾ ಪ್ರಬಂಧಕ ಅನಿಲ್ ಬಿಹಾರಿ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಉಪ ಮಹಾ ಪ್ರಬಂಧಕ ಎ.ರಾಜಾಮಣಿ, ಬ್ಯಾಂಕ್ ಆಫ್ ಬರೋಡದ ಉಪ ಮಹಾ ಪ್ರಬಂಧಕ ಆರ್.ವಿ.ಎಸ್.ವಿ.ಶ್ರೀಧರ್, ಕರ್ನಾಟಕ ಗ್ರಾಮೀಣ ಬ್ಯಾಂಕಿನ ಸಹಾಯಕ ಮಹಾ ಪ್ರಬಂಧಕ ನಾಗೇಶ್ ಪ್ರಭು, ಡಿ.ಸಿ.ಸಿ.ಬ್ಯಾಂಕಿನ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ತಾವರ಼್ಯಾ ನಾಯ್ಕ್, ನಬಾರ್ಡ್‌ನ ಜಿಲ್ಲಾ ವ್ಯವಸ್ಥಾಪಕ ವಿ.ರವೀಂದ್ರ ಮತ್ತು ಪ್ರಮುಖ ಬ್ಯಾಂಕುಗಳ ಉನ್ನತ ಅಧಿಕಾರಿಗಳು ಭಾಗವಹಿಸಲಿದ್ದಾರೆ ಹಾಗೂ ಜಿಲ್ಲಾ ಮಾರ್ಗದರ್ಶಿ ಬ್ಯಾಂಕಿನ ವಿಭಾಗೀಯ ಪ್ರಬಂಧಕ ಜಿ.ಜಿ.ದೊಡ್ಡಮನಿ ಉಪಸ್ಥಿತರಿರುವರು.
ಸಾರ್ವಜನಿಕರು ಮತ್ತು ಬ್ಯಾಂಕ್ ಗ್ರಾಹಕರು ಕಾರ್ಯಕ್ರಮದ ಪ್ರಯೋಜನವನ್ನು ಗರಿಷ್ಠ ಪ್ರಮಾಣದಲ್ಲಿ ಪಡೆಯಬೇಕಾಗಿ ಲೀಡ್ ಬ್ಯಾಂಕ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.



