ದಾವಣಗೆರೆ: ಲಿಂಗಾಯತ ಅಧಿಕಾರಿಗಳಿಗೆ ಈ ಸರ್ಕಾರದಲ್ಲಿ ಅನ್ಯಾಯ ಆಗಿದೆ ಎಂದು ತಮ್ಮದೇ ಸರ್ಕಾರದ ವಿರುದ್ಧ ಅಸಮಾಧಾನ ಹೊರ ಹಾಕಿ ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಠಿಸಿದ್ದ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರಾಧ್ಯಕ್ಷ ಹಾಗೂ ಕಾಂಗ್ರೆಸ್ ನ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಇವತ್ತು ಸಾಫ್ಟ್ ಆಗಿಯೇ ಉತ್ತರಿಸಿದ್ದಾರೆ. ನಾನು ಸರ್ಕಾರದ ವಿರುದ್ಧ ಯಾವ ಬಾಂಬ್ ಹಾಕಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯರ ಜೊತೆ ಯಾವಾಗ ಮಾತನಾಡುತ್ತೇನೆಂದು ಹೇಳಕಾಗಲ್ಲ, ಈ ವಿಚಾರವಾಗಿ ನೀವು (ಮಾಧ್ಯಮ) ಸಿದ್ದರಾಮಯ್ಯ ಅವರನ್ನೇ ಕೇಳಬೇಕು. ಒಂದು ವೇಳೆ ಮಾತನಾಡಿದ್ದರೂ ಅದನ್ನು ಬಹಿರಂಗಪಡಿಸಲ್ಲ ಎಂದು ಹೇಳಿದರು.
ಇಂದು ನಗರದ ಬಾಪೂಜಿ ಎಂಬಿಎ ಮೈದಾನದಲ್ಲಿ ಆಯೋಜಿಸಿದ್ದ ವೀರಶೈವ ಲಿಂಗಾಯತ ಮಹಾಸಭಾದ 24 ನೇ ಅಧಿವೇಶನದ ಪೂರ್ವಭಾವಿ ಸಭೆಯ ಬಳಿಕ ಪ್ರತಿಕ್ರಿಯಿಸಿ, ಈ ವಿಚಾರವಾಗಿ ನನಗೆ ಹೈಕಮಾಂಡ್ ನಿಂದ ಯಾವ ಸೂಚನೆಯೂ ಬಂದಿಲ್ಲ. ಮಾತುಕತೆ ಯಾವ ದಿನ ನಡೆಸುತ್ತೇವೆ ಎಂಬುದನ್ನು ಸಿಎಂ ಸಿದ್ದರಾಮಯ್ಯ ಅವರನ್ನೇ ಕೇಳಿ. ನನ್ನನ್ನು ಕೇಳ ಬೇಡಿ .ನಿಮ್ಮ ಪುತ್ರ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರು ಲಿಂಗಾಯತ ಅಧಿಕಾರಿಗಳ ಕಡೆಗಣನೆ ಆಗಿಲ್ಲ, ಎಂದಿದ್ದಾರಲ್ಲ ಎಂಬ ಪ್ರಶ್ನೆಗೆ ಅವರು ಹೇಳಿದ್ದಾರಲ್ವಾ…., ಅವರು ಹೇಳಿದ ಮೇಲೆ ಮುಗಿಯಿತು. ಮತ್ತೇನೂ ಇಲ್ಲ ನಡಿ ಎಂದರು.
ಡಿಸೆಂಬರ್ 23 ಮತ್ತು 24ರಂದು ದಾವಣಗೆರೆಯಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ 24 ನೇ ಅಧಿವೇಶನ ನಡೆಯಲಿದೆ. ಲಕ್ಷಾಂತರ ಜನರು ಭಾಗವಹಿಸಲಿದ್ದಾರೆ. ವೀರಶೈವ ಲಿಂಗಾಯತ ಮಹಾಸಭಾದ 24 ನೇ ಅಧಿವೇಶನವು ಶಕ್ತಿ ಪ್ರದರ್ಶನ ಮಾಡುವ ವೇದಿಕೆ ಅಲ್ಲ. ಹತ್ತು ಇಲ್ಲವೇ, ಇಪ್ಪತ್ತು ಲಕ್ಷ ಜನರು ಸೇರಿಸಿದ್ರೆ ಅದು ಶಕ್ತಿ ಪ್ರದರ್ಶನ. 1 ಲಕ್ಷಕ್ಕೂ ಹೆಚ್ಚು ಜನರು ಪಾಲ್ಗೊಂಡ್ರೆ ಅದು ಹೇಗೆ ಶಕ್ತಿ ಪ್ರದರ್ಶನ ಆಗುತ್ತೆ ಎಂದರು.



