ದಾವಣಗೆರೆ: ಮಣ್ಣಿನ ಆರೋಗ್ಯ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ ಎಂದು ಹಿರಿಯ ವಿಜ್ಞಾನಿ ಡಾ. ಟಿ.ಎನ್. ದೇವರಾಜ ಹೇಳಿದರು.
ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರದಲ್ಲಿ ‘ವಿಶ್ವ ಮಣ್ಣು’ ದಿನಾಚರಣೆಯಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು, ಮಣ್ಣಿನ ಆರೋಗ್ಯ ರಕ್ಷಣೆ ಅವಶ್ಯಕತೆಯನ್ನು ಸ್ಮರಿಸಿದರು. ಇತ್ತೀಚಿಗೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರೈತರ ಕಾಯ್ದೆ 2020 ರಲ್ಲಿ ಅನುಕೂಲಗಳು ಹೆಚ್ಚು. ಇರುವುದರಿಂದ ರೈತರು ತಾವು ಬೆಳೆದ ಬೆಳೆ ಮಾರಾಟದಲ್ಲಿ ಇದರ ಲಾಭ ಪಡೆಯಬೇಕೆಂದರು.
ಜಿಲ್ಲೆಯ ಉಪ ಕೃಷಿ ನಿರ್ದೇಶಕ ಶಿವಕುಮಾರ್ ಮಾತನಾಡಿ, ಮಣ್ಣಿನ ಆರೋಗ್ಯ ವೃದ್ಧಿಸಲು ಮತ್ತು ಸಂರಕ್ಷಣೆ ಮಾಡಲು ಕೃಷಿ ಇಲಾಖೆಯಲ್ಲಿರುವ ವಿವಿಧ ಯೋಜನೆ ಕುರಿತು ವಿವರಣೆ ನೀಡಿದರು. ಮಣ್ಣು ಪರೀಕ್ಷಾ ಕೇಂದ್ರದ ಕಾರ್ಯವನ್ನು ಶ್ಲಾಘೀಸಿದರು.
ಕೃಷಿಕ ಸಮಾಜದ ಜಿಲ್ಲಾ ಅಧ್ಯಕ್ಷ ಹನುಮಂತಪ್ಪ ಜಿ. ಮಾತನಾಡಿ, ರೈತರು ಕೃಷಿ ಇಲಾಖೆ ಮತ್ತು ಕೃಷಿ ವಿಜ್ಞಾನ ಕೇಂದ್ರಗಳು ಆಯೋಜಿಸುವ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ವೈಜ್ಞಾನಿಕ ಮಾಹಿತಿಯನ್ನು ಪಡೆದುಕೊಳ್ಳಬೇಕು. ರೈತ ಸಂಪರ್ಕ ಕೇಂದ್ರಗಳು ರೈತರಿಗೆ ಸಮರ್ಪಕ ಮಾಹಿತಿ ನೀಡುತ್ತಿದ್ದು, ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಮತ್ತು ರಾಜ್ಯ ಕೃಷಿ ಸಚಿವರಾದ ಶ್ರೀಯುತ ಬಿ.ಸಿ. ಪಾಟೀಲ್ ರವರು ರೈತರನ್ನು ಉದ್ಧೇಶಿಸಿ ಮಾತನಾಡಿದ ನೇರ ಪ್ರಸಾರವನ್ನು ಬಿತ್ತರಿಸಲಾಯಿತು.
ನಿವೃತ್ತ ಸಹಾಯಕ ಕೃಷಿ ನಿರ್ದೇಶಕ ಡಾ ಪ್ರಕಾಶ್ ಮಾತನಾಡಿ, ಭೂಮಿಯನ್ನು ತಾಯಿಗೆ ಹೊಲಿಸಿ ಮಣ್ಣಿನ ಪ್ರಾಮುಖ್ಯತೆ ತಿಳಿಸಿದರು. ಕೇಂದ್ರದ ಮಣ್ಣು ವಿಜ್ಞಾನ ತಜ್ಞರಾದ ಶ್ರೀ ಹೆಚ್.ಎಂ. ಸಣ್ಣಗೌಡ್ರ ‘ಮಣ್ಣು ಆರೋಗ್ಯ – ನಮ್ಮ ಆರೋಗ್ಯ’ ವಿಷಯ ಕುರಿತು ಉಪನ್ಯಾಸ ನೀಡಿದರು. ಸುವರ್ಣ ಆಗ್ರೋ ಟೆಕ್ನಾಲಜಿಸ್ ನ ಡಾ. ಪ್ರದೀಪ್ ಹೆಚ್.ಎಂ. ರಸ ಗೊಬ್ಬರಗಳ ಬಳಕೆ ನಿರ್ವಹಣೆ ಕುರಿತು ರೈತರಲ್ಲಿ ಅರಿವು ಮೂಡಿಸಿದರು.
ಉಪ ಯೋಜನಾ ನಿರ್ದೇಶಕರು, ಆತ್ಮ ಯೋಜನೆಯ ಶ್ರೀ ಚಂದ್ರಶೇಖರಪ್ಪ, ರವರು ಸ್ವಾಗತಿಸಿದರು, ಕೇಂದ್ರದ ಕೃಷಿ ವಿಸ್ತರಣೆ ತಜ್ಞ ರಘುರಾಜ ಜೆ. ನಿರೂಪಿಸಿದರು. ಜಿಲ್ಲೆಯ ವಿವಿಧ ಹಳ್ಳಿಗಳಿಂದ ಆಗಮಿಸಿದ ರೈತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.



