ದಾವಣಗೆರೆ: ಕೈ ತೋಟದಲ್ಲಿ ಸಾವಯವ ರೂಪದಲ್ಲಿ ಬೆಳೆದ ತರಕಾರಿಗಳು ಪೌಷ್ಠಿಕತೆಯಿಂದ ಕೂಡಿದ್ದು, ದೇಹಕ್ಕೆ ಉತ್ತಮ ಆರೋಗ್ಯ ನೀಡಲು ಸಹಾಯವಾಗುತ್ತದೆ ಎಂದು ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕೆ ತಜ್ಞ ಬಸವನಗೌಡ ಎಂ.ಜಿ ತಿಳಿಸಿದರು.
ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರ ಮತ್ತು ನಿಟ್ಟೂರು ತರಳಬಾಳು ಅಮೃತ ತೋಟಗಾರಿಕೆ ರೈತ ಉತ್ಪಾದಕ ಕಂಪನಿ ಇವರ ಸಹಯೋಗದೊಂದಿಗೆ ನಿಟ್ಟೂರಿನಲ್ಲಿ ಪೌಷ್ಟಿಕಾಂಶದ ಭದ್ರತೆಗಾಗಿ ಪೌಷ್ಟಿಕ ಕೈತೋಟ ಎಂಬ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾಹಿತಿ ನೀಡಿದರು.
ಪ್ರಸ್ತುತ ಆಹಾರ ಪದ್ಧತಿಯಲ್ಲಿ ರಸಾಯನಿಕ ಮುಕ್ತ ತರಕಾರಿಗಳು, ಬೇಳೆ ಕಾಳುಗಳ ಬಳಕೆ ಹಾಗೂ ಸಾವಯವ ಅಂಶಗಳಿಂದ ಬೆಳೆದ ಪದಾರ್ಥಗಳು ನಮ್ಮ ದೇಹಕ್ಕೆ ಪೌಷ್ಠಿಕ ಸಮತೋಲನವನ್ನು ಕಾಪಾಡಿಕೊಳ್ಳಲು ಸಹಕಾರಿಯಾಗುತ್ತವೆ. ಕೈತೋಟದಲ್ಲಿ ಹಣ್ಣು, ತರಕಾರಿ, ಹೂವು, ಔಷಧೀಯ ಸಸ್ಯಗಳನ್ನು ಬೆಳೆಸುವುದು ಉತ್ತಮ ಹವ್ಯಾಸವೆಂದು ತಿಳಿಸಿದರು
ಕೇಂದ್ರದ ಗೃಹ ವಿಜ್ಞಾನಿಗಳಾದ ಡಾ. ಸುಪ್ರೀಯಾ ಪಿ. ಪಾಟೀಲ್ ಅವರು ಮಾತನಾಡಿ ಹೆಚ್ಚಿನ ಮಹಿಳೆಯರಲ್ಲಿ ರಕ್ತಹೀನತೆ ಕಾಡುತ್ತಿದ್ದು, ಅಪೌಷ್ಠಿಕತೆಗೆ ಒಳಗಾಗಿದ್ದಾರೆ. ಇವರು ತಮ್ಮ ಮನೆ ಸುತ್ತ ಮುತ್ತಲಿನ ಜಾಗದಲ್ಲಿ ಕಬ್ಬಿಣಾಂಶ ಹೆಚ್ಚಿರುವ ಸೊಪ್ಪು ಮತ್ತು ಇತರೆ ತರಕಾರಿಗಳನ್ನು ಬೆಳೆದು ಸೇವಿಸುವುದರಿಂದ ರಕ್ತಹೀನತೆಯನ್ನು ತಡೆಗಟ್ಟಬಹುದು ಎಂದು ಮಾಹಿತಿ ನೀಡಿದರು. ಈ ಪೌಷ್ಠಿಕ ಕೈತೋಟವನ್ನು ನಾವು ಅಳವಡಿಸಿಕೊಳ್ಳುವುದರಿಂದ ನಾವು ಒಳ್ಳೆಯ ಆರೋಗ್ಯವನ್ನುಗಳಿಸುವುದರ ಜೊತೆಗೆ ಹಣವನ್ನು ಉಳಿತಾಯ ಮಾಡಬಹುದೆಂದರು.
ಇದೇ ವೇಳೆ ಪೌಷ್ಠಿಕ ಕೈತೋಟಕ್ಕೆ ಬೇಕಾಗಿರುವ ಬೀಜಗಳನ್ನು ೩೦ ರೈತ ಮಹಿಳೆಯರಿಗೆ ವಿತರಿಸಲಾಯಿತು. ನಿಟ್ಟೂರು ತರಳಬಾಳು ಅಮೃತ ತೋಟಗಾರಿಕಾ ರೈತ ಉತ್ಪಾದಕ ಕಂಪನಿಯ ಅಧ್ಯಕ್ಷರಾದ ಇಟಗಿ ಶಿವಣ್ಣ, ನಿರ್ದೇಶಕರಾದ ಶ್ರೀಮತಿ ಸರೋಜ ಪಾಟೀಲ್ ಭಾಗವಹಿಸಿದ್ದರು.