ಡಿವಿಜಿ ಸುದ್ದಿ, ದಾವಣಗೆರೆ: ಕೊರೊನಾ ಲಾಕ್ ಡೌನ್ ವೇಳೆ ಕೆಎಸ್ ಆರ್ ಟಿಗೆ 1,500 ಕೋಟಿಯಷ್ಟು ನಷ್ಟವಾಗಿದೆ ಎಂದು ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ಎಂ. ಚಂದ್ರಪ್ಪ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲಾಕ್ ಡೌನ್ ವೇಳೆ ಸರ್ಕಾರ 1350 ಕೋಟಿ ನೀಡಿದ್ದರಿಂದ ಸಿಬ್ಬಂದಿಗಳಿಗೆ ವೇತನ ನೀಡಲು ಸಾಧ್ಯವಾಯಿತು. ನಷ್ಟದ ಸಮಯದಲ್ಲಿಯೂ ಸಿಬ್ಬಂದಿಗೆ ವೇತನಕ್ಕೆ ತಡೆ ನೀಡಿಲ್ಲ ಎಂದರು.
ಈಗಿನ ಮಾರ್ಗ ಸೂಚಿ ಪ್ರಕಾರ ಬಸ್ ಗಳ ಡಿಸೇಲ್ ಖರ್ಚಿಗೂ ಆಗುವುದಿಲ್ಲ. ಎಲ್ಲಾ ಮಾರ್ಗ ಸೂಚಿ ಅನುಸರಿಸಿ ಬಸ್ ಸಂಚಾರ ನಡೆಸುವಂತೆ ಸೂಚನೆ ನೀಡಲಾಗಿದೆ. ಆಂಧ್ರ ಪ್ರದೇಶ, ಗೋವಾ, ಮಹಾರಾಷ್ಟ್ರಕ್ಕೆ ರಾಜ್ಯದಿಂದ ಬಸ್ ಸಂಚಾರಕ್ಕೆ ಅನುಮತಿ ದೊರೆತಿದೆ ಎಂದು ತಿಳಿಸಿದರು.
ಸಾರಿಗೆ ಸಂಸ್ಥೆ ಸೇವಾ ಮನೋಭಾವದ ಸಂಸ್ಥೆಯಾಗಿದ್ದು, ನಷ್ಟದಲ್ಲಿದ್ದರೂ ಸೇವೆ ನೀಡುತ್ತೇವೆ. ಸಂಸ್ಥೆಯ ಸಿಬ್ಬಂದಿಗಳು ಕೂಡ ಉತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಪ್ರತಿ ತಿಂಗಳು ಸಿಬ್ಬಂದಿಗೆ 160 ಕೋಟಿ ವೇತನ ನೀಡಲಾಗುತ್ತಿದೆ. ಸಾಲ ಮಾಡಿಯಾದರೂ ಸರಿ ಸಂಸ್ಥೆ, ಸಿಬ್ಬಂದಿಯ ಹಿತ ಕಾಪಾಡಲಾಗುವುದು ಎಂದರು.



