Connect with us

Dvgsuddi Kannada | online news portal | Kannada news online

ದಾವಣಗೆರೆ: ಬೇಸಿಗೆಯಲ್ಲಿ ಕುಡಿಯುವ ನೀರು, ಮೇವಿನ ಸಮಸ್ಯೆಯಾಗದಂತೆ ಕ್ರಮ; ಸಚಿವ ಎಸ್.ಎಸ್.ಮಲ್ಲಿಕಾರ್ಜುನ್

FB IMG 1709785706580

ದಾವಣಗೆರೆ

ದಾವಣಗೆರೆ: ಬೇಸಿಗೆಯಲ್ಲಿ ಕುಡಿಯುವ ನೀರು, ಮೇವಿನ ಸಮಸ್ಯೆಯಾಗದಂತೆ ಕ್ರಮ; ಸಚಿವ ಎಸ್.ಎಸ್.ಮಲ್ಲಿಕಾರ್ಜುನ್

ದಾವಣಗೆರೆ: ಬರಗಾಲದಿಂದ ಈ ವರ್ಷ ಕುಡಿಯುವ ನೀರಿಗೆ ಸಮಸ್ಯೆಯಾಗಲಿದ್ದು, ಕುಡಿಯುವ ನೀರು ಮತ್ತು ಮೇವಿನ ಪೂರೈಕೆಗಾಗಿ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ. ಜನರಿಗೆ ಯಾವುದೇ ತೊಂದರೆಯಾಗದಂತೆ ಬರ ನಿರ್ವಹಣೆ ಮಾಡಲಾಗುತ್ತದೆ ಎಂದು ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ತಿಳಿಸಿದರು.

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಏರ್ಪಡಿಸಲಾದ ಕೆಡಿಪಿ ತ್ರೈಮಾಸಿಕ ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ವೇಳೆ ಮಾತನಾಡಿದರು. ಜಿಲ್ಲೆಯಲ್ಲಿ ಇವರೆಗೆ 22 ಗ್ರಾಮಗಳಲ್ಲಿ 27 ಖಾಸಗಿ ಕೊಳವೆಬಾವಿಗಳನ್ನು ಬಾಡಿಗೆ ಆಧಾರದ ಮೇಲೆ ಪಡೆದು ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. ಮತ್ತು ಎಲ್ಲೆಲ್ಲಿ ಪ್ಲೋರೈಡ್‍ಯುಕ್ತ ನೀರು ಇದೆ ಅಂತಹ ಕಡೆ ಒಳ್ಳೆಯ ನೀರು ಪೂರೈಕೆ ಮಾಡಲು ಟ್ಯಾಂಕರ್ ಬಳಸಬೇಕು ಮತ್ತು ಶುದ್ದ ಕುಡಿಯುವ ನೀರಿನ ಘಟಕಗಳನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳಲು ಸೂಚನೆ ನೀಡಿದರು.

ಈ ವೇಳೆ ಚನ್ನಗಿರಿ ಶಾಸಕರಾದ ಬಸವರಾಜ ವಿ.ಶಿವಗಂಗಾ ಮಾತನಾಡಿ ನೀರು ಪೂರೈಕೆಗೆ ಟ್ಯಾಂಕರ್ ಬಳಕೆಗೆ ಅನುಮತಿ ನೀಡಿದ್ದು ಜಿಪಿಎಸ್ ಅಳವಡಿಸಿದ ಟ್ಯಾಂಕರ್ ಬಾಡಿಗೆ ಪಡೆಯಲು ಷರತ್ತು ವಿಧಿಸಿದ್ದು ಇದರಿಂದ ಟ್ಯಾಂಕರ್ ಸಿಗುತ್ತಿಲ್ಲ ಎಂದಾಗ ಯಾವ ಟ್ಯಾಂಕರ್ ಪಡೆಯಲಾಗುತ್ತದೆ, ಅದೇ ಟ್ಯಾಂಕರ್‍ಗೆ ಜಿಪಿಎಸ್ ಅಳವಡಿಸಿಕೊಳ್ಳಬೇಕೆಂದರು.

ಜಿಲ್ಲೆಯ ಬಹುಗ್ರಾಮ ಕುಡಿಯುವ ಯೋಜನೆ ಮತ್ತು ಚಿತ್ರದುರ್ಗಕ್ಕೆ ಶಾಂತಿಸಾಗರದಿಂದ ಕುಡಿಯುವ ನೀರು ಪೂರೈಕೆಯಾಗುತ್ತಿದ್ದು ಶಾಂತಿಸಾಗರದ ನೀರು ಕಡಿಮೆಯಾಗುತ್ತಿದೆ ಎಂದು ಚನ್ನಗಿರಿ ಶಾಸಕರು ಪ್ರಸ್ತಾಪಿಸಿದರು. ಈ ವೇಳೆ ಜಿಲ್ಲಾ ಸಚಿವರು ಶಾಂತಿಸಾಗರ ಕುಡಿಯುವ ನೀರಿಗೂ ಆದ್ಯತೆ ನೀಡಬೇಕು ಮತ್ತು ಅಚ್ಚಕಟ್ಟು ಪ್ರದೇಶದ ಕೊನೆ ಭಾಗದ ರೈತರಿಗೂ ನೀರು ಕೊಡುವ ಮೂಲಕ ಬೆಳೆದಿರುವ ತೋಟಗಾರಿಕೆ ಬೆಳೆಗಳನ್ನು ಉಳಿಸಬೇಕಾಗಿದೆ. ಇದಕ್ಕಾಗಿ ಮುಂದಿನ ಎರಡು ಹಂತದಲ್ಲಿ ನೀರು ಬಿಡುಗಡೆ ಮಾಡುವ ವೇಳೆ ಕೊನೆ ಭಾಗದ ರೈತರಿಗೆ ಮೊದಲ ಆದ್ಯತೆಯಾಗಿ ನೀರು ಕೊಡಲು ಎಲ್ಲಾ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಮತ್ತು ಕುಡಿಯುವ ನೀರಿನ ಪೂರೈಕೆಗೂ ಆದ್ಯತೆಯನ್ನು ನೀಡಲಾಗುತ್ತದೆ ಎಂದರು.

ಗ್ಯಾರಂಟಿ ಯೋಜನೆಗಳ ಸಮೀಕ್ಷೆ; ಗ್ಯಾರಂಟಿ ಯೋಜನೆಗಳ ಸಮೀಕ್ಷೆ ನಡೆಸಲಾಗುತ್ತಿದ್ದು ಯಾರಿಗೆ ಈ ಯೋಜನೆಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ ಎಂಬ ಬಗ್ಗೆ ಪರಿಶೀಲನೆ ಕೈಗೊಂಡು ಪರಿಹರಿಸುವ ಕೆಲಸ ಮಾಡಲಾಗುತ್ತದೆ. ಗೃಹಲಕ್ಷ್ಮಿ ಯೋಜನೆಯಡಿ ಕೆಲವು ತಾಂತ್ರಿಕ ಸಮಸ್ಯೆಯಿಂದ ಮೊದಲ ತಿಂಗಳು ಎರಡು ಸಾವಿರ ಬಂದವರಿಗೆ ನಂತರದ ತಿಂಗಳಲ್ಲಿ ಬಂದಿರುವುದಿಲ್ಲ, ಆಧಾರ್ ಜೋಡಣೆ, ಬ್ಯಾಂಕ್ ಕೆವೈಸಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಜಿಲ್ಲಾಧಿಕಾರಿಯವರು ತಾಂತ್ರಿಕ ಪರಿಣಿತರೊಂದಿಗೆ ಅಭಿಯಾನದ ರೀತಿ ಸಮಸ್ಯೆ ಇತ್ಯಾರ್ಥಕ್ಕೆ ಕ್ರಮ ವಹಿಸಲು ಜಿಲ್ಲಾ ಉಸ್ತುವಾರಿ ಸಚಿವರು ತಿಳಿಸಿದರು.

ಅನಿರೀಕ್ಷಿತ ಭೇಟಿ ನೀಡಲು ಸಲಹೆ; ಕೆಲವು ನ್ಯಾಯಬೆಲೆ ಅಂಗಡಿಗಳಲ್ಲಿ ಒಂದು ಕೆಜಿ ವರೆಗೆ ಅಕ್ಕಿಯನ್ನು ಕಡಿಮೆ ಕೊಡುತ್ತಿರುವ ದೂರುಗಳಿವೆ ಎಂದು ಮಾಯಕೊಂಡ ಶಾಸಕರಾದ ಕೆ.ಎಸ್.ಬಸವಂತಪ್ಪನವರು ಪ್ರಸ್ತಾಪಿಸಿದಾಗ ನ್ಯಾಯಬೆಲೆ ಅಂಗಡಿಗಳಿಗೆ ಆಹಾರ ಇಲಾಖೆ ಅಧಿಕಾರಿಗಳೊಂದಿಗೆ ಅನಿರೀಕ್ಷಿತ ಭೇಟಿ ನೀಡುವ ಮೂಲಕ ಪರಿಶೀಲನೆ ನಡೆಸಲು ತಿಳಿಸಿ ಪ್ರಮಾಣಕ್ಕಿಂತ ಕಡಿಮೆ ಆಹಾರಧಾನ್ಯ ವಿತರಣೆ ಮಾಡುತ್ತಿದ್ದಲ್ಲಿ ಅಂತಹ ನ್ಯಾಯಬೆಲೆ ಅಂಗಡಿಗಳ ಮೇಲೆ ಕ್ರಮ ಜರುಗಿಸಲು ಸೂಚನೆ ನೀಡಿದರು.
ಕೆರೆ ಒತ್ತುವರಿಗೆ ಕ್ರಮ; ಹೊನ್ನಾಳಿ ಶಾಸಕರಾದ ಡಿ.ಜಿ.ಶಾಂತನಗೌಡರವರು ಕೆಲವರು ಕೆರೆ ಒತ್ತುವರಿ ಮಾಡುವ ಜೊತೆಗೆ ಸ್ಮಶಾನವನ್ನು ಒತ್ತುವರಿ ಮಾಡಿದ್ದಾರೆ ಎಂದಾಗ ಸರ್ಕಾರಿ ಜಾಗವನ್ನು ಗುರುತಿಸಿ ಒತ್ತುವರಿ ಮಾಡದಂತೆ ಬೀಟ್ ವ್ಯವಸ್ಥೆಯನ್ನು ಮಾಡಲಾಗುತ್ತದೆ. ಮತ್ತು ಕೆರೆ ಒತ್ತುವರಿ ಬಗ್ಗೆ ಜಿಲ್ಲಾಧಿಕಾರಿಯವರು ಕ್ರಮ ಕೈಗೊಳ್ಳುವರೆಂದು ತಿಳಿಸಿದರು.

ಶಿಕ್ಷಣ ಮತ್ತು ಆರೋಗ್ಯ; ಶಿಕ್ಷಣ ಇಲಾಖೆಯಲ್ಲಿ ಕೊಠಡಿಗಳ ಸಮಸ್ಯೆ ಇದ್ದು ಪಾಳುಬಿದ್ದಿರುವ ಕೊಠಡಿಯನ್ನು ಸಂಪೂರ್ಣವಾಗಿ ತೆರವು ಮಾಡಬೇಕು. ಶಾಲೆಗಳಲ್ಲಿ ಗ್ರೂಪ್ ಡಿ. ಸಿಬ್ಬಂದಿಯ ಸಮಸ್ಯೆಯಿಂದ ನಿರ್ವಹಣೆ ಕಷ್ಟವಾಗಿದ್ದು ಇದಕ್ಕೆ ಪರಿಹಾರ ಕಂಡುಕೊಳ್ಳಲಾಗುತ್ತದೆ. ಪ್ರತಿಯೊಂದು ಶಾಲೆಯಲ್ಲಿ ಶೌಚಾಲಯ, ಆಟದ ಮೈದಾನ, ಕುಡಿಯುವ ನೀರು ಒದಗಿಸಬೇಕು. ಒಂದೇ ಮಾದರಿಯಲ್ಲಿ ಎಲ್ಲಾ ಶಾಲೆಗಳಲ್ಲಿ ಶೌಚಾಲಯವನ್ನು ನಿರ್ಮಾಣ ಮಾಡಲು ಒಂದೇ ಏಜೆನ್ಸಿ ಮೂಲಕ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ಆರೋಗ್ಯ ಇಲಾಖೆಯಿಂದ ಎಲ್ಲಾ ತಾಲ್ಲೂಕು ಆಸ್ಪತ್ರೆಳಲ್ಲಿ ಡಯಾಲೀಸಿಸ್ ಆರಂಭಿಸಲಾಗಿದೆ, ಚಿಗಟೇರಿಯಲ್ಲಿ 10 ಯುನಿಟ್‍ಗಳು ಕಾರ್ಯನಿರ್ವಹಿಸುತ್ತಿವೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಸಭೆಗೆ ತಿಳಿಸಿದಾಗ ಮಾಯಕೊಂಡ ಶಾಸಕರಾದ ಬಸವಂತಪ್ಪನವರು ಡಯಾಲೀಸಿಸ್ ನಿರ್ವಹಣೆಗೆ ನೀಡುವ ಹೊರಗುತ್ತಿಗೆ ಸಂಸ್ಥೆಯವರು ಕೆಲವೇ ವಸ್ತುಗಳನ್ನು ನೀಡಿ ಇನ್ನುಳಿದವುಗಳನ್ನು ಹೊರಗಿನಿಂದ ತರಲು ಹೇಳುತ್ತಿದ್ದಾರೆ ಎಂಬ ದೂರುಗಳಿವೆ. ಈ ಬಗ್ಗೆ ಕ್ರಮ ವಹಿಸಬೇಕೆಂದಾಗ ಸಚಿವರು ಇದನ್ನು ಪರಿಶೀಲಿಸಿ ಕ್ರಮ ವಹಿಸಲು ಮತ್ತು ಚಿಗಟೇರಿ ಆಸ್ಪತ್ರೆಯಲ್ಲಿ ಸಿಬ್ಬಂದಿಯವರು ಮೊಬೈಲ್ ಕರೆ ಮಾಡಿದಾಗ ಜನಪ್ರತಿನಿಧಿಗಳು ಮಾತನಾಡುತ್ತಾರೆ ಎಂದು ಜನರು ಹೇಳಿದರೂ ಸೌಜನ್ಯಯುತವಾಗಿ ವರ್ತಿಸುವುದಿಲ್ಲ ಎಂದಾಗ ಸಚಿವರು ಎಲ್ಲಾ ಸಿಬ್ಬಂದಿಗಳ ಜೊತೆಗೆ ಚಿಗಟೇರಿ ಆಸ್ಪತ್ರೆಯಲ್ಲಿ ಸಭೆ ಮಾಡಿ ನಿರ್ದೇಶನ ನೀಡಲಾಗುತ್ತದೆ ಎಂದರು. ಹರಿಹರ ಶಾಸಕರಾದ ಬಿ.ಪಿ.ಹರೀಶ್ ಅವರು ಉಕ್ಕಡಗಾತ್ರಿಯಲ್ಲಿ ಮಾನಸಿಕವಾಗಿ ನೊಂದವರು ಹೆಚ್ಚು ಜನರು ಬರುತ್ತಾರೆ, ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಖಾಯಂ ವೈದ್ಯರನ್ನು ನೇಮಕ ಮಾಡಲು ತಿಳಿಸಿದಾಗ ಖಾಯಂ ವೈದ್ಯರನ್ನು ನೇಮಕ ಮಾಡಲಾಗಿದೆ ಎಂದು ಆರೋಗ್ಯಾಧಿಕಾರಿಯವರು ತಿಳಿಸಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಡಾ; ವೆಂಟಕೇಶ್ ಎಂ.ವಿ, ಜಿಲ್ಲಾ ರಕ್ಷಣಾಧಿಕಾರಿ ಉಮಾ ಪ್ರಶಾಂತ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ.ಇಟ್ನಾಳ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top