ದಾವಣಗೆರೆ: ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರ ಕಲ್ಲೇಶ್ವರ ಮಿಲ್ ಫಾರ್ಮ್ ಹೌಸ್ ಮೇಲೆ ಕೇಂದ್ರ ಅಪರಾಧ ವಿಭಾಗ ಬೆಂಗಳೂರು (ಸಿಸಿಬಿ) ಪೊಲೀಸರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಜಂಟಿಯಾಗಿ ದಾಳಿ ಮಾಡಿದೆ. ಈ ದಾಳಿ ಮೇಳೆ ಅಕ್ರಮವಾಗಿ ವನ್ಯಜೀವಿಗಳು ಸಾಕಾಣಿಕೆ ಮಾಡಿರುವುದು ಪತ್ತೆಯಾಗಿದೆ.
ದಾಳಿ ವೇಳೆ ಏಳು ಚುಕ್ಕೆ ಜಿಂಕೆಗಳು, 10 ಕೃಷ್ಣಮೃಗಗಳು, ಏಳು ಕಾಡುಹಂದಿಗಳು, ಮೂರು ಮುಂಗುಸಿಗಳು, ಎರಡು ನರಿಗಳು ಪತ್ತೆಯಾಗಿವೆ. ಈ ವನ್ಯ ಜೀವಿಗಳನ್ನು ರಕ್ಷಣೆ ಮಾಡಿ ಅರಣ್ಯ ಇಲಾಖೆಗೆ ಒಪ್ಪಿಸಲಾಗಿದೆ.ಬೆಂಗಳೂರು ಹೆಬ್ಬಾಳದಲ್ಲಿ ಡಿ.18ರಂದು ಜಿಂಕೆ ಚರ್ಮ, ಕೊಂಬು, ಮೂಳೆ ಮಾರಾಟ ಮಾಡಲು ಬಂದಿದ್ದ ಸೆಂಥಿಲ್ ಎಂಬ ಆರೋಪಿಯನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾಗ ದಾವಣಗೆರೆಯಿಂದ ಚರ್ಮ ತಂದಿರುವುದಾಗಿ ಮಾಹಿತಿ ನೀಡಿದ್ದಾನೆ. ಈ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಅನುಮತಿ ಪಡೆಯದೇ ವನ್ಯ ಜೀವಿಗಳನ್ನು ಸಾಕಿರುವುದು ಪತ್ತೆಯಾಗಿದೆ.
ಈ ವನ್ಯ ಜೀವಿಗಳ ಚರ್ಮ , ಕೊಂಬು, ಮೂಳೆಗಳನ್ನು ಮಲ್ಲಿಕಾರ್ಜುನ ಫಾರ್ಮ್ ಹೌಸ್ ಕಾರ್ಮಿಕರು ಮಾರಾಟ ಮಾಡಿದ್ದಾರೆ. ಫಾರ್ಮ್ ಹೌಸ್ ನಲ್ಲಿ ವನ್ಯಜೀವಿಗಳನ್ನು ಸಾಕಲು ಯಾವುದೇ ಪರವಾನಗಿ ಪಡೆದಿರುವ ದಾಖಲೆ ಸಿಕ್ಕಿಲ್ಲ.ಸಿಸಿಬಿ ಪೊಲೀಸರು ಬೆಂಗಳೂರಲ್ಲಿ ಪತ್ತೆಯಾಗಿದ್ದ ಸೆಂಥಿಲ್ ಆರೋಪಿಯನ್ನು ದಾವಣಗೆರೆ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಫಾರ್ಮ್‌ನಲ್ಲಿದ್ದ ಕಾರ್ಮಿಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಯಿತು. ಪ್ರಕರಣವನ್ನು ಸ್ಥಳೀಯ ಅರಣ್ಯ ಇಲಾಖೆಗೆ ವಹಿಸಲಾಗಿದೆ.
ಫಾರ್ಮ್ ಹೌಸ್‌ನಲ್ಲಿ ಪತ್ತೆಯಾಗಿರುವ ವನ್ಯಜೀವಿಗಳನ್ನು ಈಗಾಗಲೇ ಇಲಾಖೆಯ ವಶಕ್ಕೆ ಪಡೆಯಲಾಗಿದ್ದು, ಸಂರಕ್ಷಣೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ವನ್ಯಜೀವಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಳ್ಳಲಾಗಿದೆ ಎಂದು ದಾವಣಗೆರೆ ಪ್ರಾದೇಶಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಮಾಹಿತಿ ನೀಡಿದ್ದಾರೆ.



